ನಾಳೆಯಿಂದ ಯಮನೂರ್‌ ಚಾಂಗದೇವರ ಜಾತ್ರಾಮಹೋತ್ಸವ

| Published : Mar 17 2025, 12:35 AM IST

ಸಾರಾಂಶ

ಮಹಿಮಾ ಪುರುಷ ಚಾಂಗದೇವ ಸ್ಮರಣೆಗಾಗಿ ಮಾ. 18ರಂದು ಗಂಧಾಭಿಷೇಕ ಹಾಗೂ ಮಾ. 19ರಂದು ಸಂಭ್ರಮದ ಉರೂಸ್ ಜರುಗಲಿದೆ.

ನವಲಗುಂದ: ಹಿಂದೂ-ಮುಸ್ಲಿಮರ ಭಾವೈಕ್ಯದ ಸಂಕೇತ ಸಾರಿದ ಮಹಿಮಾಪುರುಷ ಚಾಂಗದೇವ ಪುಣ್ಯಸ್ಥಳ ಯಮನೂರು. ಅಂತಹ ಮಹಿಮಾ ಪುರುಷನ ಸ್ಮರಣೆಗಾಗಿ ಮಾ. 18ರಂದು ಗಂಧಾಭಿಷೇಕ ಹಾಗೂ ಮಾ. 19ರಂದು ಸಂಭ್ರಮದ ಉರೂಸ್ ಜರುಗಲಿದೆ.

ಅವತಾರ ಪುರುಷರಾಗಿದ್ದ ಚಾಂಗದೇವ ಸಂತ ಪರಂಪರೆಯ ಮಹಾಜ್ಞಾನಿಯಾಗಿ ಸಂಚರಿಸುತ್ತ ಬಂದ ಈ ಯೋಗಿಯೂ ಹಿಂದೂ- ಮುಸ್ಲಿಮರಲ್ಲಿ ಭಾವೈಕ್ಯ ಮೂಡಿಸಿ ಯಮನೂರನ್ನು ಭಕ್ತಿಯ ಸಾಮರಸ್ಯ ಕ್ಷೇತ್ರವನ್ನಾಗಿ ಮಾಡಿದ್ದಾರೆ.

ಚಾಂಗದೇವರು ಈ ಗ್ರಾಮದಲ್ಲಿ ನೆಲೆಸಿ ನರಸಿಂಹ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು ಅಷ್ಟೆ ಅಲ್ಲದೇ ದೇವಸ್ಥಾನದಲ್ಲಿ ಮುಸ್ಲಿಂ ಧರ್ಮದ ಸಂಕೇತವಾದ ಪಂಜಾಗಳು, ಹಿಂದೂ ಧರ್ಮದ ಸಂಕೇತವಾದ ಸಾಲಿಗ್ರಾಮವಿದೆ. ಇದು ದೇವಸ್ಥಾನವೂ ಹೌದು, ದರ್ಗಾವೂ ಹೌದು. ಇದರಿಂದಾಗಿ ಯಮನೂರ ನಾಡಿನ ಭಕ್ತರ ಆರಾಧನಾ ಕ್ಷೇತ್ರವಾಗಿದೆ.

ಚಾಂಗದೇವರು ಹುಲಿಯನ್ನೇ ವಾಹನವನ್ನಾಗಿ ಹಾವನ್ನೆ ಚಾಟಿಯಾಗಿ, ಚೇಳುಗಳನ್ನೇ ಮೂಗುದಾರವಾಗಿ ಮಾಡಿಕೊಂಡು ಸಂಚರಿಸುತ್ತಿದ್ದುದರಿಂದ ಈ ಮಹಾತ್ಮನನ್ನು ಭಕ್ತರು ರಾಜಾಬಾಗಸವಾರ ಎಂದು ಕರೆಯುತ್ತಾರೆ.

ಇವರ ಹಲವಾರು ಪವಾಡಗಳಲ್ಲಿ ಮೈಸೂರು ಮಹಾರಾಜನಾಗಿದ್ದ ಟಿಪ್ಪುವಿನ ಉದರಶೂಲೆ ನಿವಾರಿಸಿದಾಗ ಈ ಸಂತನಲ್ಲೇ ಅಲ್ಲಾನನ್ನು ಕಂಡ ಸುಲ್ತಾನ ಪಂಜಾವನ್ನು ಪೂಜಾ ಸ್ಥಳದಲ್ಲಿಟ್ಟು ಭಕ್ತಿ ಮೆರೆದನಂತೆ. ಅಂದಿನಿಂದ ಈ ಕ್ಷೇತ್ರ ಹಿಂದೂ- ಮುಸ್ಲಿಂ ಭಕ್ತರ ಪುಣ್ಯಕ್ಷೇತ್ರ ಆಗಿದೆ ಎಂದು ಹೇಳಲಾಗುತ್ತಿದೆ.

ಚಾಂಗದೇವರು ತಮ್ಮ ಪೂಜೆ ಸೇರಿದಂತೆ ಮತ್ತಿತರ ಧರ್ಮಾಚರಣೆಗೆ ತಮ್ಮ ಅಂತರಂಗದ ಶಿಷ್ಯನಾದ ಕ್ಷೇತ್ರೋಜಿರಾವ್ ಬರ್ಗೆ ಅವರಿಗೆ ವಹಿಸಿಕೊಟ್ಟಿದ್ದರು. ಅಲ್ಲಿಂದ ಈ ವರೆಗೂ ಬರ್ಗೆ ಕುಟುಂಬಸ್ಥರೆ ಚಾಂಗದೇವರ ಪೂಜೆ ನೆರವೇರಿಸಿಕೊಂಡು ಬಂದಿದ್ದಾರೆ.

ಮಾ. 18ರಂದು ಬೆಳಗ್ಗೆ ನಡೆಯುವ ಗಂಧಾಭಿಷೇಕದ ಮೆರವಣಿಗೆ ಬರ್ಗೆ ಮನೆತನದ ಬ್ರಹ್ಮಚಾರಿಗಳ ನೇತೃತ್ವದಲ್ಲಿ ನಡೆಯಲಿದೆ. ಒಟ್ಟಾರೆ ವರ್ಷದಿಂದ ವರ್ಷಕ್ಕೆ ತನ್ನ ಮಹಿಮೆ ಸಾರುತ್ತ ಭಕ್ತರನ್ನು ಆಕರ್ಷಿಸುತ್ತ ಪುಣ್ಯಕ್ಷೇತ್ರವಾಗಿ ಯಮನೂರ ಬೆಳೆಯುತ್ತಲೇ ಸಾಗಿದೆ.ನೀರಿನಿಂದ ದೀಪ

ನನ್ನ ಕ್ಷೇತ್ರದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತ ಸಾರಿದ ಯಮನೂರ ಚಾಂಗದೇವರ ಜಾತ್ರೆಯ ವಿಶೇಷತೆ ಎಂದರೆ, ಬೆಣ್ಣಿಹಳ್ಳದ ನೀರಿನಿಂದಲೇ ಸಂತರು ದೀಪ ಬೆಳಗಿಸುವ ಪ್ರತೀತಿ ಇದೆ. ರಾಜ್ಯ ಹೊರರಾಜ್ಯದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

- ಎನ್.ಎಚ್. ಕೋನರಡ್ಡಿ, ಶಾಸಕಜಾತ್ರೆ, ಉರೂಸ್

12ನೇ ಶತಮಾನದಲ್ಲಿ ಜೀವಿಸಿದ್ದ ಚಾಂಗದೇವನಿಗೆ ಇಲ್ಲಿ ದೇವಸ್ಥಾನ ನಿರ್ಮಿಸಿದ್ದು ಭಾವೈಕ್ಯತೆಯ ಸಂಕೇತವೇ. ಒಂದು ಕಡೆ ಆತನಿಗೆ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿದರೆ, ಜಾತ್ರೆಯ 2ನೇ ದಿನ ಚಾಂಗದೇವನ ಹೆಸರಿನಲ್ಲಿ ಉರೂಸ್‌ ಕೂಡ ನೆರವೇರುತ್ತದೆ.

- ವಿನೋದರಾವ್ ಬರ್ಗೆ, ದೇವಸ್ಥಾನ ಅರ್ಚಕರುಮಾರ್ಗ ಬದಲಾವಣೆ

ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಮನೂರ ಚಾಂಗದೇವರ ಜಾತ್ರೆ ನಡೆಯುವುದರಿಂದ ವಾಹನ ದಟ್ಟಣೆ ನಿಯಂತ್ರಿಸಲು ಭಾರಿ ಹಾಗೂ ಲಘು ವಾಹನಗಳನ್ನು ಹುಬ್ಬಳ್ಳಿ ಕುಸುಗಲ್‌ನಿಂದ ಬ್ಯಾಹಟ್ಟಿ, ಅಳಗವಾಡಿ, ನರಗುಂದ ಮಾರ್ಗವಾಗಿ ಸಂಚರಿಸುವಂತೆ ಮಾರ್ಗ ಬದಲಾಯಿಸಲಾಗಿದೆ.

- ಜನಾರ್ದನ ಭಟ್ರಳ್ಳಿ, ನವಲಗುಂದ ಪಿಎಸ್ಐಮಂಗಳಾರತಿ, ನಮಾಜ್

ಚಾಂಗದೇವನಿಗೆ ಬೆಳ್ಳಿಯ ಕುದುರೆ, ಪಾದುಕೆ ಸಮರ್ಪಿಸಿ ಹರಕೆ ಹೊತ್ತರೆ ಅವರ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎನ್ನುವ ನಂಬಿಕೆಯೇ ಇದಕ್ಕೆ ಕಾರಣ. ಒಂದು ಕಡೆ ಹಿಂದೂಗಳು ಮಂಗಳಾರತಿ ಮಾಡುತ್ತಿದ್ದರೆ, ಮುಸ್ಲಿಮರು ನಮಾಜ್ ಮಾಡುವ ಮೂಲಕ ಚಾಂಗದೇವನನ್ನು ಸ್ಮರಿಸುತ್ತಾರೆ.

- ವಿನಾಯಕ ಬರ್ಗೆ, ಬರ್ಗೆ ಮನೆತನದವರು