ಆಧುನಿಕತೆಯಿಂದ ಯಕ್ಷಗಾನ ಕಲೆಗೆ ಅಳಿವಿಲ್ಲ : ಡಾ.ನೀ.ಬೀ.ವಿಜಯ ಬಲ್ಲಾಳ್

| Published : Dec 12 2024, 12:31 AM IST

ಆಧುನಿಕತೆಯಿಂದ ಯಕ್ಷಗಾನ ಕಲೆಗೆ ಅಳಿವಿಲ್ಲ : ಡಾ.ನೀ.ಬೀ.ವಿಜಯ ಬಲ್ಲಾಳ್
Share this Article
  • FB
  • TW
  • Linkdin
  • Email

ಸಾರಾಂಶ

ಯಕ್ಷಗಾನ ಕಲೆ ಎಲ್ಲ ಏರುಪೇರುಗಳನ್ನು ಎದುರಿಸಿದರೂ ಗಟ್ಟಿಯಾಗಿ ಬೆಳೆದು ನಿಂತಿದೆ ಎಂದು ಡಾ. ನಿ.ಬೀ. ವಿಜಯ ಬಲ್ಲಾಳ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಯಕ್ಷಗಾನ ಕಲೆ ಎಲ್ಲಾ ಏರುಪೇರುಗಳನ್ನು ಎದುರಿಸಿದರೂ ಗಟ್ಟಿಯಾಗಿ ಬೆಳೆದು ನಿಂತಿದೆ. ಹವ್ಯಾಸಿ ಬಳಗ, ವೃತ್ತಿ ಮೇಳ ಕಲಾವಿದರು ಒಟ್ಟು ಸೇರಿ ಈ ಕಲೆಯನ್ನು ಬೆಳೆಸಿದ್ದಾರೆ. ಮೊಬೈಲ್ ಯುಗದಲ್ಲೂ ಯಕ್ಷಗಾನಕ್ಕೆ ತನ್ನದೇ ಆದ ಪ್ರೇಕ್ಷಕ ವೃಂದವಿರುವುದು ಈ ಕಲೆಯ ಉಳಿವು ಬೆಳವಣಿಗೆಗೆ ಪೂರಕವಾಗಿದೆ ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್ ಹೇಳಿದರು.

ಅವರು ಭಾನುವಾರ ಕೊಡವೂರು ಶಂಕರ ನಾರಾಯಣ ದೇವಳದ ವಸಂತ ಮಂಟಪದಲ್ಲಿ ನಡೆದ ಯಕ್ಷ ಆರಾಧನಾ ಕಿದಿಯೂರು ಟ್ರಸ್ಟ್‌ನ ದ್ವಿತೀಯ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ಜನಾಕರ್ಷಣೆಗಾಗಿ ಕೆಲವರು ಯಕ್ಷಗಾನದಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದರೂ, ಜನ ಸ್ವೀಕರಿಸಿಲ್ಲ. ಹೀಗಾಗಿ ಪರಂಪರಾಗತ ಯಕ್ಷಗಾನ ಕಲೆಗೆ ಅಳಿವಿಲ್ಲ. ಇದು ಈ ಕಲೆಯ ಶ್ರೇಷ್ಠತೆ. ಇದು ನೂರಾರು ಮಂದಿಯ ಜೀವಾನಾಧಾರವಾಗಿರುವುದು ಹೌದು ಎಂದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ಯಕ್ಷಗಾನದಂತಹ ಕಲೆ ಪೀಳಿಗೆಯಿಂದ ಪೀಳಿಗೆಗೆ ದಾಟುತ್ತಿರುವುದಕ್ಕೆ ಈ ವೇದಿಕೆ ಸಾಕ್ಷಿಯಾಗಿದೆ. ಈ ನಿಟ್ಟಿನಲ್ಲಿ ಕೆ.ಜೆ.ಗಣೇಶ್ ಸಹೋದರರು ತಮ್ಮ ಆರಾಧನಾ ಟ್ರಸ್ಟ್ ಮೂಲಕ ಯಕ್ಷಗಾನ ಕಲೆಯನ್ನು ಸಾಂಪ್ರಾದಾಯಿಕವಾಗಿ ಬೆಳೆಸುತ್ತಿರುವುದು ಸಂತೋಷ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಯಕ್ಷ ಸಂಘಟಕ ಭುವನಪ್ರಸಾದ್ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಸಂದರ್ಭೋಚಿತವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಯಕ್ಷಗಾನ ಗುರು ಪ್ರಭಾಕರ ಆಚಾರ್ಯ ಇಂದ್ರಾಳಿ ಅವರಿಗೆ ‘ಯಕ್ಷ ಆರಾಧನಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಯಕ್ಷ ಆರಾಧನಾ ಕಿದಿಯೂರು ಟ್ರಸ್ಟ್ ನ ಟ್ರಸ್ಟಿಗಳಾದ ಕೆ.ಜೆ.ಗಣೇಶ್, ಕೆ.ಜೆ.ಕೃಷ್ಣ ಹಾಗೂ ಕೆ.ಜೆ.ಸುಧೀಂದ್ರ ಮತ್ತಿತರರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಟ್ರಸ್ಟ್ ನಿಂದ ಶಿಕ್ಷಣ ಪಡೆದ ಸದಸ್ಯರಿಂದ ‘ಶಿವ ಪಂಚಾಕ್ಷರಿ ಮಹಿಮೆ’ ಯಕ್ಷಗಾನ ಪ್ರಸಂಗದ ಪ್ರದರ್ಶನ ನಡೆಯಿತು.