ಸಾರಾಂಶ
ಸಾಹಿತ್ಯ, ಸಂಗೀತ, ಕಲೆಗಳ ಒಡನಾಟ ಅಪ್ಯಾಯಮಾನವಾದದ್ದು
ಯಲ್ಲಾಪುರ: ಯಕ್ಷಗಾನ ಜನರ ಅಂತರಂಗಕ್ಕೆ ತಲುಪುವ ಕಲೆಯಾಗಿದೆ. ಸಾಹಿತ್ಯ, ಸಂಗೀತ, ಕಲೆಗಳ ಒಡನಾಟ ಅಪ್ಯಾಯಮಾನವಾದದ್ದು. ಕಲಾರಾಧನೆ ಈ ಭಾಗದ ದೊಡ್ಡ ಆಸ್ತಿಯಾಗಿದೆ. ಮನಸ್ಸು ಶುದ್ಧಿ ಮಾಡಬಲ್ಲ ಶಕ್ತಿ ಕಲೆಗಳಿಗಿವೆ ಎಂದು ಹಿರಿಯ ತಾಳಮದ್ದಳೆ ಅರ್ಥಧಾರಿ ಎಂ.ಎನ್. ಹೆಗಡೆ ಹಳವಳ್ಳಿ ಹೇಳಿದರು.
ಅವರು ಮಾ.4ರಂದು ತೇಲಂಗಾರದ ಮೈತ್ರಿ ಕಲಾ ಬಳಗದ ಆವರಣದಲ್ಲಿ ದಿ.ಮಹಾದೇವಿ ಮತ್ತು ಕೃಷ್ಣ ಗಾಂವ್ಕರ್ ಕಲ್ಮನೆಯವರ ಸ್ಮರಣಾರ್ಥ ಜಿ.ಕೆ. ಗಾಂವ್ಕರ್ ಕಲ್ಮನೆ ಮತ್ತು ಶೈಲಜಾ ದಂಪತಿ ಹಮ್ಮಿಕೊಂಡಿದ್ದ ಮೆಕ್ಕೆಕಟ್ಟು ಮೇಳದ ಯಕ್ಷಗಾನ ಬಯಲಾಟ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.ಕಾರ್ಯಕ್ರಮ ಉದ್ಘಾಟಿಸಿದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಯಕ್ಷಗಾನ ಕಲೆ ಸಂಘಟನಾತ್ಮಕವಾದ ಶಕ್ತಿಯಾಗಿದೆ. ಪರಂಪರೆಯಿಂದ ತನ್ನ ಗೌರವ ಉಳಿಸಿಕೊಂಡಿದೆ ಎಂದರು.
ವೇದಿಕೆಯಲ್ಲಿ ಮುಖ್ಯಾಧ್ಯಾಪಕಿ ಸರಸ್ವತಿ ಭಟ್ಟ, ಜಿ.ಕೆ. ಗಾಂವ್ಕರ, ಶೈಲಾ ಭಟ್ಟ, ಕಲ್ಮನೆ ಕುಟುಂಬದವರು, ಜಿ.ಎನ್. ಕೋಮಾರ, ಇಂದಿರಾ ಭಟ್ಟ ಉಪಸ್ಥಿತರಿದ್ದರು.ಗಣಪತಿ ಕಂಚಿಪಾಲ ಸ್ವಾಗತಿಸಿದರು. ಡಾ.ಡಿ.ಕೆ. ಗಾಂವ್ಕರ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ಮೂಲೆಮನೆ ನಿರ್ವಹಿಸಿದರು. ನಾರಾಯಣ ಗೋಡೆಪಾಲ ವಂದಿಸಿದರು.
ನಂತರ ನಂದಿಕೇಶ್ವರ ಮೆಕ್ಕೆಕಟ್ಟು ಮೇಳದವರಿಂದ "ರಾಜಾ ರುದ್ರಕೋಪ " ಹಾಗೂ "ಗದಾಯುದ್ಧ " ಯಕ್ಷಗಾನ ಪ್ರದರ್ಶನ ಜರುಗಿತು.ತೇಲಂಗಾರದಲ್ಲಿ ಮೆಕ್ಕೆಕಟ್ಟುಮೇಳದ ಯಕ್ಷಗಾನ ಯಶಸ್ವಿಯಾಗಿ ನಡೆಯಿತು.