ಸಾರಾಂಶ
ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರ ಆಯೋಜಿಸಿದ್ದ ೨೦ ದಿವಸಗಳ ‘ನಲಿ ಕುಣಿ’ ಯಕ್ಷಗಾನ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಬಾಳೆಕುದ್ರು ಮಠದ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹಂಗಾರಕಟ್ಟೆ
ಯಕ್ಷಗಾನ ಒಂದು ಆರಾಧನಾ ಕಲೆ. ಇದರ ಮುಖ್ಯ ಆಶಯ ಸಂಸ್ಕೃತಿ ಉಳಿಸುವುದು, ಸಂಸ್ಕಾರ ಬೆಳೆಸುವುದು. ಪ್ರದರ್ಶನಗಳಿಂದ ಧರ್ಮ ಪ್ರಚಾರವಾಗುತ್ತದೆ, ಭಾರತೀಯ ಸಂಸ್ಕೃತಿ ಉಳಿಯುವಲ್ಲಿ ಸಹಕರಿಸಿ ಜನಮಾನಸದ ಒಳಗೆ ಪುರಾಣಗಳ ಆಶಯ ಗಟ್ಟಿ ಮಾಡುತ್ತದೆಎಂದು ಬಾಳೆಕುದ್ರು ಮಠದ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರ ಆಯೋಜಿಸಿದ್ದ ೨೦ ದಿವಸಗಳ ‘ನಲಿ ಕುಣಿ’ ಯಕ್ಷಗಾನ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ದೇಹದಂಡನೆಯ ಕಲೆ ಭಗವಂತನಿಗೆ ಪ್ರಿಯವಾದದ್ದು. ಕಲೆಯಿಂದ ಸಂಸ್ಕೃತಿಯ ಉದ್ಧಾರವಾಗಬೇಕು. ಮನಸ್ಸು ವಿಕಾಸವಾಗಬೇಕು. ಆದರೂ ಯಕ್ಷಗಾನ ಇತ್ತೀಚಿಗೆ ಭಕ್ತಿ ಹೀನವಾದ, ಲೌಕಿಕ ಪ್ರಸಂಗಗಳ, ಶಾಸ್ತ್ರ ವಿರುದ್ಧ ಸಂಭಾಷಣೆಗಳ, ಮನೋವಿಕಾರತೆ ಹೊಂದಿರುವುದನ್ನು ಗಮನಿಸುತ್ತಿದ್ದೇವೆ. ಹಾಗಾಗಬಾರದು ಎಂದು ಅವರು ಆಶಿಸಿದರು.
ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ. ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಲೆಕ್ಕಪತ್ರ ಪರಿಶೋಧಕ ಜತೀಂದ್ರ ಮರವಂತೆ ಉಪಸ್ಥಿತರಿದ್ದರು. 20 ದಿವಸಗಳ ಶಿಬಿರದ ಪ್ರಾಚಾರ್ಯರನ್ನು ಮತ್ತು ಶಿಕ್ಷಕರನ್ನು ಶ್ರೀಗಳು ಗೌರವಿಸಿದರು. ಆರ್ಥಿಕವಾಗಿ ಸಹಕರಿಸಿದ ಮಹನೀಯರನ್ನು ಸನ್ಮಾನಿಸಲಾಯಿತು.ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉಪಸ್ಥಿತಿಯಲ್ಲಿ ಶಿಬಿರಾರ್ಥಿಗಳ ಯಕ್ಷಗಾನ ಪ್ರದರ್ಶನ ಪ್ರದರ್ಶಿಸಲ್ಪಟ್ಟಿತು. ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ಸ್ವಾಗತಿಸಿದರು. ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸೀತಾರಾಮ ಸೋಮಯಾಜಿ ವಂದಿಸಿದರು.