ಯಲ್ಲಾಪುರ: ಯಕ್ಷಗಾನ, ತಾಳಮದ್ದಲೆಯಲ್ಲಿ ತೊಡಗಿಸಿಕೊಂಡರೆ ಮಾತಿನ ಸಂಸ್ಕಾರ, ಪ್ರಬುದ್ಧತೆ ಹಾಗೂ ಶಿಸ್ತನ್ನು ರೂಢಿಸಿಕೊಳ್ಳಬಹುದು ಎಂದು ಹಿರಿಯ ಅರ್ಥಧಾರಿ ವೇ. ರಾಮಕೃಷ್ಣ ಭಟ್ಟ ಮಾಗೋಡ ಹೇಳಿದರು.

ಅವರು ತಾಲೂಕಿನ ಮಾಗೋಡ ಸಮೀಪದ ಕರಡಿಪಾಲಿನಲ್ಲಿ ಸಿದ್ಧಿವಿನಾಯಕ ಯಕ್ಷಕಲಾ ಕೂಟ- ಅರ್ಥಗಾರಿಕೆ ಕಲಿಕಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಯಾವ ಸೌಕರ್ಯ, ವ್ಯವಸ್ಥೆಗಳಿಲ್ಲದ ಕಾಲದಲ್ಲಿ ಶ್ರದ್ಧೆಯಿಂದ ಈ ಕಲೆಯನ್ನು ನಮ್ಮ ಹಿರಿಯರು ಮುಂದುವರಿಸಿಕೊಂಡು ಬಂದಿದ್ದಾರೆ. ಅದನ್ನು ಅನುಸರಿಸುತ್ತ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಹೊಣೆ ನಮ್ಮದು ಎಂದರು.

ಕೇಂದ್ರದ ಶಿಕ್ಷಕ ನರಸಿಂಹ ಭಟ್ಟ ಕುಂಕಿಮನೆ ಮಾತನಾಡಿ, ಸಂಪೂರ್ಣ ಕನ್ನಡದಲ್ಲಿ ಪ್ರದರ್ಶಲ್ಪಡುವ ಏಕೈಕ ಕಲೆ ಯಕ್ಷಗಾನ. ಅರ್ಥಗಾರಿಕೆ ಕಲಿಯಲು ಬಂದ ಎಲ್ಲರೂ ಕಲಾವಿದರಾಗಲು ಸಾಧ್ಯವಿಲ್ಲ. ಆದರೆ ಸುಸಂಸ್ಕೃತ ಮಾತುಗಾರಿಕೆ, ಭಾಷಾ ಜ್ಞಾನವನ್ನು ಖಚಿತವಾಗಿ ಹೊಂದುತ್ತಾರೆ. ಇದು ಶೈಕ್ಷಣಿಕ ಸಾಧನೆಗೂ ಸಹಕಾರಿಯಾಗುತ್ತದೆ ಎಂದರು.

ಶಿಕ್ಷಕ ವಿ.ಪಿ. ಭಟ್ಟ ಕೋಣೆಮನೆ ಮಾತನಾಡಿ, ಶಾಲೆಯ ಪಠ್ಯ ಕೇವಲ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಯಕ್ಷಗಾನದಂತಹ ಕಲೆ ಜೀವನ ಶಿಕ್ಷಣ ಕಲಿಸುತ್ತದೆ. ವಿದ್ಯಾರ್ಥಿಗಳು ಕೇವಲ ಓದಿಗೆ ಸೀಮಿತರಾಗದೇ ಇಂತಹ ಕಲೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.


ಟಿಎಂಎಸ್ ನಿರ್ದೇಶಕ ವೆಂಕಟರಮಣ ಭಟ್ಟ ಕಿರಕುಂಭತ್ತಿ ಮಾತನಾಡಿ, ಪೌರಾಣಿಕ ಜ್ಞಾನ, ಸಂಸ್ಕಾರ ಹೊಂದಲು ಸಹಕಾರಿಯಾಗುವ ತಾಳಮದ್ದಲೆಯ ಅರ್ಥಗಾರಿಕೆಯನ್ನು ಮಕ್ಕಳು ರೂಢಿಸಿಕೊಂಡರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಆ ದೃಷ್ಟಿಯಿಂದ ಕೇಂದ್ರ ಆರಂಭಿಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ ಮಾತನಾಡಿ, ಶತಮಾನಗಳ ಇತಿಹಾಸ ಹೊಂದಿದ ಯಕ್ಷಗಾನ ಕಲೆಗೆ ಎಂದಿಗೂ ಅಳಿವಿಲ್ಲ. ಇತ್ತೀಚಿನ ವರ್ಷಗಳಲ್ಲಿ ಯುವಕರು ಹೆಚ್ಚು ಆಸಕ್ತಿಯಿಂದ ಯಕ್ಷಗಾನದತ್ತ ಬರುತ್ತಿದ್ದಾರೆ. ಕಲೆಯ ಪರಂಪರೆಯನ್ನು ಉಳಿಸಿಕೊಂಡು, ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುವ ಕಾರ್ಯ ಹಿಂದಿನಿಂದ ನಡೆದುಕೊಂಡು ಬಂದಿದೆ. ಅದು ನಿರಂತರವಾಗಿ ಮುಂದುವರಿಯಲು ಇಂತಹ ಕೇಂದ್ರಗಳು ವೇದಿಕೆಯಾಗುತ್ತವೆ ಎಂದರು.

ಪತ್ರಕರ್ತ ಶ್ರೀಧರ ಅಣಲಗಾರ, ಸಂಘಟಕ ನರಸಿಂಹ ಭಟ್ಟ ಕರಡಿಪಾಲ ಉಪಸ್ಥಿತರಿದ್ದರು. ಶ್ರೇಯಾ ಭಾಗ್ವತ ಭಾರತ ಮಾತೃಷ್ಟಕ ಪಠಿಸಿದರು. ಮಹಾಬಲೇಶ್ವರ ಭಟ್ಟ ಬೆಳಶೇರ ಹಾಗೂ ಸುಬ್ರಹ್ಮಣ್ಯ ಭಟ್ಟ ಚಂದಗುಳಿ ಗಣಪತಿ ಸ್ತುತಿ ಪ್ರಸ್ತುತಪಡಿಸಿದರು. ನರಸಿಂಹ ಭಟ್ಟ ಮೇಲಿನಕುಂಕಿ ಸ್ವಾಗತಿಸಿದರು. ಮಾಲತಿ ಭಟ್ಟ ನಿರ್ವಹಿಸಿದರು. ಮಹಾಬಲೇಶ್ವರ ಭಟ್ಟ ವಂದಿಸಿದರು.