ಪ್ರತಿಯೊಬ್ಬನ ಮನಸ್ಸಿನಲ್ಲಿ ಸಾಧನೆಯ ಮಾಡುವ ಕನಸು ಇರುತ್ತದೆ. ಅದಕ್ಕೆ ಸರಿಯಾದ ಮಾರ್ಗದರ್ಶಕರು ಅವಶ್ಯವಾಗಿದ್ದು, ಇವರೇ ತಮ್ಮ ಗುರಿ ತಲುಪಿಸುವ ಗುರು ಆಗಿರುತ್ತಾರೆ.
ಕನ್ನಡಪ್ರಭ ವಾರ್ತೆ ಗೋಕರ್ಣ
ಪ್ರತಿಯೊಬ್ಬನ ಮನಸ್ಸಿನಲ್ಲಿ ಸಾಧನೆಯ ಮಾಡುವ ಕನಸು ಇರುತ್ತದೆ. ಅದಕ್ಕೆ ಸರಿಯಾದ ಮಾರ್ಗದರ್ಶಕರು ಅವಶ್ಯವಾಗಿದ್ದು, ಇವರೇ ತಮ್ಮ ಗುರಿ ತಲುಪಿಸುವ ಗುರು ಆಗಿರುತ್ತಾರೆ ಎಂದು ಖ್ಯಾತ ಯಕ್ಷಗಾನ ಭಾಗವತ ಬೊಮ್ಮಯ್ಯ ಗಾಂವ್ಕರ್ ಹಿತ್ತಲಮಕ್ಕಿ ಹೇಳಿದರು.ಅಡಿಗೋಣದ ಶ್ರೀಜಟಗ ನಾಗ ಬಯಲು ಮಂದಿರದಲ್ಲಿ ಯಕ್ಷಗಾನ ಕಲಿಕಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಯುವಪೀಳಿಗೆಗೆ ಯಕ್ಷಗಾನ ಕಲೆ ಕಲಿಸಿ, ನಮ್ಮ ಪಾರಂಪರಿಕ ಕಲೆ ಉಳಿಸಿ ಬೆಳೆಸುವ ಕಾರ್ಯಕ್ರಮ ಮಾಡುತ್ತಿರುವ ನಿವೃತ್ತ ಶಿಕ್ಷಕ ಯಕ್ಷಸಿರಿ ಪ್ರಶಸ್ತಿ ಪುರಸ್ಕೃತ ಬೀರಣ್ಣ ನಾಯಕರವರ ಈ ಕಾರ್ಯ ಪ್ರಶಂಸನೀಯ ಎಂದ ಅವರು, ನಮ್ಮಂತಹ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದರು ಎಂದರು.ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಎಚ್. ನಾಯಕ ಮಾತನಾಡಿ, ಅನೇಕ ಜಾನಪದ ಕಲೆಗಳು ನಶಿಸುತ್ತಿರುವ ಇಂದಿನ ದಿನದಲ್ಲಿ ಗ್ರಾಮೀಣ ಪ್ರದೇಶ ಅಡಿಗೋಣ ಗ್ರಾಮ ಕಲೆ, ಸಂಸ್ಕೃತಿಯನ್ನ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ನಾಗರಾಜ ನಾಯಕ ಮಾತನಾಡಿ, ವಿದ್ಯಾರ್ಥಿಗಳು ಯಕ್ಷಗಾನದಲ್ಲಿ ತೊಡಗಿಕೊಳ್ಳುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ, ಬದಲಾಗಿ ಜ್ಞಾನ ವೃದ್ಧಿಗೆ ಪೂರಕವಾಗುತ್ತದೆ. ಇದನ್ನ ಪಾಲಕರು ಅರ್ಧೈಯಿಸಿಕೊಂಡು ಮಕ್ಕಳಿಗೆ ಯಕ್ಷಗಾನ ತರಬೇತಿ ಶಿಬಿರಗಳಿ ಕಳುಹಿಸಿ ಕಲೆ ಕಲಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಯಕ್ಷಸಿರಿ ಪ್ರಶಸ್ತಿ ಪುರಸ್ಕೃತ ಬೀರಣ್ಣ ನಾಯಕ ಮಾತನಾಡಿ, ಶಿಕ್ಷಕ ವೃತ್ತಿಗೆ ಪೂರಕವಾಗಿ ಯಕ್ಷಗಾನ ಕಲೆ ನನ್ನ ವೃತ್ತಿ ಬದುಕಿಗೆ ತೃಪ್ತಿ ತಂದು ಕೊಟ್ಟಿದೆ. ಮುಂದಿನ ಜನಾಂಗವು ಈ ಕಲೆಯನ್ನ ಉಳಿಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.
ಸ್ವಾಗತಿಸಿ ಮಾತನಾಡಿದ ಆಯೋಜಕ ಮಂಜುನಾಥ ನಾಯಕ ಮಾತನಾಡಿ, ನಮ್ಮೂರಿನ ಹಾಗೂ ಅಕ್ಕ ಪಕ್ಕದ ಊರಿನ ಮಕ್ಕಳಿಗೆ ಯಕ್ಷಗಾನದ ಶಾಸ್ತ್ರೀಯ ಜ್ಞಾನ ದೊರಕಿಸುವ ಪ್ರಾಯೋಗಿಕ ಪ್ರಯತ್ನ ನಮ್ಮದಾಗಿದ್ದು, ಇದಕ್ಕೆ ಸಹಕಾರ ನೀಡುತ್ತಿರುವ ಪುನೀತ ನಾಯ್ಕ, ಸಂತೋಷ ಗುನಗ, ದೇವಾನಂದ ನಾಯಕರವರಿಗೆ ಅಭಿನಂದಿಸಿದರು.ದೇವಾನಂದ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಗುನಗ ವಂದಿಸಿದರು. ಹರೀಶ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಊರಿನ ಗಣ್ಯರು, ನಾಗರಿಕರು, ಶಿಬಿರಾರ್ಥಿಗಳು ಪಾಲ್ಕೊಂಡಿದ್ದರು. ನಂತರ ಖ್ಯಾತ ಭಾಗವತರು ಹಾಗೂ ಅರ್ಥಧಾರಿಗಳಿಂದ ನಡೆದ ಕರ್ಣಾರ್ಜುನ ತಾಳಮದ್ದಳೆ ಪ್ರದರ್ಶನ ಎಲ್ಲರನ್ನ ಮನರಂಜಿಸಿತು.