ಸಾರಾಂಶ
ಶತಮಾನದ ಇತಿಹಾಸವನ್ನು ಯಕ್ಷಗಾನ ಹೊಂದಿದೆ.
ಹೊನ್ನಾವರ: ಶತಮಾನದ ಇತಿಹಾಸವನ್ನು ಯಕ್ಷಗಾನ ಹೊಂದಿದೆ. ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಕೆರೆಮನೆ ಮೇಳ ಒಂದು ಘರಾಣೆಯಂತೆ ಆಗಿದೆ. ನಮ್ಮ ಭಾವನೆಯನ್ನು ಹೊರತರಲು ಕಲಾ ಪ್ರಕಾರಗಳು ಸಹಾಯಕ ಎಂದು ಅಂಕಣಕಾರ, ಚಿಂತಕ ನಾರಾಯಣ ಯಾಜಿ ಸಾಲೆಬೈಲ್ ಅಭಿಪ್ರಾಯಪಟ್ಟರು.
ಯುನೆಸ್ಕೋ ಮಾನ್ಯತೆ ಪಡೆದ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆಯ ಯಕ್ಷಾಂಗಣದಲ್ಲಿ ನಡೆದ ಅಖಿಲ ಭಾರತ ಕಲಾ ವಿದ್ಯಾರ್ಥಿಗಳಿಗೆ ೨೧ ದಿನಗಳ ಪರಿಚಯಾತ್ಮಕ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೆರೆಮನೆಯ ಯಕ್ಷಾಂಗಣದಲ್ಲಿ ಚಿಕ್ಕ ಭಾರತವೇ ಸೇರಿದೆ. ಯಕ್ಷಗಾನಕ್ಕಾಗಿ ನೀವೆಲ್ಲ ಸೇರಿದ್ದಿರಿ. ಎಲ್ಲ ಕಲಾ ಪ್ರಕಾರದ ಗುರಿ ಒಂದೇ ಆಗಿದೆ. ಯಕ್ಷಗಾನ ಕಲಾವಿದರಿಂದ ನಿರ್ಮಾಣವಾದ ಮಂಡಳಿಯಲ್ಲಿ ನೀವು ಅಭ್ಯಾಸ ಮಾಡಲು ಬಂದಿದ್ದೀರಿ ಇದು ನಿಮ್ಮ ಸೌಭಾಗ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಯಕ್ಷರಂಗ ಮಾಸಪತ್ರಿಕೆ ಸಂಪಾದಕ ಗೋಪಾಲಕೃಷ್ಣ ಭಾಗವತ ಮಾತನಾಡಿ, ಯಕ್ಷಗಾನವನ್ನು ಕಲಿಯಲು ದೂರದ ಊರಿಂದ ಬಂದಿದ್ದೀರಿ. ಇಷ್ಟು ದಿನ ನೀವು ಸಾಮಾಜಿಕ ಜಾಲತಾಣದಲ್ಲಿ ನೋಡಿರ್ತಿರಿ. ಆದರೆ ಯಕ್ಷಗಾನದ ಸೌಂದರ್ಯ ಏನು ಅನ್ನುವುದನ್ನು ಇಂತಹ ಕಾರ್ಯಾಗಾರದಿಂದ ತಿಳಿಯುತ್ತಿರಿ. ಯಕ್ಷಗಾನದ ಪ್ರಾಥಮಿಕ ಪಾಠವನ್ನು ಕಲಿಯಬೇಕು. ಇಂಟರ್ನೆಟ್ ನಲ್ಲಿ ಸಿಕ್ಕ ಮಾಹಿತಿಗಿಂತ ಹೆಚ್ಚಿನ ಮಾಹಿತಿ ಕಾರ್ಯಾಗಾರದಿಂದ ತಿಳಿಯುತ್ತದೆ. ಯಕ್ಷಗಾನದಿಂದ ಸಂಸ್ಕೃತಿಯ ಬಗ್ಗೆ ಅರಿವನ್ನು ಮೂಡಿಸುತ್ತದೆ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪತ್ರಕರ್ತ ಎಚ್.ಎಂ. ಮಾರುತಿ ಮಾತನಾಡಿ, ಯಕ್ಷಗಾನವನ್ನು ಶಾಸ್ತ್ರೀಯವಾಗಿ ಕಲಿಯಬೇಕು. ಆಧ್ಯಾತ್ಮಕ ಶಕ್ತಿಯನ್ನು ಯಕ್ಷಗಾನದಿಂದ ಕಲಿಯಬಹುದು. ಪಾಪ, ಪುಣ್ಯದ ಬಗ್ಗೆ ಯಕ್ಷಗಾನ ತಿಳಿಸುತ್ತದೆ ಎಂದರು.
ಚಿಂತಕ ಗುರುರಾಜ್ ಮಾರ್ಪಳ್ಳಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಭಾಗವಹಿಸಲು ದೇಶದ ವಿವಿಧ ರಾಜ್ಯಗಳಿಂದ ಸುಮಾರು ಹನ್ನೆರಡು ವಿದ್ಯಾರ್ಥಿಗಳು ಆಗಮಿಸಿದ್ದರು. ಶ್ರೀಧರ ಹೆಗಡೆ ಕೆರೆಮನೆ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.ಫೋಟೋ: ಅಖಿಲ ಭಾರತ ಕಲಾ ವಿದ್ಯಾರ್ಥಿಗಳಿಗೆ ೨೧ ದಿನಗಳ ಪರಿಚಯಾತ್ಮಕ ಕಾರ್ಯಾಗಾರವನ್ನು ಗೋಪಾಲಕೃಷ್ಣ ಭಾಗವತ ಉದ್ಘಾಟಿಸಿದರು.