ಸಾರಾಂಶ
ಕಪ್ಪೆಕೆರೆಯಲ್ಲಿ 1950ರಲ್ಲಿ ಜನಿಸಿದ ಮಹಾದೇವ ಹೆಗಡೆಯವರು 18ನೇ ವಯಸ್ಸಿನಲ್ಲಿ ಬಣ್ಣದ ಲೋಕ ಪ್ರವೇಶಿಸಿದ್ದರು. ಹೆಗಡೆಯವರ ಕುಟುಂಬವೇ ಯಕ್ಷಗಾನ ರಂಗದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಗಣನೀಯ ಕೊಡುಗೆ ನೀಡಿತ್ತು. ಅಣ್ಣ ಕಪ್ಪೆಕೆರೆ ಸುಬ್ರಾಯ ಹೆಗಡೆ ಹೆಸರಾಂತ ಭಾಗವತರಾಗಿದ್ದಾರೆ.
ಹೊನ್ನಾವರ: ಬಡಗುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದ ತಾಲೂಕಿನ ಹಡಿನಬಾಳ ಕಪ್ಪೆಕೆರೆಯ ಮಹಾದೇವ ಹೆಗಡೆ(75) ಮಂಗಳವಾರ ರಾತ್ರಿ ನಿಧನರಾದರು.
ಕಪ್ಪೆಕೆರೆಯಲ್ಲಿ 1950ರಲ್ಲಿ ಜನಿಸಿದ ಮಹಾದೇವ ಹೆಗಡೆಯವರು 18ನೇ ವಯಸ್ಸಿನಲ್ಲಿ ಬಣ್ಣದ ಲೋಕ ಪ್ರವೇಶಿಸಿದ್ದರು. ಹೆಗಡೆಯವರ ಕುಟುಂಬವೇ ಯಕ್ಷಗಾನ ರಂಗದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಗಣನೀಯ ಕೊಡುಗೆ ನೀಡಿತ್ತು. ಅಣ್ಣ ಕಪ್ಪೆಕೆರೆ ಸುಬ್ರಾಯ ಹೆಗಡೆ ಹೆಸರಾಂತ ಭಾಗವತರಾಗಿದ್ದಾರೆ.ಮಹಾದೇವ ಹೆಗಡೆಯವರು ಖಳ ಮತ್ತು ಸಾತ್ವಿಕ ಎರಡೂ ರೀತಿಯ ಪಾತ್ರಗಳನ್ನೂ ಸಮರ್ಥವಾಗಿ ಪ್ರಸ್ತುತ ಪಡಿಸುತ್ತಿದ್ದರು. ಭೀಮ, ಸುಗ್ರೀವ, ವಾಲಿ. ರಾಮ, ಜಮದಗ್ನಿ, ರಾವಣ, ಮಾಗದ, ಹರಿಶ್ಚಂದ್ರ, ವಿಶ್ವಾಮಿತ್ರ ಮುಂತಾದ ಪಾತ್ರಗಳ ಮೂಲಕ ಖ್ಯಾತರಾಗಿದ್ದರು.
ಕಲಾರಂಗದ ಸೇವೆ ಅನನ್ಯ: ಹಂತ ಹಂತವಾಗಿ ಬೆಳೆದು ಬಂದ ಇವರು ಸ್ತ್ರೀವೇಷ, ಬಣ್ಣದ ವೇಷಗಳನ್ನು ಸಹ ಮಾಡಿದ್ದರು. ಮಂದಾರ್ತಿ ಮೇಳದ ಪ್ರಧಾನ ವೇಷಧಾರಿಯಾಗಿ ಸೇವೆ ಸಲ್ಲಿಸಿದ್ದರು. ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದರು.ಪ್ರಸಿದ್ಧ ಭಾಗವತರಾದ ಇವರ ಸಹೋದರ ಕಪ್ಪೆಕೆರೆ ಸುಬ್ರಾಯ ಹೆಗಡೆ ಅವರಿಂದ ಯಕ್ಷಗಾನ ಕಲಿತು, ಕೆರೆಮನೆ ಮಹಾಬಲ ಹೆಗಡೆ ಅವರ ಗರಡಿಯಲ್ಲಿ ಶ್ರೇಷ್ಠ ಕಲಾವಿದರಾಗಿ ರೂಪುಗೊಂಡಿದ್ದರು. ಗುಂಡಬಾಳ, ಇಡಗುಂಜಿ, ಬಚ್ಚಗಾರು, ಶಿರಸಿ, ಪಂಚಲಿಂಗ, ಮಂದಾರ್ತಿ ಮೇಳಗಳಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಕಲಾ ಸೇವೆ ಮಾಡಿದ್ದರು. ಶಿರಸಿ ಮೇಳದಲ್ಲಿ ವ್ಯವಸ್ಥಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಪ್ರಶಸ್ತಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. ಗುರುವಾಗಿಯೂ ನೂರಾರು ಕಲಾವಿದರನ್ನು ರಂಗಕ್ಕೆ ನೀಡಿದ್ದರು. ಮೃತರಿಗೆ ಪತ್ನಿ ಶಾರದೆ, ನಾಲ್ವರು ಪುತ್ರರು ಇದ್ದಾರೆ.