ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾರ್ಕಳ ಮುಂಡ್ಲಿ ಗ್ರಾಮದಲ್ಲಿ ಜ.14ರಂದು ಆಯೋಜಿಸಲಾಗಿದ್ದ ಯಕ್ಷಗಾನ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.ಶ್ರೀ ಈಶ್ವರ ಯಕ್ಷಗಾನ ಸಂಘದ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಧ್ವನಿವರ್ಧಕ ಬಳಕೆಗೆ ಪೊಲೀಸ್ ಇಲಾಖೆಯ ಅನುಮತಿ ಇಲ್ಲದ ಹಿನ್ನೆಲೆಯಲ್ಲಿ, ಅಜೆಕಾರು ಠಾಣಾಧಿಕಾರಿ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿದ್ದರು. ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ ಹಾಗೂ ಧ್ವನಿವರ್ಧಕ ಸೇವೆ ನೀಡಿದ ಅಜೆಕಾರು ಸೌಂಡ್ಸ್ ಸಂಸ್ಥೆ ಮಾಲಕ ಅಪ್ಪು ನಾಯಕ್ ಅವರ ವಿರುದ್ಧವೂ ಪ್ರಕರಣ ದಾಖಲಾಗಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠವು, ಅರ್ಜಿ ದಾರರ ಪರವಾಗಿ ಮಂಡಿಸಲಾದ ವಾದ ಪರಿಗಣಿಸಿ, ಕ್ರಿಮಿನಲ್ ವಿಚಾರಣೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಅರ್ಜಿ ದಾರರ ಪರವಾಗಿ ಹಿರಿಯ ನ್ಯಾಯವಾದಿ ಮಹೇಂದ್ರ ಎಸ್.ಎಸ್., ಬೆಂಗಳೂರು ಅವರು ವಾದ ಮಂಡಿಸಿದರು.
ಮರದ ತುಂಡು ಬಿದ್ದು ಗಾಯ: ಯುವಕ ಸಾವುಕಾರ್ಕಳ: ಕೆಲಸ ಮಾಡುತ್ತಿದ್ದಾಗ ಮರದ ತುಂಡು ಬಿದ್ದು ಗಾಯಗೊಂಡಿದ್ದ ಕೆದಿಂಜ ಗ್ರಾಮದ ನಿವಾಸಿ ಗಣೇಶ (30) ಮಂಗಳವಾರ ಮೃತಪಟ್ಟರು. ಅವರು ತನ್ನ ತಾಯಿ ಮತ್ತು ಸಹೋದರಿ ಜೊತೆ ವಾಸವಿದ್ದು, ಅವರ ಪತ್ನಿ ಹಾಗೂ ಮಗು ಬಾಳೆಹೊನ್ನೂರಿನಲ್ಲಿ ವಾಸಿಸುತ್ತಿದ್ದಾರೆ. ಅವರು ಕಾರ್ಕಳದಲ್ಲಿ ಟಿಂಬರ್ ಕೆಲಸ ಮಾಡುತ್ತಿದ್ದು, ಜು.19 ರಂದು ಕೌಡೂರು ಪ್ರದೇಶದಲ್ಲಿ ಕೆಲಸ ಮಾಡುತ್ತಿರುವಾಗ ಒಂದು ಮರದ ತುಂಡು ಅವರ ಮೇಲೆ ಬಿದ್ದು ಕೈಗೆ ಗಾಯವಾಗಿತ್ತು. 21ರಂದು ತಾಯಿಯೊಂದಿಗೆ ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆ ಪಡೆದಿದ್ದರು. ಆದರೆ ಅವರಿಗೆ ಕೈಕಾಲಿನಲ್ಲಿ ನೋವು ತೀವ್ರವಾಗಿದ್ದು, ದಿನದಿಂದ ದಿನಕ್ಕೆ ಆರೋಗ್ಯ ಕ್ಷೀಣಿಸುತ್ತಿದ್ದುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.ಮಂಗಳವಾರ ಮಧ್ಯಾಹ್ನ ಮಲಗಿದ ಸ್ಥಿತಿಯಲ್ಲೇ ಸಾವು ಸಂಭವಿಸಿದೆ ಎಂದು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.