ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನವನ್ನು ಅಧಿಕಾರ ಹಂಚಿಕೆ ಒಡಂಬಡಿಕೆಯಂತೆ ಮೂವರಿಗೆ ಹಂಚಿಕೆ ಮಾಡಲಾಗಿತ್ತು. ಅದರಂತೆ ಮೊದಲು ಹರಿಪ್ರಸಾದ್ , ನಂತರ ಭಾನುಪ್ರಿಯಾ ಅಧಿಕಾರ ನಡೆಸಿದ್ದರು. ಉಳಿದ ಅವಧಿಗೆ ಯಲ್ಲಮ್ಮ ನರಸಿಂಹಮೂರ್ತಿ ಆಯ್ಕೆಗೊಳ್ಳುವ ಮೂಲಕ ಪುರಸಭೆಯ ಮೊದಲ ಅವಧಿಯ ಮೂರನೇ ಅಧ್ಯಕ್ಷರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರ

ಬಿಡದಿ ಪುರಸಭೆ ಅಧ್ಯಕ್ಷರಾಗಿ 20ನೇ ವಾರ್ಡಿನ ಜೆಡಿಎಸ್ ನ ಯಲ್ಲಮ್ಮ ನರಸಿಂಹಮೂರ್ತಿ ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ‌. ಈ ಹಿಂದೆ ಅಧ್ಯಕ್ಷರಾಗಿದ್ದ ಭಾನು ಪ್ರಿಯಾ ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಸ್ಥಾನದ ಚುನಾವಣಾ ಪ್ರಕ್ರಿಯೆ ನಡೆಯಿತು.

ವೃಷಭಾವತಿಪುರ ( 20 ನೇ ವಾರ್ಡ್ ) ಕ್ಷೇತ್ರ ಜೆಡಿಎಸ್ ಸದಸ್ಯೆ ಯಲ್ಲಮ್ಮ ನರಸಿಂಹಮೂರ್ತಿ ಅವರನ್ನು ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾದ ತಹಸೀಲ್ದಾರ್ ತೇಜಸ್ವಿನಿ ಅವಿರೋಧ ಆಯ್ಕೆ ಘೋಷಿಸಿದರು. ಪುರಸಭೆ ಮುಖ್ಯಾಧಿಕಾರಿ ಪ್ರಮೀಳಮ್ಮ ಇದ್ದರು.

ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನವನ್ನು ಅಧಿಕಾರ ಹಂಚಿಕೆ ಒಡಂಬಡಿಕೆಯಂತೆ ಮೂವರಿಗೆ ಹಂಚಿಕೆ ಮಾಡಲಾಗಿತ್ತು. ಅದರಂತೆ ಮೊದಲು ಹರಿಪ್ರಸಾದ್ , ನಂತರ ಭಾನುಪ್ರಿಯಾ ಅಧಿಕಾರ ನಡೆಸಿದ್ದರು. ಉಳಿದ ಅವಧಿಗೆ ಯಲ್ಲಮ್ಮ ನರಸಿಂಹಮೂರ್ತಿ ಆಯ್ಕೆಗೊಳ್ಳುವ ಮೂಲಕ ಪುರಸಭೆಯ ಮೊದಲ ಅವಧಿಯ ಮೂರನೇ ಅಧ್ಯಕ್ಷರಾಗಿದ್ದಾರೆ.

ಈ ವೇಳೆ ನೂತನ ಅಧ್ಯಕ್ಷೆ ಯಲಮ್ಮ ನರಸಿಂಹಮೂರ್ತಿ ಅವರನ್ನು ಅಭಿನಂದಿಸಿದ ಮಾಜಿ ಶಾಸಕ ಎ.ಮಂಜುನಾಥ್ , ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಬಿಡದಿ ಪುರಸಭೆ ಅಧ್ಯಕ್ಷ ಸ್ಥಾನವನ್ನು ಅಧಿಕಾರ ಹಂಚಿಕೆ ಒಡಂಬಡಿಕೆಯಂತೆ ಹರಿಪ್ರಸಾದ್ ಮತ್ತು ಭಾನುಪ್ರಿಯಾ ಅಲಂಕರಿಸಿದ್ದರು. ಈಗ ಯಲ್ಲಮ್ಮ ನರಸಿಂಹಮೂರ್ತಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಉತ್ತಮವಾಗಿ ಆಡಳಿತ ನಡೆಸಲಿ ಎಂದು ಶುಭ ಹಾರೈಸಿದರು.

ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಬಿಡದಿಗೆ ವಿಶೇಷ ಪ್ಯಾಕೇಜ್ ನಲ್ಲಿ ₹10 ಕೋಟಿ ಅನುದಾನ ನೀಡಿದ್ದರು. ಅಲ್ಲದೆ, ನಾನು ಶಾಸಕನಾಗಿದ್ದ ಅವಧಿಯಲ್ಲಿ 23 ವಾರ್ಡುಗಳಿಗೆ ಯುಜಿಡಿ , ದಿನ 24 ಗಂಟೆ ಕುಡಿಯುವ ನೀರು, ಯುಜಿ ಕೇಬಲ್ ಹಾಗೂ ಗ್ಯಾಸ್ ಪೈಪ್ ಲೈನ್ ಸಂಪರ್ಕ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆ ಎಲ್ಲ ಕಾಮಗಾರಿಗಳು ಮಂದಗತಿಯಲ್ಲಿ ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಈಗ ಕಾಂಗ್ರೆಸ್ ಸರ್ಕಾರದಲ್ಲಿ ಹೆಚ್ಚಿನ ಅನುದಾನ ತಂದು ಕೆಲಸ ಮಾಡಲು ಹೊರಟಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಬಿಡದಿ ಪಟ್ಟಣ ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕು ಎಂಬುದಷ್ಟೇ ನಮ್ಮ ಗುರಿ. ಇದಕ್ಕಾಗಿ ಜೆಡಿಎಸ್ ಸದಸ್ಯರು ಸಂಪೂರ್ಣ ಸಹಕಾರ ನೀಡುತ್ತಾರೆ. ಕೈಗಾರಿಕಾ ಪ್ರದೇಶದಲ್ಲಿ ತೆರಿಗೆ ವಸೂಲಿ ವಿಚಾರವಾಗಿ ಕೆಐಎಡಿಬಿ ಮತ್ತು ಬಿಡದಿ ಪುರಸಭೆ ನಡುವೆ ಸ್ವಲ್ಪ ಗೊಂದಲ ಇದೆ. ಅಲ್ಲದೆ, ಸದಸ್ಯರ ನಡುವೆಯೂ ಸ್ವಲ್ಪ ಗೊಂದಲ ಇರುವುದು ನಿಜ. ಮುಂದೆ ನಗರಸಭೆ ಸದಸ್ಯರಾಗುವ ಅವಕಾಶ ಇರುವುದರಿಂದ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಕೆಲಸ ಮಾಡುವಂತೆ ಸೂಚನೆ ನೀಡಿದ್ದೇವೆ ಎಂದು ಎ.ಮಂಜುನಾಥ್ ಹೇಳಿದರು.

ಅಧ್ಯಕ್ಷ ಸ್ಥಾನ ಚುನಾವಣೆಯಿಂದ ದೂರ ಉಳಿದ ಕಾಂಗ್ರೆಸ್ಸಿಗರು:

ಬಿಡದಿ ಪುರಸಭೆಯಲ್ಲಿ ಜೆಡಿಎಸ್ ಸದಸ್ಯರ ಬಲ ಹೆಚ್ಚಿದ್ದು, 23 ಸ್ಥಾನಗಳ ಪೈಕಿ ಜೆಡಿಎಸ್ 13 ಸದಸ್ಯರು, ಕಾಂಗ್ರೆಸ್ ನ 10 ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿದ್ದರು. ಇದರಲ್ಲಿ 21 ನೇ ವಾರ್ಡಿನ ಕಾಂಗ್ರೆಸ್ ಸದಸ್ಯ ಬಿ.ರಾಮಚಂದ್ರಯ್ಯ ನಿಧನದಿಂದ ಒಂದು ಸ್ಥಾನ‌ ಖಾಲಿ ಉಳಿದಿದ್ದು, ಪ್ರಸ್ತುತ ಪುರಸಭೆಯಲ್ಲಿ ಕಾಂಗ್ರೆಸ್ 9 ಸದಸ್ಯರನ್ನು ಹೊಂದಿದೆ. ಮಂಗಳವಾರ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಸದಸ್ಯರ ಸಾಮೂಹಿಕ ಗೈರು ಹಾಜರಿ ಎದ್ದು ಕಾಣುತ್ತಿತ್ತು.

ಪುರಸಭೆ ಉಪಾಧ್ಯಕ್ಷೆ ಆಯಿಷಾ ಖಲೀಲ್, ಸ್ಥಾಯಿ‌ ಸಮಿತಿ ಅಧ್ಯಕ್ಷ ಆರ್.ದೇವರಾಜು, ಸದಸ್ಯರಾದ ಎಚ್.ಎಸ್. ಲೋಹಿತ್ ಕುಮಾರ್, ಹರಿಪ್ರಸಾದ್, ರಾಕೇಶ್, ನಾಗರಾಜು, ಸೋಮಶೇಖರ್, ಕೆ.ಎನ್.ರಮೇಶ್, ಭಾನುಪ್ರಿಯಾ, ಮನು, ಮಂಜುಳಾ, ಲಲಿತಾ, ಸರಸ್ವತ್ತಮ್ಮ, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಮುತ್ತು, ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಮುಖಂಡರಾದ ಖಲೀಲ್, ಬಾನಂದೂರು ಪಾಪಣ್ಣ, ಚಂದ್ರಶೇಖರ್, ನರಸಿಂಹಯ್ಯ ಸೇರಿದಂತೆ ಅನೇಕರು ನೂತನ ಅಧ್ಯಕ್ಷೆ ಯಲಮ್ಮ ನರಸಿಂಹಮೂರ್ತಿ ಅವರನ್ನು ಅಭಿನಂದಿಸಿದರು.