ಯಕ್ಷಗಾನ ಭಾಗವತ ಕೇಶವ ಹೆಗಡೆ ಸಾಧನೆ ಅನನ್ಯ: ರವೀಂದ್ರ ಭಟ್‌

| Published : Jan 03 2025, 12:33 AM IST

ಸಾರಾಂಶ

ಕೇಶವ ಹೆಗಡೆ ತಮ್ಮ ಭಾಗವತಿಕೆಯ ಆರಂಭದ ದಿನಗಳಲ್ಲಿ ಇನ್ನಿತರ ಪ್ರಖ್ಯಾತ ಭಾಗವತರುಗಳಿದ್ದರೂ ತಮ್ಮ ಸಾಧನೆಯ ಮೂಲಕ ಉನ್ನತಿಗೆ ಬಂದರು ಎಂದು ಹಿರಿಯ ಪತ್ರಕರ್ತ ರವೀಂದ್ರ ಭಟ್ ಐನಕೈ ತಿಳಿಸಿದರು.

ಸಿದ್ದಾಪುರ: ಯಕ್ಷಗಾನದ್ದೇ ಆದ ಶೈಲಿಯನ್ನು ಉಳಿಸಿಕೊಂಡು ಬಂದವರು ಭಾಗವತ ಕೇಶವ ಹೆಗಡೆಯವರು. ಅವರ ಮಾರ್ಗವನ್ನು ಇತರರು ಅನುಸರಿಸುವಂಥ ಪ್ರತಿಭೆ ಅವರದ್ದು ಎಂದು ಹಿರಿಯ ಪತ್ರಕರ್ತ ರವೀಂದ್ರ ಭಟ್ ಐನಕೈ ಶ್ಲಾಘಿಸಿದರು.ತಾಲೂಕಿನ ಕೊಳಗಿಯ ಸಮಾಜ ಮಂದಿರದಲ್ಲಿ ಕೊಳಗಿ- ಶಿರಳಗಿ ಗ್ರಾಮಸ್ಥರು ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಯಕ್ಷಗಾನದ ಬಡಗುತಿಟ್ಟಿನ ಪ್ರಸಿದ್ಧ ಭಾಗವತ ಕೇಶವ ಹೆಗಡೆಯವರ ಅಭಿನಂದನಾ ಕಾರ್ಯಕ್ರಮ ಮತ್ತು ಸಂತೋಷಕೂಟದಲ್ಲಿ ಮಾತನಾಡಿ, ಕೇಶವ ಹೆಗಡೆ ತಮ್ಮ ಭಾಗವತಿಕೆಯ ಆರಂಭದ ದಿನಗಳಲ್ಲಿ ಇನ್ನಿತರ ಪ್ರಖ್ಯಾತ ಭಾಗವತರುಗಳಿದ್ದರೂ ತಮ್ಮ ಸಾಧನೆಯ ಮೂಲಕ ಉನ್ನತಿಗೆ ಬಂದರು ಎಂದರು.

ಉಪ್ಪೂರು, ನೆಬ್ಬೂರು, ಕೆ.ಪಿ. ಹೆಗಡೆಯವರಂಥ ಸಮರ್ಥ ಭಾಗವತರ ಮಾರ್ಗದರ್ಶನದಿಂದ ಸಿದ್ಧಿಯನ್ನು ಸಾಧಿಸಿದರು. ಯಕ್ಷಗಾನದ ಪ್ರಸಿದ್ಧ ಕಲಾವಿದರಿಗೆ ಪದ್ಯ ಹೇಳಿ, ಆಖ್ಯಾನ ನಡೆಸಿಕೊಟ್ಟ ಹೆಗ್ಗಳಿಕೆ ಅವರದ್ದು. ಎಲ್ಲಿ ಸನ್ಮಾನ, ಪುರಸ್ಕಾರ ದೊರೆತರೂ ಹುಟ್ಟೂರಿನ ಅಭಿನಂದನೆ ಅದೆಲ್ಲಕಿಂತ ಹೆಚ್ಚಿನದು ಎಂದರು.ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಮಾತನಾಡಿ, ಸಮಾಜದ ಜಾಗೃತಿಗೆ ಯಕ್ಷಗಾನ ಪೂರಕವಾದದ್ದು. ಹಿಂದೆ ಇದ್ದ ಭಾವನೆಗೆ ಬದಲಾಗಿ ಈಗ ಯಕ್ಷಗಾನಕ್ಕೆ ಮಾನ್ಯತೆ ಸಿಗುತ್ತಿದೆ. ಅರ್ಹತೆ ಇದ್ದರೂ ಪ್ರಶಸ್ತಿ ಸಿಗುವುದಿಲ್ಲ. ಅದೃಷ್ಟವೂ ಬೇಕು. ಅವೆರಡೂ ಕೇಶವ ಹೆಗಡೆಯವರಲ್ಲಿದೆ ಎಂದರು.ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಮಾತನಾಡಿ, ಬಡಗುತಿಟ್ಟಿನ ಯಕ್ಷಗಾನದ ಹಿಮ್ಮೇಳಕ್ಕೆ ಸಿಕ್ಕ ಗೌರವ ಕೇಶವ ಹೆಗಡೆಯವರಿಗೆ ಸಂದ ರಾಜ್ಯೋತ್ಸವ ಪ್ರಶಸ್ತಿ. ಕೇಶವ ಹೆಗಡೆಯವರಿಗೆ ಇನ್ನಷ್ಟು ಅತ್ಯುನ್ನತ ಪ್ರಶಸ್ತಿ ದೊರಕಲಿ ಎಂದು ಹಾರೈಸಿದರು.ಗ್ರಾಪಂ ಸದಸ್ಯ ಶ್ರೀಕಾಂತ ಭಟ್ಟ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೇಶವ ಹೆಗಡೆ ಕೊಳಗಿ ದಂಪತಿಗಳನ್ನು ಸನ್ಮಾನಿಸಲಾಯಿತು. ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತಿಮ್ಮಪ್ಪ ಹೆಗಡೆ ಶಿರಳಗಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಮುಖ್ಯ ಆಯೋಜಕ, ಉದ್ಯಮಿ ವಿ.ಎಂ. ಭಟ್ಟ ಕೊಳಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪತ್ರಕರ್ತ ಗಂಗಾಧರ ಕೊಳಗಿ ಅಭಿನಂದನಾ ಮಾತುಗಳನ್ನಾಡಿದರು. ಉದ್ಯಮಿ ವೆಂಕಟರಮಣ ಜಿ. ಹೆಗಡೆ ವಂದಿಸಿದರು. ಗಣಪತಿ ಹೆಗಡೆ ಗುಂಜಗೋಡ ನಿರೂಪಿಸಿದರು.5ರಂದು ಶಿರಸಿಯಲ್ಲಿ ೫ನೇ ಸಂಗೀತ ನಾದೋಪಾಸನೆ

ಶಿರಸಿ: ಭಗವಾನ್ ಶ್ರೀಧರ ಸಂಗೀತ ವಿದ್ಯಾಲಯದ ೫ನೇ ಸಂಗೀತ ನಾದೋಪಾಸನೆ ಕಾರ್ಯಕ್ರಮವು ಜ. ೫ರಂದು ಬೆಳಗ್ಗೆ ೧೦ ಗಂಟೆಯಿಂದ ಇಲ್ಲಿನ ಯೋಗಮಂದಿರದಲ್ಲಿ ನಡೆಯಲಿದೆ.ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ಜರುಗಲಿದ್ದು, ತಬಲಾದಲ್ಲಿ ಕೈವಲ್ಯ, ಚಿನ್ಮಯ್, ನಾರಾಯಣ ಹೆಗಡೆ ಸಂಪಿಗೆಮನೆ ಸಹಕಾರ ನೀಡಲಿದ್ದಾರೆ.

ಸಂಜೆ ೬ರಿಂದ ೭ ಗಂಟೆಯವರೆಗೆ ಸಂಗೀತ ಶಿಕ್ಷಕಿ ಸ್ಮಿತಾ ಎಂ. ಹೆಗಡೆ, ಕುಂಟೇಮನೆ ಅವರಿಂದ ಗಾಯನ ಪ್ರಸ್ತುತಗೊಳ್ಳಲಿದ್ದು, ತಬಲಾದಲ್ಲಿ ಮಂಜುನಾಥ ಮೋಟಿನಸರ, ಹಾರ‍್ಮೋನಿಯಂನಲ್ಲಿ ಅಜಯ ಹೆಗಡೆ ವರ್ಗಾಸರ ಸಾಥ್ ನೀಡಲಿದ್ದಾರೆ.

ಸಂಜೆ ೭ರಿಂದ ಆಮಂತ್ರಿತ ಕಲಾವಿದ ಪಂ. ಶ್ರೀಪಾದ ಹೆಗಡೆ ಕಂಪ್ಲಿ ಅವರಿಂದ ಗಾಯನವಿರಲಿದ್ದು, ನಾಗವೇಣಿ ಶ್ರೀಪಾದ ಹೆಗಡೆ ಕಂಪ್ಲಿ ಹಾರೋನಿಯಂ, ಗಣೇಶ ಗುಂಡ್ಕಲ್ ತಬಲಾ ಸಹಕಾರ ನೀಡಲಿದ್ದಾರೆ ಎಂದು ಮಹಾವಿದ್ಯಾಲಯದ ಸಂಗೀತ ಶಿಕ್ಷಕಿ ಸ್ಮೀತಾ ಎಂ. ಹೆಗಡೆ ತಿಳಿಸಿದ್ದಾರೆ.