ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಯಕ್ಷ ಗುರು ಬನ್ನಂಜೆ ಸಂಜೀವ ಸುವರ್ಣ ಸೇರಿದಂತೆ 19 ಮಂದಿ ಸಾಧಕರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಕೊಡಮಾಡುವ 2023ನೇ ಸಾಲಿನ ಪ್ರಶಸ್ತಿಗಳು, ಇಬ್ಬರು ಸಾಧಕರಿಗೆ 2022ನೇ ಸಾಲಿನ ಪ್ರಶಸ್ತಿ, ಒಬ್ಬರಿಗೆ 2021ನೇ ಸಾಲಿನ ಪ್ರಶಸ್ತಿಯನ್ನು ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಪ್ರದಾನ ಮಾಡಲಾಯಿತು.2023ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಯನ್ನು ಬನ್ನಂಜೆ ಸಂಜೀವ ಸುವರ್ಣ ಅವರಿಗೆ ಪ್ರದಾನ ಮಾಡಿದರೆ, ಭಾಗವತ ದಿನೇಶ್ ಅಮ್ಮಣ್ಣಾಯ, ಹಿರಿಯ ಕಲಾವಿದರಾದ ನಾರಾಯಣಪ್ಪ ಎ.ಆರ್., ಜಬ್ಬಾರ್ ಸಮೋ, ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಚೆನ್ನಪ್ಪ ಗೌಡ ಸಜಿಪ ಅವರು ಗೌರವ ಪ್ರಶಸ್ತಿ ಸ್ವೀಕರಿಸಿದರು.
ಯಕ್ಷಸಿರಿ ಪ್ರಶಸ್ತಿಯನ್ನು ರಘುನಾಥ ಶೆಟ್ಟಿ ಬಾಯಾರು, ದಿವಾಕರ ದಾಸ ಕಾವಳಕಟ್ಟೆ, ಸುಬ್ರಾಯ ಪಾಟಾಳಿ ಸಂಪಾಜೆ, ನರಾಡಿ ಭೋಜರಾಜ ಶೆಟ್ಟಿ, ಸದಾನಂದ ಪ್ರಭು, ಹೊಳೆಮಗೆ ನಾಗಪ್ಪ ಮರಕಾಲ, ಶಿರಳಗಿ ತಿಮ್ಮಪ್ಪ ಹೆಗಡೆ, ಬಾಬು ಕುಲಾಲ್ ಹಳ್ಳಾಡಿ, ಶಿವಯ್ಯ, ಜೀಯಪ್ಪ ಅವರಿಗೆ ಪ್ರದಾನ ಮಾಡಲಾಯಿತು. ದಿ. ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿಯನ್ನು ಗೋಪಾಲಕೃಷ್ಣ ಶಂಕರ ಭಟ್ ಜೋಗಿಮನೆ, 2022 ಮತ್ತು 2023ನೇ ಸಾಲಿನ ಪುಸ್ತಕ ಬಹುಮಾನವನ್ನು ವಿದ್ವಾನ್ ಗಣಪತಿ ಭಟ್, ಡಾ.ಮನೋರಮಾ ಬಿ.ಎನ್., ಡಾ. ಸತೀಶ್ ಜಿ.ನಾಯ್ಕ, ಎಚ್. ಸುಜಯೀಂದ್ರ ಹಂದೆ ಅವರಿಗೆ, 2021ನೇ ಸಾಲಿನ ಪುಸ್ತಕ ಬಹುಮಾನವನ್ನು ಪೊಳಲಿ ನಿತ್ಯಾನಂದ ಕಾರಂತ ಅವರಿಗೆ ನೀಡಿ ಗೌರವಿಸಲಾಯಿತು.ಸಮಾರಂಭದ ಮುಖ್ಯ ಅತಿಥಿ, ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಅನೇಕ ಮಹನೀಯರು ಯಕ್ಷಗಾನಕ್ಕಾಗಿ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಅಂಥವರನ್ನು ಗುರುತಿಸಿ ಗೌರವಿಸುವ ಮೂಲಕ ಅಕಾಡೆಮಿಯು ಪ್ರೇರಣಾದಾಯಿ ಕೆಲಸ ಮಾಡಿದೆ. ಇಂತಹ ಕಾರ್ಯಕ್ರಮಗಳು ಕಲಾ ಪ್ರೇಮಿಗಳಿಗೆ ಸಂತಸ ತಂದಿದೆ ಎಂದರು.
ಕೊರೋನಾ ಸಮಯದಲ್ಲಿ ಕಲಾವಿದರ ಸಂಕಷ್ಟಗಳನ್ನು ನೋಡಿದ್ದೇವೆ. ಇದೀಗ ಯಕ್ಷಗಾನ ಅಕಾಡೆಮಿಯ ಮೂಲಕ ಕಲಾವಿದರಿಗೆ ಶಕ್ತಿ ನೀಡುವ ಕೆಲಸ ಆಗಬೇಕಿದೆ. ಅದಕ್ಕಾಗಿ ತಾನು ಸಹಕಾರ ನೀಡುವುದಾಗಿ ಕಾಮತ್ ತಿಳಿಸಿದರು.ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಯಕ್ಷಗಾನ ಅಕಾಡಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ, ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್, ಕೊಡವ ಅಕಾಡಮಿ ಅಧ್ಯಕ್ಷ ಮಹೇಶ್ ನಾಚಯ್ಯ, ಗ್ಯಾರಂಟಿ ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಯಕ್ಷಗಾನ ಅಕಾಡಮಿ ರಿಜಿಸ್ಟ್ರಾರ್ ನಮ್ರತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಇದ್ದರು.