ಯಕ್ಷಗಾನ ಯಾವ ಕಲೆಗೂ ಕಡಿಮೆ ಇಲ್ಲ: ಕಪ್ಪಣ್ಣ

| Published : Aug 28 2024, 12:54 AM IST / Updated: Aug 28 2024, 12:55 AM IST

ಸಾರಾಂಶ

ಯಕ್ಷಗಾನ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಮಾಡಬೇಕು ಎಂದಿರುವ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಅವರು ಯಕ್ಷಗಾನ ಯಾವುದೇ ಕಲೆಗೂ ಕಮ್ಮಿ ಇಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಯಕ್ಷಗಾನ ಯಾವ ಕಲೆಗೂ ಕಡಿಮೆ ಇಲ್ಲ. ಕರ್ನಾಟಕದ ಈ ಶ್ರೀಮಂತ ಕಲೆಯು ದೇಶ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮೇಲುಗೈ ಸಾಧಿಸಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ ಆಶಿಸಿದರು.

ಕರ್ನಾಟಕ ಕಲಾ ದರ್ಶಿನಿ ಸಂಸ್ಥೆಯಿಂದ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಶ್ರಾವಣ ಕಲೋತ್ಸವ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಕ್ಷಗಾನಕ್ಕೆ ತನ್ನದೇ ಆದ ಹಿರಿಮೆ ಇದೆ. ಇದು ಯಾವ ಕಲೆಗೂ ಕಡಿಮೆ ಇಲ್ಲ. ದೇಶ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮೇಲುಗೈ ಸಾಧಿಸಬೇಕು. ಇದಕ್ಕೆ ಅಗತ್ಯವಾದ ಪ್ರೋತ್ಸಾಹ ಸಿಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯ ಅಧ್ಯಕ್ಷೆ ಶುಭಾ ಧನಂಜಯ, ಆದಾಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಧೀರೇಂದ್ರ, ಕಲಾ ಕುಟೀರದ ಗುರು ಮಾಲಾ ವೆಂಕಟೇಶ್, ಕರ್ನಾಟಕ ಕಲಾ ದರ್ಶಿನಿಯ ಅಧ್ಯಕ್ಷ ಮಟ್ಟಿ ರಾಮಚಂದ್ರ ರಾವ್, ಕಾರ್ಯದರ್ಶಿ ಶ್ರೀನಿವಾಸ ಸಾಸ್ತಾನ ಅತಿಥಿಗಳಾಗಿ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಡಾ। ಸುಪ್ರೀತಾ ಗೌತಮ್ ಮತ್ತು ತಂಡದವರಿಂದ ಕರ್ನಾಟಕ ಸಂಗೀತ ನಾದ- ನೀಲಾಂಜನ ಸಂಗೀತ ಕಾರ್ಯಕ್ರಮ, ವೇದಾಂತ ಮಾಲಾ ಕಲಾಕುಟೀರ ಹಾಗೂ ಕಲಾ ಕುಟೀರದ ಗುರು ಮಾಲಾ ವೆಂಕಟೇಶ್ ಇವರ ಶಿಷ್ಯರಿಂದ ಭರತನಾಟ್ಯ, ಕರ್ನಾಟಕ ಕಲಾ ದರ್ಶಿನಿ ತಂಡದಿಂದ ಯಕ್ಷಗಾನ ಪೂರ್ವರಂಗ ಮತ್ತು ಮೈಂದ ದಿವಿದ ಕಾಳಗ ಯಕ್ಷಗಾನ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ವಿಶ್ವನಾಥ ಶೆಟ್ಟಿ, ಮೃದಂಗದಲ್ಲಿ ನರಸಿಂಹ ಆಚಾರ್ ಹಾಗೂ ಗೌತಮ್ ಸಾಸ್ತಾನ, ಚಂಡೆಯಲ್ಲಿ ಸುಬ್ರಹ್ಮಣ್ಯ ಸಾಸ್ತಾನ ಇದ್ದರು.

ನಂತರ ಕರ್ನಾಟಕ ಕಲಾ ದರ್ಶಿನಿಯ ಕಲಾವಿದರಿಂದ ಮೋಹಿನಿ ಭಸ್ಮಾಸುರ ಯಕ್ಷಗಾನ ಪ್ರಸಂಗ ನಡೆಯಿತು. ಭಾಗವತರಾಗಿ ವಿನಯ್ ಶೆಟ್ಟಿ, ಮೃದಂಗದಲ್ಲಿ ಎ.ಪಿ.ಪಾಠಕ್, ಚಂಡೆಯಲ್ಲಿ ಮನೋಜ್ ಆಚಾರ್ ಸಾಥ್‌ ನೀಡಿದರು.