ಯಲಬುರ್ಗಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ

| Published : Sep 24 2024, 01:50 AM IST

ಸಾರಾಂಶ

ಎಚ್.ಐ.ವಿ. ಏಡ್ಸ್ ತಡೆ ಜಾಗೃತಿ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲಾಮಟ್ಟದಲ್ಲಿ ನಡೆದ ಕಬ್ಬಡಿ ಪಂದ್ಯಾವಳಿಯಲ್ಲಿ ಪುರುಷ ವಿಭಾಗದಲ್ಲಿ ಯಲಬುರ್ಗಾದ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಬಹುಮಾನ ಪಡೆಯಿತು.

ಕಬಡ್ಡಿ ಪಂದ್ಯಾವಳಿ: ಮಹಿಳಾ ವಿಭಾಗದಲ್ಲಿ ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಬಹುಮಾನ

ಕನ್ನಡಪ್ರಭ ವಾರ್ತೆ ಕೊಪ್ಪಳ

ಎಚ್.ಐ.ವಿ. ಏಡ್ಸ್ ತಡೆ ಜಾಗೃತಿ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲಾಮಟ್ಟದಲ್ಲಿ ನಡೆದ ಕಬ್ಬಡಿ ಪಂದ್ಯಾವಳಿಯಲ್ಲಿ ಪುರುಷ ವಿಭಾಗದಲ್ಲಿ ಯಲಬುರ್ಗಾದ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಬಹುಮಾನ ಪಡೆಯಿತು. ಮಹಿಳಾ ವಿಭಾಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎ ತಂಡ ಪ್ರಥಮ ಬಹುಮಾನ ಪಡೆಯಿತು. ಪುರುಷರ ವಿಭಾಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳ ದ್ವಿತೀಯ ಬಹುಮಾನ ಹಾಗೂ ಕೊಪ್ಪಳ ವೈದ್ಯಕೀಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ತೃತೀಯ ಬಹುಮಾನ ಪಡೆದರು.

ಮಹಿಳಾ ವಿಭಾಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಿ ತಂಡ ದ್ವಿತೀಯ ಬಹುಮಾನ ಪಡೆದರು. ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನಕಗಿರಿ ಇವರು ತೃತೀಯ ಬಹುಮಾನ ಪಡೆದರು.

ಈ ಪಂದ್ಯಾವಳಿಯಲ್ಲಿ ಪುರುಷ ವಿದ್ಯಾರ್ಥಿಗಳ 13 ತಂಡಗಳು ಮತ್ತು ಮಹಿಳಾ ವಿದ್ಯಾರ್ಥಿಗಳ 5 ತಂಡಗಳು ಭಾಗವಹಿಸಿದ್ದವು. ವಿಜೇತರಾದ ವಿದ್ಯಾರ್ಥಿಗಳಿಗೆ ಟ್ರೋಫಿ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ವಿವಿಧ ಪದವಿ ಹಾಗೂ ಸಮಾನಾಂತರ ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ದೈಹಿಕ ಶಿಕ್ಷಕರಾದ ಶರಣಬಸವ ಬಿ., ಬಸವರಾಜ ಎ., ಗದಿಗೆಪ್ಪ, ಲೋಹಿತ್‌ಗೌಡ, ಆನಂದ್, ಶಂಕರ್, ಬಸವರಾಜ ಎಚ್., ವಿರೂಪಾಕ್ಷಪ್ಪ, ಶರಣಬಸವಸ್ವಾಮಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಪಂದ್ಯಾವಳಿಯನ್ನು ಉತ್ತಮವಾಗಿ ನಡೆಸಿದ್ದಕ್ಕೆ ಎಲ್ಲ ಶಿಕ್ಷಕರಿಗೆ ಅಭಿನಂದನೆ ತಿಳಿಸಲಾಯಿತು.

ಪಂದ್ಯಾವಳಿಯ ಮುಕ್ತಾಯದ ನಂತರ ವೇದಿಕೆ ಕಾರ್ಯಕ್ರಮ ನಡೆಯಿತು. ಡಾ. ಶಶಿಧರ್ ಎ., ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಬೆಂಗಳೂರು ಅವರು ಕೇವಲ 10 ಜಿಲ್ಲೆಗಳಿಗೆ ಕಬ್ಬಡಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲು ಸೂಚಿಸಿದ್ದರು. ಅದರಂತೆ ಕೊಪ್ಪಳ ಜಿಲ್ಲೆಯಲ್ಲಿ ಈ ಪಂದ್ಯಾವಳಿ ನಡೆಸಲಾಗಿದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಎಚ್‌ಐವಿ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಈ ರೀತಿಯ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ಯುವಕರಲ್ಲಿ ಎಚ್.ಐ.ವಿ. ಏಡ್ಸ್ ಕುರಿತು ತಿಳಿವಳಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಡ್ಯಾಪ್ಕೋ, ಐಸಿಟಿಸಿ, ಎ.ಆರ್.ಟಿ. ಎನ್.ಟಿ.ಇ.ಪಿ. ಸಿಬ್ಬಂದಿ, ಸ್ನೇಹಾ ಮಹಿಳಾ ಸಂಘ, ಚೈತನ್ಯ ನಗರ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ,ಹೊಸಬೆಳಕು ಎಲ್.ಡಬ್ಲೂ.ಎಸ್. ಕಾರ್ಯಕ್ರಮ, ಸಂರಕ್ಷ ಸಿ.ಎಸ್.ಸಿ. ಮತ್ತು ಇತರರು ಭಾಗವಹಿಸಿದ್ದರು.