ತೆಂಕುತಿಟ್ಟು ಯಕ್ಷಗಾನ ರಂಗದ ಮೇರು ಕಲಾವಿದ, ಆಟ-ಕೂಟಗಳ ಸರದಾರ, ಯಕ್ಷರಂಗದ ಸವ್ಯಸಾಚಿ ಸೂರಿಕುಮೇರು ಗೋವಿಂದ ಭಟ್ (88) ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ತೀರ್ಥಹಳ್ಳಿಯ ತಮ್ಮ ಹಿರಿಯ ಪುತ್ರನ ನಿವಾಸದಲ್ಲಿ ನಿಧನಹೊಂದಿದರು. ಅವರು ಮೂವರು ಪುತ್ರರನ್ನು ಅಗಲಿದ್ದಾರೆ.
ಬಂಟ್ವಾಳ: ತೆಂಕುತಿಟ್ಟು ಯಕ್ಷಗಾನ ರಂಗದ ಮೇರು ಕಲಾವಿದ, ಆಟ-ಕೂಟಗಳ ಸರದಾರ, ಯಕ್ಷರಂಗದ ಸವ್ಯಸಾಚಿ ಸೂರಿಕುಮೇರು ಗೋವಿಂದ ಭಟ್ (88) ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ತೀರ್ಥಹಳ್ಳಿಯ ತಮ್ಮ ಹಿರಿಯ ಪುತ್ರನ ನಿವಾಸದಲ್ಲಿ ನಿಧನಹೊಂದಿದರು. ಅವರು ಮೂವರು ಪುತ್ರರನ್ನು ಅಗಲಿದ್ದಾರೆ.ಯಕ್ಷಗಾನ ಕ್ಷೇತ್ರದ ‘ನಡೆದಾಡುವ ವಿಶ್ವಕೋಶ’, ‘ದಶಾವತಾರಿ’ ಎಂದೇ ಖ್ಯಾತರಾಗಿದ್ದ ಸೂರಿಕುಮೇರಿ ಕೆ. ಗೋವಿಂದ ಭಟ್ ತೆಂಕುತಿಟ್ಟು ಯಕ್ಷಗಾನ ಇದುವರೆಗೆ ಕಂಡ ಸರ್ವಶ್ರೇಷ್ಠ ಕಲಾವಿದರೆನಿಸಿಕೊಂಡಿದ್ದರು. ಅವರು ಯಕ್ಷಗಾನ ಗುರುಗಳೂ ಆಗಿದ್ದರು.ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು 70 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು, ಧರ್ಮಸ್ಥಳ ಯಕ್ಷಗಾನ ಮೇಳದ ಪ್ರಮುಖ ಕಲಾವಿದರಾಗಿ, ಒಂದೇ ಮೇಳದಲ್ಲಿ 54 ವರ್ಷಗಳಿಗೂ ಹೆಚ್ಚು ಕಾಲ ತಿರುಗಾಟ ನಡೆಸಿ ದಾಖಲೆ ಮೆರೆದವರು. ಜೊತೆಗೆ ಮೂಲ್ಕಿ, ಕೂಡ್ಲು, ಸುರತ್ಕಲ್ (ಕೆಳಗಿನ ಮಾರಿಗುಡಿ) ಇರಾ ಸೋಮನಾಥೇಶ್ವರ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ. ಕೌರವ, ರಕ್ತಬೀಜ, ಇಂದ್ರಜಿತು, ಮಾಗಧ, ಕರ್ಣ, ಅತಿಕಾಯ ನರಕಾಸುರ, ತಾಮ್ರಾಕ್ಷ , ಹಿರಣ್ಯಕಶಿಪು, ದೇವೇಂದ್ರ, ಅರ್ಜುನ , ಹನುಮಂತ, ಭೀಷ್ಮ, ಬಾಹುಬಲಿ, ವಿಶ್ವಾಮಿತ್ರ ಅವರಿಗೆ ಹೆಸರು ತಂದು ಕೊಟ್ಟ ಪಾತ್ರಗಳಾಗಿವೆ. ಛಂದೋಬದ್ಧವಾದ ಮಾತಿನ ಜತೆಗೆ ನೃತ್ಯದಲ್ಲೂ ಪ್ರಾವೀಣ್ಯ ಪಡೆದಿದ್ದರು. ಅವರಿಗೆ 2008ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2016ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತ್ ಪುರಸ್ಕಾರ, ಕರ್ನಾಟಕ ಜಾನಪದ ಅಕಾಡೆಮಿ ಸಾಧನಾ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಗೌರವ ಸನ್ಮಾನಗಳು ದೊರೆತಿವೆ.
ಮಣಿ ಮೇಖಲೆ, ಕನಕ ರೇಖೆ, ಕಾವೇರಿ ಮಹಾತ್ಮೆ, ಮೂರುವರೆ ವಜ್ರಗಳು ರಾಜಶೇಖರ ವಿಲಾಸ, ಮಹಾವೀರ ಸಾಮ್ರಾಟ ಅಶೋಕ, ನಹುಷೇಂದ್ರ ಎಂಬ ಏಳು ಯಕ್ಷ ಪ್ರಸಂಗಗಳನ್ನು ಅವರು ಬರೆದಿದ್ದಾರೆ. ಜಪಾನ್, ಅಬುದಾಬಿ, ಬಹ್ರೈನ್, ದುಬೈಗಳಲ್ಲಿ ಅವರು ಯಕ್ಷಗಾನ ಪ್ರದರ್ಶಿಸಿದ್ದಾರೆ. ದಿಲ್ಲಿಯಲ್ಲಿ ರಾಷ್ಟ್ರಪತಿ ಎದುರು ಯಕ್ಷಗಾನ ಪ್ರದರ್ಶಿಸಿದ್ದ ಖ್ಯಾತಿ ಗೋವಿಂದ ಭಟ್ಟರಿಗಿದೆ.‘ದಶಾವತಾರಿ’ ಎಂದೇ ಖ್ಯಾತಿ...ಯಕ್ಷಗಾನದಲ್ಲಿ ವಿವಿಧ ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸಿದ್ದರಿಂದ ಅವರಿಗೆ ‘ದಶಾವತಾರಿ’ ಎಂಬ ಬಿರುದು ದೊರಕಿದೆ.ಧರ್ಮಸ್ಥಳ ಯಕ್ಷಗಾನ ಕೇಂದ್ರ ನಲ್ಲಿ ಗುರುವಾಗಿ ಸೇವೆ ಸಲ್ಲಿಸಿ ಅನೇಕ ಶಿಷ್ಯರನ್ನು ತಯಾರಿಸಿದ್ದಾರೆ. ಸಾಹಿತ್ಯ ಮತ್ತು ರಚನೆಯಲ್ಲೂ ಮೇಲುಗೈ ಸಾಧಿಸಿದ್ದ ಇವರು15ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ.ಯಕ್ಷಗಾನದಲ್ಲಿ ಪಾತ್ರಾಭಿನಯ, ನೃತ್ಯ, ಸಂಭಾಷಣೆ ಎಲ್ಲದಲ್ಲೂ ನಿಪುಣತೆ ,ಯುವ ಕಲಾವಿದರನ್ನು ತರಬೇತಿ ನೀಡಿ ಪರಂಪರೆಯನ್ನು ಉಳಿಸಿದರು, ಯಕ್ಷಗಾನವನ್ನು ಜನರಿಗೆ ಇನ್ನಷ್ಟು ಹತ್ತಿರ ಮಾಡಿದರು.
ಅವರು ತೆಂಕು, ಬಡಗು ಎರಡೂ ತಿಟ್ಟುಗಳಲ್ಲಿ ಯಾವುದೇ ಪಾತ್ರವನ್ನಾದರೂ ಲೀಲಾಜಾಲವಾಗಿ ಮಾಡಬಲ್ಲವರಾಗಿದ್ದರು. ಅನಿವಾರ್ಯ ಸ್ಥಿತಿಯಲ್ಲಿ ಭಾಗವತ, ಚೆಂಡೆಗಾರ, ಮದ್ದಳೆಗಾರನಾಗಿಯೂ ಹಿಮ್ಮೇಳದಲ್ಲಿ ಕೆಲಸ ನಿಭಾಯಿಸಿದ್ದರು. ಮೇಳದ ಮ್ಯಾನೇಜರ್ ಇಲ್ಲದ ಕಾಲದಲ್ಲಿ ಮ್ಯಾನೇಜರ್ ಆಗಿಯೂ ಕಾರ್ಯವಹಿಸಿದ್ದರು. ಅವರೊಬ್ಬ ಸರ್ವಾಂಗೀಣ ಪರಿಪೂರ್ಣ ಕಲಾವಿದ. ನಾಯಕ, ಪ್ರತಿನಾಯಕ, ರಕ್ಕಸ, ರಕ್ಕಸಿ, ಹಾಸ್ಯ, ಮಂತ್ರಿ, ಪುಂಡುವೇಷ ಹೀಗೆ ಎಲ್ಲ ವೇಷಗಳನ್ನು ಲೀಲಾಜಾಲವಾಗಿ ನಿಭಾಯಿಸಿದ್ದ ಯಕ್ಷರಂಗದ ಸವ್ಯಸಾಚಿ.ಗೋವಿಂದ ಭಟ್ಟರು ಜನಿಸಿದ್ದು 1938ರ ಮಾ.22ರಂದು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಬಳಿಯ ಕೋಡಪದವು ಕುಕ್ಕೆಮನೆಯಲ್ಲಿ. ಅವರದು ಕಡು ಬಡತನದ ಕುಟುಂಬವಾಗಿತ್ತು. ಲಕ್ಷ್ಮೀ ಅಮ್ಮ ಮತ್ತು ಕಿನಿಲ ಶಂಕರನಾರಾಯಣ ಭಟ್ಟರ ಐವರು ಮಕ್ಕಳಲ್ಲಿ ಗೋವಿಂದ ಭಟ್ಟರು ಮೂರನೆಯವರು. ಗೋವಿಂದ ಭಟ್ಟರ ಬಾಲ್ಯದ ಬದುಕು ವಸ್ತುಶಃ ಕಣ್ಣೀರ ಕತೆಯಾಗಿತ್ತು. ಹೊಟ್ಟೆಪಾಡಿಗಾಗಿ ಹೋಟೆಲ್‌ಗಳಲ್ಲಿ , ಮನೆಗಳಲ್ಲಿ ಕೆಲಸ ಮಾಡಿದ್ದರು. ಮದುವೆ, ಉಪನಯನ, ಶ್ರಾದ್ಧ ,ವರ್ಷಾಂತಿಕ, ಬೊಜ್ಜ, ಪೂಜೆ ಇತ್ಯಾದಿಗಳಿಗೆ ಪುರೋಹಿತರ ಜತೆ ತೆರಳುತ್ತಿದ್ದರು. ಅಲ್ಲಿ ಪುಷ್ಕಳ ಊಟ ದೊರೆಯುತ್ತಿತ್ತಾದರೂ ಇದು ಎಷ್ಟು ದಿನ ಎಂಬ ಪ್ರಶ್ನೆ ಕಾಡುತ್ತಿತ್ತು. ಬಳಿಕ ಶಿರಂಕಲ್ಲು ಕೃಷ್ಣ ಜೋಯಿಸರ ಸೂಚನೆಯಂತೆ ಅವರ ಮನೆಯಲ್ಲುಳಿದರು. ಅಲ್ಲಿ 2 ತಿಂಗಳು ದುಡಿದಾಗ ತಂದೆ ನಿಧನರಾದರು. ವಾಪಸ್ ಮನೆಗೆ ಮರಳಿದರು.ಕೆಲದಿನಗಳ ಬಳಿಕ ಗೋವಿಂದ ಭಟ್ಟರು ಧರ್ಮಸ್ಥಳಕ್ಕೆ ಹೋಗಿ ತನ್ನನ್ನು ಮೇಳಕ್ಕೆ ಸೇರಿಕೊಳ್ಳುವಂತೆ ವಿನಂತಿಸಿದರು. ಮೇಳದ ಸಂಚಾಲಕ ಕುರಿಯ ವಿಠ್ಠಲ ಶಾಸ್ತ್ರಿಗಳು ನವರಾತ್ರಿ ಕಾಲಕ್ಕೆ ಬಾರೆಂದು ಸಲಹೆ ನೀಡಿದರು. ಆ ಮಳೆಗಾಲದಲ್ಲಿ ಮಿತ್ತನಡ್ಕದಲ್ಲಿ ವಿಠ್ಠಲ ಶಾಸ್ತ್ರಿಗಳು ಯಕ್ಷಗಾನ ಶಿಕ್ಷಣ ನೀಡುವುದರೊಂದಿಗೆ ಪರಮಶಿವನ್ ಎಂಬವರಿಂದ ಭರತನಾಟ್ಯ ಕಲಿಸುವ ಏರ್ಪಾಡು ಮಾಡಿದ್ದರು. ಗೋವಿಂದ ಭಟ್ಟರು ಅವೆರಡೂ ಶಿಕ್ಷಣ ಪಡೆದುಕೊಂಡು ಧರ್ಮಸ್ಥಳ ಮೇಳಕ್ಕೆ ಸೇರ್ಪಡೆಯಾದರು. ಅದಕ್ಕೆ ಪೂರ್ವಭಾವಿಯಾಗಿ ಎರಡು ತಿಂಗಳು ಹೋಟೆಲೊಂದರಲ್ಲಿ ಕ್ಲೀನರ್ ಆಗಿ ಸೇರಿ ತಿರುಗಾಟಕ್ಕೆ ಬೇಕಾದ ವಸ್ತ್ರವನ್ನು ಕೊಂಡಿದ್ದರು. ಮೇಳದಲ್ಲಿ ಬಾಲಗೋಪಾಲ ವೇಷದೊಡನೆ ಭಟ್ಟರ ಅರಂಗೇಟ್ರಂ 1951ರಲ್ಲಿ ನಡೆಯಿತು. ವರ್ಷದ ಕೊನೆಗೆ ಮೇಳದ ಯಜಮಾನರು ಹದಿನಾರು ರೂ. ನೀಡಿದರು. ಆರು ತಿಂಗಳಿಗೆ ಕೇವಲ 75 ರೂ. ಎಂದು ನಿಗದಿ ಮಾಡಲಾಗಿತ್ತು.
ಗೋವಿಂದ ಭಟ್ಟರಿಗೆ ಉಪನಯನವಾದ ಮೇಲೆ ವೇದ ಪಾಠ ಕಲಿಯಲು ಉಡುಪಿಗೆ ತೆರಳಿದ್ದರು. ಆದರೆ ಅಲ್ಲಿ ಸರಿ ಹೋಗದೆ ವೇದ ಕಲಿಯುವ ಆಸೆಗೆ ತಿಲಾಂಜಲಿ ನೀಡಿದರು. ಬಳಿಕ ಪೆರುವಡಿ ಸುಬ್ರಾಯ ಭಟ್ಟರ ನೇತೃತ್ವದ ಮೂಲ್ಕಿ ಮೇಳಕ್ಕೆ ಗೋವಿಂದ ಭಟ್ಟರು ಸೇರಿಕೊಂಡರು. ಅದೇ ಮೇಳದಲ್ಲಿದ್ದ ಸಣ್ಣ ತಿಮ್ಮಪ್ಪ ಎಂಬ ಅಸಾಮಾನ್ಯ ಕಲಾವಿದನಿಂದ ವೈವಿಧ್ಯಮಯ ಮುಖವರ್ಣಿಕೆ ಮತ್ತು ವಿವಿಧ ಪಾತ್ರಗಳ ಅಭಿವ್ಯಕ್ತಿ ವಿಧಾನ ಕಲಿತು ಕೊಂಡರು. ಅಲ್ಲಿ ಬಾಲಗೋಪಾಲ ಮಾತ್ರವಲ್ಲದೆ ಪ್ರಮುಖ ಪುಂಡುವೇಷಗಳನ್ನು ಮಾಡುವ ಅವಕಾಶ ದೊರೆಯಿತು. ಯಕ್ಷಗಾನದಲ್ಲಿ ಸುಪ್ರಸಿದ್ಧರಾಗಿದ್ದ ಬಲಿಪ ನಾರಾಯಣ ಭಾಗವತರಲ್ಲಿದ್ದು, ಪದ್ಯ ಮತ್ತು ಮಾತುಗಾರಿಕೆ ಕಲಿತಿದ್ದರು. ಬಳಿಕ ಕಾಂದಿಲ್ಕರರ ನೇತೃತ್ವದಲ್ಲಿನ ಕೂಡ್ಲು ಮೇಳಕ್ಕೆ ಸೇರ್ಪಡೆಗೊಂಡರು. ಅಲ್ಲಿ ಶೇಣಿ ಗೋಪಾಲಕೃಷ್ಣ ಭಟ್, ದಾಮೋದರ ಮಂಡೆಚ್ಚ, ದೊಡ್ಡ ಸಾಮಗ, ಕದ್ರಿ ವಿಷ್ಣು ಮುಂತಾದವರ ಸಾಹಚರ್ಯದಿಂದಾಗಿ ಬಹಳಷ್ಟನ್ನು ಕಲಿತರು.ಮರುವರ್ಷ ಗೋವಿಂದ ಭಟ್ಟರು ಸುರತ್ಕಲ್ ಮೇಳ ಸೇರಿ ತಿರುಗಾಟ ನಡೆಸಿದರು. ಆದರೆ ಆರ್ಥಿಕವಾಗಿ ಮೇಳ ಚೇತರಿಸಿಕೊಳ್ಳಲಿಲ್ಲ. 1955ರಲ್ಲಿ ಗೋವಿಂದ ಭಟ್ಟರು ಕುಂಡಾವು ಮೇಳ ಎಂದು ಕರೆಯಲ್ಪಡುವ ಇರಾ ಸೋಮನಾಥೇಶ್ವರ ಯಕ್ಷಗಾನ ಮಂಡಳಿಯನ್ನು ಸೇರಿ ಹದಿನಾಲ್ಕು ವರ್ಷ ತಿರುಗಾಟ ನಡೆಸಿದರು. ಮೇಳದಲ್ಲಿ ವೀರಭದ್ರ ನಾಯಕ, ರಾಮದಾಸ ಸಾಮಗ, ಕುಂಬಳೆ ಸುಂದರರಾವ್ ಮುಂತಾದ ನುರಿತ ಕಲಾವಿದರಿದ್ದರು. ರಾಮದಾಸ ಸಾಮಗರ ಸಂಸರ್ಗದಿಂದಾಗಿ ಮಾತುಗಾರಿಕೆಯ ಆಳ ವಿಸ್ತಾರಗಳ ಅರಿವು ಗೋವಿಂದ ಭಟ್ಟರಿಗಾಯಿತು. ಇರಾ ಸೋಮನಾಥ ಮೇಳದಲ್ಲಿ ಭಟ್ಟರು ಅನೇಕ ಪ್ರಸಂಗಗಳ ರಂಗ ಪ್ರಯೋಗದ ವಿಧಾನ ಅರಿತುಕೊಂಡರು. ಮೇಳದ ಯಜಮಾನ ಕಲ್ಲಾಡಿ ಕೊರಗಪ್ಪ ಶೆಟ್ಟರ ಮಾತಿಗೆ ಕಟ್ಟುಬಿದ್ದು, ನೆಲ್ಯಾಡಿ ಬಳಿಯ ಕೆಮ್ಮಣಮಕ್ಕಿ ಎಂಬಲ್ಲಿ ಇಸುಬು ಬ್ಯಾರಿ ಎಂಬಾತನಿಂದ ಗೇಣಿಗೆ ಭೂಮಿ ಪಡೆದು ಕೃಷಿ ಮಾಡಿದರು. ಕುಂಡಾವು ಮೇಳದಲ್ಲಿದ್ದಾಗ ಭಟ್ಟರು ಕನಕ ರೇಖೆ- ರತ್ನ ಕಂಕಣ ಎಂಬ ಪ್ರಸಂಗ ರಚಿಸಿದ್ದು, ಅದು 141 ಪ್ರಯೋಗಗಳನ್ನು ಕಂಡು ಯಶಸ್ವಿಯಾಯಿತು. ರಾಮದಾಸ ಸಾಮಗ-ಗೋವಿಂದ ಭಟ್ಟರ ಬ್ರಹ್ಮ-ಈಶ್ವರ, ಭೀಷ್ಮ-ಪರಶುರಾಮ, ಹರಿಶ್ಚಂದ್ರ-ವಿಶ್ವಾಮಿತ್ರ, ಶುಕ್ರಾಚಾರ್ಯ-ಕಚ, ರಾಮ-ಭರತ, ಶಕುನಿ- ಕೌರವ ಪಾತ್ರಗಳು ಜನಮನ್ನಣೆ ಪಡೆಯಿತು. ಆದರೆ ವಿಘ್ನ ಸಂತೋಷಿಗಳಿಂದಾಗಿ ರಾಮದಾಸ ಸಾಮಗರು ಗೋವಿಂದ ಭಟ್ಟರ ಜತೆ ಪಾತ್ರ ಮಾಡಲು ನಿರಾಕರಿಸಿದ್ದರಿಂದ ಭಟ್ಟರು ಕುಂಡಾವು ಮೇಳ ಬಿಡಬೇಕಾಯಿತು.1968ರಲ್ಲಿ ಭಟ್ಟರು ಧರ್ಮಸ್ಥಳ ಮೇಳಕ್ಕೆ ಸೇರಿಕೊಂಡು 50 ವರ್ಷಗಳ ತಿರುಗಾಟ ನಡೆಸಿದರು. ಇದರ ನಡುವೆ 1966ರಲ್ಲಿ ಸಾವಿತ್ರಿ ಎಂಬ ದೂರದ ಸಂಬಂಧಿಯೊಡನೆ ಗೋವಿಂದ ಭಟ್ಟರ ವಿವಾಹ ನಡೆದು ಹೋಯಿತು. ಧರ್ಮಸ್ಥಳ ಮೇಳಕ್ಕೆ ವಾಪಸಾದಾಗ ಮೇಳದಲ್ಲಿ ಘಟಾನುಘಟಿಗಳಾದ ಕಲಾವಿದರಿದ್ದರು. ಹಾಡುಗಾರಿಕೆಗೆ ಕಡತೋಕ ಮಂಜುನಾಥ ಭಾಗವತ, ಚೆಂಡೆ ಮದ್ದಳೆಕಾರರಾಗಿ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಮತ್ತು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು, ಪಾತ್ರಧಾರಿಗಳಾಗಿ ವಿಟ್ಲ ಗೋಪಾಲಕೃಷ್ಣ ಜೋಷಿ, ಕುಂಬಳೆ ಸುಂದರ ರಾವ್, ಪುತ್ತೂರು ನಾರಾಯಣ ಹೆಗ್ಡೆ, ಎಂಪೆಕಟ್ಟೆ ರಾಮಯ್ಯ ರೈ, ಪಾತಾಳ ವೆಂಕಟ್ರಮಣ ಭಟ್, ಕಡಬ ಸಾಂತಪ್ಪ, ಮುಳಿಯ ಭೀಮ ಭಟ್, ಶ್ರೀನಿವಾಸ ಆಚಾರ್ಯ, ಚಂದ್ರಗಿರಿ ಅಂಬು, ಪಕಳಕುಂಜ ಕೃಷ್ಣ ನಾಯ್ಕ, ಪುತ್ತೂರು ಶ್ರೀಧರ ಭಂಡಾರಿ, ಉಬರಡ್ಕ ಉಮೇಶ್ ಶೆಟ್ಟಿ ಮತ್ತಿತರರಿದ್ದರು. ನವೆಂಬರ್‌ನಿಂದ ಮೇ ಅಂತ್ಯದವರೆಗೆ ಮೇಳದಲ್ಲಿ ತಿರುಗಾಟ, ಮಳೆಗಾಲದಲ್ಲಿ ಮುಂಬಯಿಯಂತಹ ಹೊರನಾಡುಗಳಲ್ಲಿ ಆಯ್ದ ಕಲಾವಿದರಿಂದ ಪ್ರದರ್ಶನ- ಹೀಗೆ ವರ್ಷ ಮುಗಿದು ಹೋಗುತ್ತಿತ್ತು.ಭಟ್ಟರು ಕುಂಡಾವು ಮೇಳದಲ್ಲಿದ್ದಾಗ ಇತರ ಮೇಳಗಳೊಡನೆ ಸ್ಪರ್ಧೆಯ ಜೋಡಾಟ ನಡೆಯುತ್ತಿತ್ತು. ಅಂತಹ ಜೋಡಾಟಗಳಲ್ಲಿ ಆ ಕಾಲದ ಪ್ರಸಿದ್ಧ ಕಲಾವಿದರಾದ ಅಳಿಕೆ ರಾಮಯ್ಯ ರೈ, ಕೇದಗಡಿ ಗುಡ್ಡಪ್ಪ ಗೌಡ, ಕದ್ರಿ ವಿಷ್ಣು, ಪಡ್ರೆ ಚಂದು, ಅಪ್ಪಯ್ಯ ಮಣಿಯಾಣಿ, ಅರುವ ಕೊರಗಪ್ಪ ಶೆಟ್ಟಿ, ಕೋಳ್ಯೂರು ರಾಮಚಂದ್ರ ರಾವ್, ಕ್ರಿಶ್ಚಿಯನ್ ಬಾಬು, ಹೊಸಹಿತ್ಲು ಮಾಲಿಂಗ ಭಟ್- ಮುಂತಾದವ ರೆದುರು ಸರಿ ಮಿಗಿಲೆನಿಸಿ ಎಲ್ಲರಿಂದಲೂ ಹೊಗಳಿಸಿಕೊಂಡವರು ಭಟ್ಟರು. ಅವರು ತನಗೆ ಇಂತಹದೇ ಪಾತ್ರ ಬೇಕೆಂದು ಪಟ್ಟು ಹಿಡಿದವರಲ್ಲ. ಎಲ್ಲಬಗೆಯ ವೈವಿಧ್ಯಮಯ ಪಾತ್ರಗಳನ್ನು ಮಾಡಲು ಅವರು ಹಿಂಜರಿದವರಲ್ಲ. ಅವರ ಅತ್ಯಂತ ಯಶಸ್ವಿಯಾದ ಪಾತ್ರಗಳೆಂದರೆ ಅಕ್ಷಯಾಂಬರ ವಿಲಾಸ ಮತ್ತು ಗದಾಯುದ್ಧದ ಕೌರವ, ಪಾಂಡವಾಶ್ವಮೇಧದ ಅರ್ಜುನ, ತಾಮ್ರ ಧ್ವಜ ಮತ್ತು ಬಬ್ರುವಾಹನ, ಕಾರ್ತವೀರ್ಯಾರ್ಜುನದ ಪರಶುರಾಮ ಮತ್ತು ಕಾರ್ತವೀರ್ಯ, ಪಂಚವಟಿಯ ಮಾಯಾ ಶೂರ್ಪನಖಿ, ಚಂದ್ರಾವಳಿ ವಿಲಾಸ ರಾಧೆ, ಪಾರಿಜಾತದ ದೂತಿ, ಜಲಂಧರದ ದೇವೇಂದ್ರ, ಪಾದುಕಾ ಪ್ರಧಾನದ ಶ್ರೀರಾಮ, ರತಿ ಕಲ್ಯಾಣದ ಕೌಂಡಿಕ, ಸಮುದ್ರ ಮಥನದ ವಾಲಿ, ಇಂದ್ರಜಿತು, ದೇವಿ ಮಹಾತ್ಮೆಯ ಮಧು ಕೈಟಭ, ಚಂಡ-ಮುಂಡ, ವಿಶ್ವಾಮಿತ್ರ, ದೂರ್ವಾಸ ಮತ್ತು ಹೆಣ್ಣು ಬಣ್ಣಗಳು.ತೀರ್ಥಹಳ್ಳಿಯ ಹದ್ದೂರಿನ ಸಮೀಪ ಅವರೊಂದು ಪುಟ್ಟ ಗಣಪತಿ ಗುಡಿ ನಿರ್ಮಿಸಿ ದೇವರ ಸೇವೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಗೋವಿಂದ ಭಟ್ಟರು ಧರ್ಮಸ್ಥಳದ ಯಕ್ಷಗಾನ ಕಲಾಕೇಂದ್ರದ ಗುರುಗಳಾಗಿದ್ದ ಅವಧಿಯಲ್ಲಿ ನೆಡ್ಲೆ ನರಸಿಂಹ ಭಟ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರೊಡಗೂಡಿ ತೆಂಕುತಿಟ್ಟು ಯಕ್ಷಗಾನ ಕಲಿಕೆಗೆ ಬಾಯಿತಾಳವನ್ನು ರೂಪಿಸಿದ್ದರು. ಏಕತಾಳಕ್ಕೆ ದಾಖಲೆಯ 24 ಕುಣಿತಗಳನ್ನು ಆವಿಷ್ಕರಿಸಿದ್ದಾರೆ.ಬಾಕ್ಸ್ *7ನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣ ಪಡೆದಿರುವ ಗೋವಿಂದ ಭಟ್ಟರು ಬಳಿಕ ಯಕ್ಷಗಾನದತ್ತ ಒಲವು ಬೆಳೆಸಿಕೊಂಡರು. ಕುರಿಯ ವಿಠಲ ಶಾಸ್ತ್ರಿ, ಪರಮಶಿವನ್, ಮಾಧವ ಮೆನನ್, ರಾಜನ್ ಅಯ್ಯರ್ ಅವರಲ್ಲಿ ಯಕ್ಷಗಾನ ನೃತ್ಯ ಅಭ್ಯಸಿಸಿದರು.*1951ರಲ್ಲಿ ಯಕ್ಷಗಾನ ಮೇಳಕ್ಕೆ ಸೇರ್ಪಡೆಗೊಂಡು ಸುಮಾರು 70 ವರ್ಷಗಳ ಕಾಲ ಧರ್ಮಸ್ಥಳ, ಮೂಲ್ಕಿ, ಕೂಡ್ಲು, ಸುರತ್ಕಲ್ (ಕೆಳಗಿನ ಮಾರಿಗುಡಿ) ಇರಾ ಸೋಮನಾಥೇಶ್ವರ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ. *ಕೌರವ, ರಕ್ತಬೀಜ, ಇಂದ್ರಜಿತು, ಮಾಗಧ, ಕರ್ಣ, ಅತಿಕಾಯ ನರಕಾಸುರ, ತಾಮ್ರಾಕ್ಷ , ಹಿರಣ್ಯಕಶಿಪು, ದೇವೇಂದ್ರ, ಅರ್ಜುನ , ಹನುಮಂತ, ಭೀಷ್ಮ ,ಬಾಹುಬಲಿ, ವಿಶ್ವಾಮಿತ್ರ ಅವರಿಗೆ ಹೆಸರು ತಂದು ಕೊಟ್ಟ ಪಾತ್ರಗಳಾಗಿವೆ.*ಅಪೂರ್ವ ವಾಗ್‌ವೈಖರಿ, ಛಂದೋಬದ್ಧವಾದ ಮಾತಿನ ಜತೆಗೆ ನೃತ್ಯದಲ್ಲೂ ಪ್ರಾವೀಣ್ಯ ಪಡೆದಿದ್ದರು. ಅವರಿಗೆ 2008ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2016ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತ್ ಪುರಸ್ಕಾರ, ಕರ್ನಾಟಕ ಜಾನಪದ ಅಕಾಡೆಮಿ ಸಾಧನಾ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಗೌರವ ಸಮ್ಮಾನಗಳು ದೊರೆತಿವೆ. *ಗೋವಿಂದ ಭಟ್ಟರಿಗೆ ಮೂವರು ಮಕ್ಕಳು, ಮೂವರು ಸೊಸೆಯಂದಿರು ಮತ್ತು ಮೂವರು ಮೊಮ್ಮಕ್ಕಳು.* ಮಣಿ ಮೇಖಲೆ, ಕನಕ ರೇಖೆ, ಕಾವೇರಿ ಮಹಾತ್ಮೆ, ಮೂರುವರೆ ವಜ್ರಗಳು ರಾಜಶೇಖರ ವಿಲಾಸ, ಮಹಾವೀರ ಸಾಮ್ರಾಟ ಅಶೋಕ, ನಹುಷೇಂದ್ರ ಎಂಬ ಏಳು ಯಕ್ಷ ಪ್ರಸಂಗಗಳನ್ನು ಬರೆದಿದ್ದಾರೆ. *ಜಪಾನ್, ಅಬುದಾಬಿ, ಬಹ್ರೈನ್, ದುಬೈಗಳಲ್ಲಿ ಯಕ್ಷಗಾನ ಪ್ರದರ್ಶಿಸಿದ್ದಾರೆ. ದಿಲ್ಲಿಯಲ್ಲಿ ರಾಷ್ಟ್ರಪತಿ ಎದುರು ಯಕ್ಷಗಾನ ಪ್ರದರ್ಶಿಸಿದ್ದರು. *ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ವತಿಯಿಂದ ಗೋವಿಂದ ಭಟ್ಟರ ಜೀವನ ಚರಿತ್ರೆ ಯಕ್ಷೋಪಾಸನೆ ಮತ್ತು ಅಭಿನಂದನಾ ಗ್ರಂಥ ಸವ್ಯಸಾಚಿ ಪ್ರಕಟಿಸಲಾಗಿದೆ.ಬಾಕ್ಸ್ಕಾರಂತರೂ ಅಚ್ಚರಿ ಪಟ್ಟಿದ್ದರು1985ರಲ್ಲಿ ಉಡುಪಿಯಲ್ಲಿ ಡಾ. ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ನಡೆದ ಯಕ್ಷಗಾನ ಪ್ರಾತ್ಯಕ್ಷಿಕೆಯಲ್ಲಿ ಗೋವಿಂದ ಭಟ್ಟರು ಮತ್ತು ವಿಶ್ವೇಶ್ವರ ಭಟ್ಟರು ತೆಂಕುತಿಟ್ಟಿನ ಆವಿಷ್ಕಾರಿಕ ನೃತ್ಯ ವೈವಿಧ್ಯವನ್ನು ಪ್ರದರ್ಶಿಸಿದ್ದರು. ಶಿವರಾಮ ಕಾರಂತರು ತೆಂಕುತಿಟ್ಟಿನಲ್ಲಿ ಇಷ್ಟೂ ನರ್ತನ ವೈವಿಧ್ಯ ಇದೆಯೇ ಎಂದು ಅಚ್ಚರಿ ಪಟ್ಟು ಮೆಚ್ಚುಗೆ ವ್ಯಕ್ತ ಪಡಿಸಿದ್ದರು.