ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಗೊಬ್ಬರ ತುಂಬಿಕೊಂಡು ಬರುತ್ತಿದ್ದ ಲಾರಿಯ ಬ್ರೇಕ್ ಫೆಲ್ಯೂರ್ ಆಗಿ ಬೇಕರಿ ಹಾಗೂಬಳೆ ಅಂಗಡಿಗೆ ನುಗ್ಗಿದ ಪರಿಣಾಮ ಬೇಕರಿ ಮುಂದೆ ನಿಂತಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ ಓರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿರುವ ಘಟನೆ ಕೋಳಾಲ ಗ್ರಾಮದಲ್ಲಿ ನಡೆದಿದೆ.ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಕೇಂದ್ರದಲ್ಲಿ ಮಂಗಳವಾರ ಮಧ್ಯಾಹ್ನ ೧೨ ಗಂಟೆ ತುಮಕೂರಿನಿಂದ ಕೋಳಾಲದ ಗೊಬ್ಬರದ ಅಂಗಡಿಗೆ ಗೊಬ್ಬರ ತುಂಬಿಕೊಂಡು ಬರುತ್ತಿದ್ದ ಲಾರಿ ಇಳಿ ಜಾರಿನಲ್ಲಿ ಲಾರಿಯ ಬ್ರೇಕ್ ಫೆಲ್ಯೂರ್ ಆಗಿ ವೇಗವಾಗಿ ಬಂದು ಬಸ್ ನಿಲ್ದಾಣದಲ್ಲಿರುವ ಬಸವೇಶ್ವರ ಬೇಕರಿ ಹಾಗೂ ಪಕ್ಕದ ಬಳೆ ಅಂಗಡಿಗೆ ಗುದ್ದಿದೆ. ಬೇಕರಿ ಮುಂದೆ ಇದ್ದ ಕಾಟೇನಹಳ್ಳಿ ಗ್ರಾಮದ ರಂಗಶಾಮಯ್ಯ (೬೫) ಪುರದಹಳ್ಳಿ ವಾಸಿ ಬೈಲಪ್ಪ (೬೫) ಹಾಗೂ ಕೋಳಾಲದ ಜಯಣ್ಣ (೫೫) ಮೃತಪಟ್ಟ ದುರ್ದೈವಿಗಳು. ಅಪಘಾತದಲ್ಲಿ ೫ ಜನರು ಗಾಯಗೊಂಡಿದ್ದು, ಸಿದ್ದಗಂಗಾ ಆಸ್ಪತ್ರೆಯಲ್ಲಿ ತಾಪಂ ಮಾಜಿ ಸದಸ್ಯೆ ಸಿದ್ದಗಂಗಮ್ಮ, ವಡ್ಡೇರಹಳ್ಳಿ ಕಾಂತರಾಜು ಹಾಗೂ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಬಸವೇಶ್ವರ ಬೇಕರಿ ಮಾಲೀಕ ಮಂಜುನಾಥ್, ಕಾಟೇನಹಳ್ಳಿ ಮೋಹನ್ ದಾಖಲಾಗಿದ್ದಾರೆ . ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ತಾಪಂ ಸದಸ್ಯೆ ಸಿದ್ದಗಂಗಮ್ಮ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.ಬೇಕರಿ ಮಾಲೀಕನು ಈ ದುರಂತದಿಂದ ಪಾರಾಗಿದ್ದು. ಹಿಂದೆಯೂ ಕೂಡ ಇದೇ ರೀತಿ ನಡೆದ ಉದಾಹರಣೆ ಇದೆ. ರೋಡ್ ಹಂಪ್ ಇಲ್ಲದ ಕಾರಣ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ಸ್ಥಳೀಯ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.ಸ್ಥಳಕ್ಕೆ ತುಮಕೂರು ಜಿಲ್ಲಾವರಿಷ್ಠಾಧಿಕಾರಿ ಆಶೋಕ್, ಅಡಿಷನಲ್ ಎಸ್ಪಿ ಗೋಪಾಲ್, ಕೊರಟಗೆರೆ ಸಿಪಿಐ ಅನಿಲ್, ಕೋಳಾಲ ಪಿಎಸೈ ಅಭಿಷೇಕ್, ಯೋಗೀಶ್ ಸ್ಥಳಕ್ಕೆ ಬೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಂತಾಪ ಸೂಚಿಸಿದ ಗೃಹ ಸಚಿವ: ಕೋಳಾಲ ಗ್ರಾಮದಲ್ಲಿ ನಡೆದ ದುರಂತದಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದ ತಕ್ಷಣ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ, ಮೃತ ವ್ಯಕ್ತಿಗಳ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.