ಯಕ್ಷಗಾನ ಕಲಾರಂಗ ಉಡುಪಿ: ವಿದ್ಯಾಪೋಷಕ್‌ ಯೋಜನೆಯ 68ನೇ ಮನೆ ಉದ್ಘಾಟನೆ

| Published : Apr 24 2025, 11:47 PM IST

ಸಾರಾಂಶ

ಉಡುಪಿಯ ಯಕ್ಷಗಾನ ಕಲಾರಂಗ ಬ್ರಹ್ಮಾವರ ತಾಲೂಕಿನ ಯಡ್ತಾಡಿಯ ವಿದ್ಯಾಪೋಷಕ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸುಶ್ಮಿತಾಳಿಗೆ ೬ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಮನೆಯ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ಜರಗಿತು.

ಕನ್ನಡಪ್ರಭ ವಾರ್ತೆ ಬ್ರಹ್ಮಾವರ

ಯಕ್ಷಗಾನ ಕಲಾರಂಗ ಬ್ರಹ್ಮಾವರ ತಾಲೂಕಿನ ಯಡ್ತಾಡಿಯ ವಿದ್ಯಾಪೋಷಕ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸುಶ್ಮಿತಾಳಿಗೆ ೬ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಮನೆಯ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ಜರಗಿತು. ಒಎನ್‌ಜಿಸಿಯ ನಿವೃತ್ತ ಸಿ.ಜಿ.ಎಂ. ಬನ್ನಾಡಿ ನಾರಾಯಣ ಆಚಾರ್ ತಮ್ಮ ಮಾತೃಶ್ರೀ, ಬನ್ನಾಡಿ ಮಂಜುನಾಥ ಅಕ್ಕಸಾಲರ ಪತ್ನಿ ಬನ್ನಾಡಿ ಪದ್ದು ಆಚಾರ್ ಇವರ ಸ್ಮರಣಾರ್ಥ ಪ್ರಾಯೋಜಿಸಿದ ‘ಪದ್ಮಾಲಯ’ ಮನೆಯನ್ನು ಅವರೇ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಬಾಲ್ಯದ ತನ್ನ ಕಷ್ಟದ ದಿನಗಳನ್ನು ಸ್ಮರಿಸಿಕೊಂಡು ತನ್ನ ತಾಯಿಯ ತ್ಯಾಗ ಮತ್ತು ತನಗೆ ವಿದ್ಯೆ ನೀಡಿದ ಗುರುಗಳ ಸಹಾಯ, ಮಾರ್ಗದರ್ಶನ ನನ್ನ ಸಾಧನೆಗೆ ಮೂಲ ಪ್ರೇರಣೆ, ದಾನ ಮಾಡುತ್ತಾ ನಾನು ಸಂತೋಷ ಅನುಭವಿಸುತ್ತೇನೆ ಎಂದು ಹೇಳಿದರು.

ಅಧ್ಯಕ್ಷ ಸ್ಥಾನದಿಂದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಯಕ್ಷಗಾನ ಕಲಾರಂಗದ ಕೆಲಸ ಅಗಾಧ. ಸಮಾಜದ ಕಷ್ಟಕ್ಕೆ ಶೀಘ್ರವಾಗಿ ಸ್ಪಂದಿಸುವ ಪರಿ ಅನನ್ಯ ಎಂದು ಅಭಿಪ್ರಾಯ ಪಟ್ಟರು.

ಕೋಟ ವಿವೇಕ ಪ. ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ. ಜಗದೀಶ ನಾವುಡರು ತಮ್ಮ ಸಂಸ್ಥೆಯಲ್ಲಿ ಸುಶ್ಮಿತಾಳಿಗೆ ಯಾವುದೇ ಆರ್ಥಿಕ ಹೊರೆ ಬೀಳದಂತೆ ಶಿಕ್ಷಣ ನೀಡಲಾಗುವುದು ಎಂದು ನುಡಿದರು.

ವಡ್ಡರ್ಸೆ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಕೆ. ಉದಯಕುಮಾರ್ ಶೆಟ್ಟಿ, ಕರ್ಣಾಟಕ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಕೆ. ಚಂದ್ರಶೇಖರ ನಾವುಡ ಹಾಗೂ ಬನ್ನಾಡಿಯವರ ಸಹೋದರರಾದ ನರಸಿಂಹ ಆಚಾರ್, ಸೀತಾರಾಮ್ ಆಚಾರ್, ಬೇಳೂರು ರಾಘವ ಶೆಟ್ಟಿ, ಬನ್ನಾಡಿ ಕಿರಣ್ ಆಚಾರ್ ಇದ್ದರು.

ಯಕ್ಷಗಾನ ಕಲಾರಂಗದ ಎಸ್. ವಿ. ಭಟ್, ಕೆ. ಸದಾಶಿವ ರಾವ್, ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ಭುವನಪ್ರಸಾದ ಹೆಗ್ಡೆ, ವಿಜಯ ಕುಮಾರ ಮುದ್ರಾಡಿ, ಅನಂತರಾಜ ಉಪಾಧ್ಯಾಯ, ರಾಜೇಶ್ ನಾವುಡ, ಎಚ್. ಎನ್. ವೆಂಕಟೇಶ್, ಕೆ. ಅಜಿತ್ ಕುಮಾರ್, ನಿರಂಜನ್ ಭಟ್, ಗಣಪತಿ ಭಟ್ ಹಾಗೂ ಕಿಶೋರ್ ಪಾಲ್ಗೊಂಡರು.

ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.