ಸಾರಾಂಶ
ಮುಂದಿನ ದಿನಗಳಲ್ಲಿ ಕಡಲತಡಿಯ ಭಾರ್ಗವ ಶಿವರಾಮ ಕಾರಂತರು ಹಾಗೂ ದೈವಾರಾಧನೆ ಕುರಿತ ಅಂಚೆ ಚೀಟಿ ಕೂಡ ಹೊರತರುವಲ್ಲಿ ವಿಶೇಷ ಪ್ರಯತ್ನ ಮಾಡಲಾಗುವುದು ಎಂದು ನಳಿನ್ ಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿಯ ಕಲೆ ಯಕ್ಷಗಾನ ಕುರಿತ ಅಂಚೆ ಚೀಟಿ ಬಿಡುಗಡೆಗೊಳಿಸುವ ಮೂಲಕ ಈ ಕಲೆಗೆ ಈಗ ರಾಷ್ಟ್ರ ಮಟ್ಟದ ಗೌರವ ಲಭಿಸಿದೆ. ನಗರದ ಪುರಭವನದಲ್ಲಿ ಭಾನುವಾರ ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ನೂತನ ಅಂಚೆ ಚೀಟಿ ಬಿಡುಗಡೆಗೊಳಿಸಿದರು.ಅಧ್ಯಕ್ಷತೆ ವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಯಕ್ಷಗಾನದ ಇತಿಹಾಸದಲ್ಲಿ ಈ ದಿನ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು. ಕರಾವಳಿಯ ಕಲೆಗೆ ಮಹತ್ವದ ಸ್ಥಾನ ಅಂಚೆ ಚೀಟಿಯ ಮೂಲಕ ಲಭಿಸಿದೆ. ಯಕ್ಷಗಾನವನ್ನು ವಿಶ್ವಾದ್ಯಂತ ಪರಿಚಯಿಸುವ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆ ಹೊರ ತಂದಿರುವ ಈ ಸ್ಟ್ಯಾಂಪ್ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.
ದೈವಾರಾಧನೆ ಸ್ಟ್ಯಾಂಪ್‌ಗೆ ಯತ್ನ: ಮುಂದಿನ ದಿನಗಳಲ್ಲಿ ಕಡಲತಡಿಯ ಭಾರ್ಗವ ಶಿವರಾಮ ಕಾರಂತರು ಹಾಗೂ ದೈವಾರಾಧನೆ ಕುರಿತ ಅಂಚೆ ಚೀಟಿ ಕೂಡ ಹೊರತರುವಲ್ಲಿ ವಿಶೇಷ ಪ್ರಯತ್ನ ಮಾಡಲಾಗುವುದು ಎಂದು ನಳಿನ್ ಕುಮಾರ್ ಹೇಳಿದರು.ಪುರಾಣದ ಕಥೆಗಳು ಇಂದು ಜನರ ಮನದಲ್ಲಿ ಹಾಸುಹೊಕ್ಕಾಗಲು ಮುಖ್ಯ ಕಾರಣ ಯಕ್ಷಗಾನ ಕಲಾವಿದರು. ಯಕ್ಷಗಾನದ ಮೂಲಕ ಪುರಾಣದ ಅಂಶಗಳನ್ನು ಜನತೆಗೆ ತಲುಪಿಸುವ ಕಲಾವಿದರು ನಡೆದಾಡುವ ವಿಶ್ವಕೋಶವಿದ್ದಂತೆ ಎಂದರು.
ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ಕರಾವಳಿಯ ಹೆಮ್ಮೆಯ ಕಲೆಯಾಗಿರುವ ಯಕ್ಷಗಾನ ಇದೀಗ ಅಂಚೆ ಚೀಟಿಯ ಮೂಲಕ ವಿಶ್ವಾದ್ಯಂತ ಪರಿಚಯವಾಗಲಿದೆ ಎಂದರು.ಯಕ್ಷಗಾನ ವಿದ್ವಾಂಸ ಡಾ.ಪ್ರಭಾಕರ ಜೋಶಿ ಮಾತನಾಡಿ, ಅಂಚೆ ಚೀಟಿ ರಾಯಭಾರದ ಕೆಲಸ ಮಾಡುತ್ತಿದೆ. ಇಲ್ಲಿನ ಸಂಪ್ರದಾಯ ಕಲೆಗಳನ್ನು ಪರಿಚಯಿಸಲು ಅಂಚೆ ಚೀಟಿ ಪ್ರಧಾನ ಪಾತ್ರ ವಹಿಸಬಲ್ಲುದು ಎಂದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಯಕ್ಷಧ್ರುವ ಪಟ್ಲ ಫೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಎಂಆರ್‌ಪಿಎಲ್‌ನ ಅಧಿಕಾರಿ ರುಡಾಲ್ಫ್ ನೊರೋನ್ಹಾ ಮತ್ತಿತರರು ಮಾತನಾಡಿದರು. ಅಂಚೆ ಇಲಾಖೆಯ ದಕ್ಷಿಣ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಎಲ್.ಕೆ. ಡ್ಯಾಶ್ ಇದ್ದರು. ದೇವದಾಸ್ ಶೆಟ್ಟಿ ನಿರ್ವಹಿಸಿದರು.ಅಂಚೆ ಚೀಟಿ ವಿಶೇಷತೆ ಏನು?
ಈ ಅಂಚೆ ಚೀಟಿಯ ಪ್ರಾಯೋಜಕತ್ವವನ್ನು ಸರ್ಕಾರಿ ಸ್ವಾಮ್ಯದ ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ವಹಿಸಿದ್ದು, 5.30 ಲಕ್ಷ ರು.ಗಳನ್ನು ಅಂಚೆ ಇಲಾಖೆಗೆ ಬಿಡುಗಡೆಗೊಳಿಸಿದೆ. 5 ರು. ಮುಖಬೆಲೆಯ ಯಕ್ಷಗಾನ ಅಂಚೆಚೀಟಿಯಲ್ಲಿ ತೆಂಕು- ಬಡಗು ಎರಡೂ ತಿಟ್ಟುಗಳಿಗೆ ಸಮಾನ ಪ್ರಾಧಾನ್ಯತೆ ನೀಡಲಾಗಿದ್ದು, ಎರಡೂ ತಿಟ್ಟುಗಳ ರೇಖಾಚಿತ್ರವನ್ನು ಅಂಚೆಚೀಟಿಯಲ್ಲಿ ಮೂಡಿಸಲಾಗಿದೆ. ಈ ಹಿಂದೆ ಕೆರೆಮನೆ ಶಿವರಾಮ ಹೆಗಡೆ ಹಾಗೂ ಕೆರೆಮನೆ ಶಂಭು ಹೆಗಡೆ ಅವರ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆಗೊಳಿಸಲಾಗಿತ್ತು. ಆದರೆ ಯಕ್ಷಗಾನವನ್ನೇ ವಿಷಯಾಧಾರಿತವಾಗಿ ಅಂಚೆ ಚೀಟಿ ಬಿಡುಗಡೆ ಇದೇ ಮೊದಲು.