ಯಕ್ಷಗಾನ ಸರ್ವಾಂಗ ಸುಂದರ ಕಲೆ: ಪುತ್ತಿಗೆ ಶ್ರೀ

| Published : Jun 15 2024, 01:08 AM IST

ಸಾರಾಂಶ

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ಪುತ್ತಿಗೆ ಮಠದ ಸ್ವಾಮೀಜಿಯವರು ಸ್ಮರಣಿಕೆ, ಶಾಲು, ಅಭಿನಂದನಾ ಪತ್ರ ನೀಡಿ ಹರಸಿದರು. ಸುಬ್ರಹ್ಮಣ್ಯ ಬೈಪಡಿತ್ತಾಯರು ಬರೆದ ಆಗಸದ ಬೆಳಕು ಪುಸ್ತಕವನ್ನು ಶ್ರೀಪಾದರು ಲೋಕಾರ್ಪಣೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಯಕ್ಷಗಾನ ಕಲೆ ಎಲ್ಲ ಅಂಗಗಳನ್ನು ಹೊಂದಿರುವ ಪರಿಪೂರ್ಣ ಕಲಾ ಪ್ರಕಾರ. ಅದನ್ನು ಪ್ರಸ್ತುತ ಪಡಿಸುವ ಕಲಾವಿದರು ಸಮಾಜಕ್ಕೆ ಪುರಾಣದ ಸಂದೇಶವನ್ನು ತಿಳಿಸುವ ಶ್ರೇಷ್ಠ ವಿದ್ವಾಂಸರು. ಯಕ್ಷಗಾನ ಕಲಾರಂಗ ಮಾಡುತ್ತಿರುವ ಸಮಾಜಮುಖಿ ಕೆಲಸ ಅನನ್ಯ ಮತ್ತು ಅಗಾಧ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.

ಅವರು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗ ಆಯೋಜಿಸಿದ ೨೫ನೇ ವರ್ಷದ ಕಲಾವಿದರ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರೂ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ಸ್ವಾಮೀಜಿಯವರು ಸ್ಮರಣಿಕೆ, ಶಾಲು, ಅಭಿನಂದನಾ ಪತ್ರ ನೀಡಿ ಹರಸಿದರು.

ಸುಬ್ರಹ್ಮಣ್ಯ ಬೈಪಡಿತ್ತಾಯರು ಬರೆದ ಆಗಸದ ಬೆಳಕು ಪುಸ್ತಕವನ್ನು ಶ್ರೀಪಾದರು ಲೋಕಾರ್ಪಣೆಗೊಳಿಸಿದರು.

ಇತ್ತೀಚೆಗೆ ನಿಧನರಾದ ಪುತ್ತೂರು ಗಂಗಾಧರ ಜೋಗಿಯವರ ಧರ್ಮಪತ್ನಿಗೆ ಸಾಂತ್ವನ ನಿಧಿಯನ್ನು ನೀಡಲಾಯಿತು. ೨೧ ಜನ ಕಲಾವಿದರಿಗೆ ತಲಾ ಹತ್ತು ಸಾವಿರದಂತೆ ಗೃಹ ನಿರ್ಮಾಣದ ಉಡುಗೊರೆ ಹಾಗೂ ೭ ಮಂದಿ ಕಲಾವಿದರಿಗೆ ವೈದ್ಯಕೀಯ ನೆರವು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ವೃತ್ತಿಮೇಳದ ಕಲಾವಿದರಿಗೆ ತಮ್ಮ ಹೋಟೆಲ್‌ನಲ್ಲಿ ಉಚಿತವಾಗಿ ಉಪಹಾರ ನೀಡಿ ಪ್ರೋತ್ಸಾಹಿಸುತ್ತಾ ಬಂದ ಆಗುಂಬೆಯ ಗುರುರಾಜ ಅಡಿಗ ಮತ್ತು ಕೊಕ್ಕರ್ಣೆಯ ಕೆ.ಎಸ್. ಶ್ರೀನಿವಾಸ ನಾಯಕ್ ಅವರನ್ನು ಶ್ರೀಪಾದರು ಗೌರವಿಸಿದರು.

ವೇದಿಕೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಡಾ. ಎಂ. ಪ್ರಭಾಕರ ಜೋಶಿ, ಆನಂದ ಸಿ. ಕುಂದರ್, ಪಿ. ಪುರುಷೋತ್ತಮ ಶೆಟ್ಟಿ, ಬೆಳ್ವೆ ಗಣೇಶ್ ಕಿಣಿ, ಸುರೇಶ್ ನಾಯಕ್ ಕುಯಿಲಾಡಿ, ಸಿಎ ಗಣೇಶ್ ಕಾಂಚನ್, ಹರಿಯಪ್ಪ ಕೋಟ್ಯಾನ್ ಅಭ್ಯಾಗತರಾಗಿ ಭಾಗವಹಿಸಿದ್ದರು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಎಚ್.ಎನ್. ಶೃಂಗೇಶ್ವರ ಸಹಕರಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.