ಯಕ್ಷಗಾನ ಕಲೆಯು ಕರಾವಳಿಯಾದ್ಯಂತ ಗಟ್ಟಿಯಾಗಿ ನೆಲೆ ನಿಂತಿದ್ದರೆ ಅದಕ್ಕೆ ಸದಾ ಕಾಲ ಪ್ರೋತ್ಸಾಹಿಸುತ್ತಿರುವ ಹಲವು ಯಕ್ಷ ಸಂಘಟನೆಗಳು, ಸಂಘಟಕರು ಕೂಡ ಕಾರಣ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪುತ್ತೂರು : ಯಕ್ಷಗಾನ ಕಲೆಯು ಕರಾವಳಿಯಾದ್ಯಂತ ಗಟ್ಟಿಯಾಗಿ ನೆಲೆ ನಿಂತಿದ್ದರೆ ಅದಕ್ಕೆ ಸದಾ ಕಾಲ ಪ್ರೋತ್ಸಾಹಿಸುತ್ತಿರುವ ಹಲವು ಯಕ್ಷ ಸಂಘಟನೆಗಳು, ಸಂಘಟಕರು ಕೂಡ ಕಾರಣ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಆವರಣದಲ್ಲಿ ಯಕ್ಷ ಮಿತ್ರರು ಬೆಂಗಳೂರು ಟ್ರಸ್ಟ್ ವತಿಯಿಂದ ಹಿರಿಯ ಯಕ್ಷಗಾನ ತಾಳಮದ್ದಳೆ ಕಲಾವಿದ ಹರೀಶ್ ಬಳಂತಿಮೊಗರು ಅವರ ಸನ್ಮಾನ ಕಾರ್‍ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಇತರ ಎಲ್ಲಾ ಕಲೆಗಿಂತ ಹೆಚ್ಚಿನ ಪ್ರೋತ್ಸಾಹವಿಂದು ಯಕ್ಷಗಾನಕ್ಕೆ ಈ ನಮ್ಮ ಸೀಮಿತ ಪ್ರದೇಶದಲ್ಲಿ ಸಿಗುತ್ತಿದೆ. ಯಕ್ಷಮಿತ್ರರು ಬೆಂಗಳೂರು ಸಂಘಟನೆಯಿಂದ ಶ್ಲಾಘನೀಯ ಕಾರ್ಯನಡೆಯುತ್ತಿದೆ, ಯಕ್ಷಗಾನ ಕಲಾವಿದರೂ ಕೂಡಾ ಯಕ್ಷಾಭಿಮಾನಿಗಳ ವಿಶ್ವಾಸವನ್ನು ಉಳಿಸಿಕೊಂಡು ಬರುವುದು ಮುಖ್ಯ ಎಂದೂ ನುಡಿದರು.ಸಮ್ಮಾನ ಸ್ವೀಕರಿಸಿ ಮಾತನಾಡಿದ ಕಲಾವಿದ ಹರೀಶ್ ಬಳಂತಿಮೊಗರು ಅವರು, ಸಮ್ಮಾನ ಎನ್ನುವುದು ನನಗಲ್ಲ. ಅದು ನನ್ನಲ್ಲಿ ಇರುವ ಕಲೆಗೆ. ಕಲೆ ಎನ್ನುವುದನ್ನು ಮುಂದಿನ ಜನಾಂಗಕ್ಕೆ ದಾಟಿಸುವುದಕ್ಕೆ ಭಗವಂತ ಇದೊಂದು ಅವಕಾಶ ಕೊಟ್ಟಿದ್ದಾನೆ ಎಂದು ಭಾವ ಕಲಾವಿದರಲ್ಲಿ ಇರಬೇಕು. ಹಾಗಿದ್ದರೆ ಕಲೆಗೆ ಸರಿಯಾದ ನ್ಯಾಯ ಸಲ್ಲಿಸಲು ಸಾಧ್ಯ. ಕಲೆ ನಮ್ಮನ್ನು ಪುನೀತರನ್ನಾಗಿ, ಸಜ್ಜನರನ್ನಾಗಿ ಮಾಡಲಿ ಎಂದು ಆಶಿಸಿದರು.
ಯಕ್ಷಮಿತ್ರರು ಬೆಂಗಳೂರು ಗೌರವಾಧ್ಯಕ್ಷ ಆರ್.ಕೆ. ಬೆಳ್ಳಾರೆ, ಕುಂಟ್ಯಾನ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಣಪ್ಪ ಮೂಲ್ಯ, ಆಡಳಿತ ಮೊಕ್ತೇಸರ ರಾಘವೇಂದ್ರ ಮಯ್ಯ, ಗ್ರಾಮದ ಹಿರಿಯರಾದ ರಾಜಶೇಖರ ಜೈನ್ ನೀರ್ಪಾಜೆ ಉಪಸ್ಥಿತರಿದ್ದರು. ಯಕ್ಷ ಮಿತ್ರರು ಟ್ರಸ್ಟ್ ಸಂಚಾಲಕ ಶ್ಯಾಮಸೂರ್ಯ ಮುಳಿಗದ್ದೆ ಪ್ರಸ್ತಾವಿಸಿದರು, ರಶ್ಮಿ ಕೆ. ನಿರೂಪಿಸಿದರು.ಇದೇ ವೇಳೆ ಹನುಮಗಿರಿ ಮೇಳದವರಿಂದ ದಮಯಂತಿ ಪುನಃಸ್ವಯಂವರ, ಗದಾಯುದ್ಧ, ರಕ್ತರಾತ್ರಿ ಯಕ್ಷಗಾನ ಪ್ರದರ್ಶನ ನಡೆಯಿತು.