ಯರಗೋಳ್ ಡ್ಯಾಂ ನೀರಿಗೆ ಕನ್ನ: ನೀರಿನ ಮಟ್ಟ ಕುಸಿದ

| Published : Dec 20 2024, 12:46 AM IST

ಯರಗೋಳ್ ಡ್ಯಾಂ ನೀರಿಗೆ ಕನ್ನ: ನೀರಿನ ಮಟ್ಟ ಕುಸಿದ
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ಮೂರು ತಾಲೂಕಿನ ಜನರಿಗೆ ಯರಗೋಳ್ ಯೋಜನೆಯ ನೀರನ್ನು ಕುಡಿಯುತ್ತಿದ್ದಾರೆ. ಡ್ಯಾಂ ಸುತ್ತಮುತ್ತಲಿನ ರೈತರು ಡ್ಯಾಂನ ನೀರನ್ನು ವ್ಯವಸಾಯ ಹಾಗೂ ಇತರೇ ಕಾರಣಗಳಿಗೆ ಅನಧಿಕೃತವಾಗಿ ಡ್ಯಾಂಗೆ ಪಂಪು ಮೋಟಾರ್‌ಗಳನ್ನು ಅಳವಡಿಸಿ ನೀರನ್ನು ಬಳಸುತ್ತಿರುವ ಕಾರಣ ಡ್ಯಾಂನಲ್ಲಿ ನೀರಿನ ಪ್ರಮಾಣ ಕುಸಿಯುತ್ತಿದೆ.

ಕನ್ನಡಪ್ರಭ ‍ವಾರ್ತೆ ಬಂಗಾರಪೇಟೆ

ಸದಾ ಬರಗಾಲದಿಂದ ಕೂಡಿರುವ ತಾಲೂಕಿನ ಜನರಿಗೆ ನದಿನಾಲೆಗಳಿಲ್ಲದೆ ಕುಡಿಯುವ ನೀರಿಗೆ ಮಳೆ ನೀರನ್ನೇ ಆಶ್ರಯಿಸುವಂತಾಗಿದೆ. ಯರಗೋಳ್ ಡ್ಯಾಂ ನಿರ್ಮಾಣದ ಬಳಿಕ ಮೂರು ತಾಲೂಕಿನ ಪಟ್ಟಣದ ಜನರಿಗೆ ಕುಡಿಯುವ ಮತ್ತು ನೀರಾವರಿ ಯೋಜನೆಗೆ ಸಮೃದ್ಧಿಯಾಗಿ ನೀರು ದೊರೆಯಲಿದೆ ಎಂದು ಭಾವಿಸಲಾಗಿತ್ತು. ಆದರೆ ಈಗ ಈ ನೀರಿಗೂ ಕೆಲವರು ಕನ್ನಹಾಕುತ್ತಿರುವುದರಿಂದ ಮತ್ತೆ ನೀರಿನ ಕೊರತೆ ಉಂಟಾಗುವ ಆತಂಕ ಮೂಡಿಸಿದೆ. ಹೌದು, ತಾಲೂಕಿನ ಬಲಮಂದೆ ಗ್ರಾಪಂಃಯ ಯರಗೋಳ್ ಗ್ರಾಮದಲ್ಲಿ 14 ವರ್ಷಗಳಿಂದ ಕುಂಟುತ್ತಾ ನಿರ್ಮಾಣವಾದ ಬಳಿಕ ಕಳೆದ ವರ್ಷ ಲೋಕಾರ್ಪಣೆಯಾಗಿದ್ದು, ಬಂಗಾರಪೇಟೆ,ಮಾಲೂರು ಮತ್ತು ಕೋಲಾರ ನಗರ ಜನತೆಗೆ ಶಾಶ್ವತ ಕುಡಿಯುವ ನೀರಿನ ಸಲುವಾಗಿ ರೂಪಗೊಂಡಿರುವ ಯೋಜನೆ ಇದಾಗಿದೆ.

ಮೂರು ತಾಲೂಕಿಗೆ ನೀರು

ಈಗಾಗಲೇ ಮೂರು ತಾಲೂಕಿನ ಜನರಿಗೆ ಯರಗೋಳ್ ಯೋಜನೆಯ ನೀರನ್ನು ಕುಡಿಯುತ್ತಿದ್ದಾರೆ. ಡ್ಯಾಂ ಸುತ್ತಮುತ್ತಲಿನ ರೈತರು ಡ್ಯಾಂನ ನೀರನ್ನು ವ್ಯವಸಾಯ ಹಾಗೂ ಇತರೇ ಕಾರಣಗಳಿಗೆ ಅನಧಿಕೃತವಾಗಿ ಡ್ಯಾಂಗೆ ಪಂಪು ಮೋಟಾರ್‌ಗಳನ್ನು ಅಳವಡಿಸಿ ನೀರನ್ನು ಬಳಸಲಾಗುತ್ತಿದೆ. ಇದರಿಂದ ಕುಡಿಯುವ ಸಲುವಾಗಿ ಮಾತ್ರ ಇರುವ ನೀರನ್ನು ಅನ್ಯಕಾರ್ಯಗಳಿಗೆ ಬಳಸುವುದರಿಂದ ನೀರಿನ ಮಟ್ಟ ಕುಸಿಯುವಂತಾಗಿದೆ.

ಯರಗೋಳ್ ಡ್ಯಾಂ ಸುತ್ತಮುತ್ತಲಿನ ದಿನ್ನೂರು, ಪರಮಡಗು, ಯರಗೋಳ್ ಗ್ರಾಮಸ್ಥರು ಹಾಗೂ ಇತರೇ ರೈತರು ಡ್ಯಾಂ ನೀರನ್ನು ಅನಧಿಕೃತವಾಗಿ ವ್ಯವಸಾಯಕ್ಕೆ ಬಳಸುತ್ತಿದ್ದರೂ ಯಾರೂ ಪ್ರಶ್ನಿಸುವವರೇ ಇಲ್ಲವಾಗಿದೆ. ಈ ಹಿಂದೆ ಸಹ ಡ್ಯಾಂ ನಿರ್ಮಾಣ ಹಂತದಲ್ಲಿದ್ದಾಗಲೂ ಕೆಲವರು ನೀರನ್ನು ಪಂಪು ಮೋಟಾರ್‌ ಬಳಸಿ ನೀರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು.

ಡ್ಯಾಂ ನೀರು ಸಾಗಿಸಲು ಪಂಪ್‌

ಈಗ ಮತ್ತೆ ಅದೇ ದಂಧೆ ಮುಂದುವರೆಸಿರುವುದರಿಂದ ಡ್ಯಾಂನಲ್ಲಿ ನೀರಿನ ಮಟ್ಟ ಕುಸಿಯುವಂತಾಗಿದೆ. ಡ್ಯಾಂನಲ್ಲಿ ಲಭ್ಯವಿರುವ ನೀರಿನ ಮಟ್ಟದಿಂದ ಇನ್ನೂ ಒಂದು ವರ್ಷ ಮೂರು ತಾಲೂಕಿನ ಜನರಿಗೆ ಯಾವುದೇ ಅಡ್ಡಿಯಿಲ್ಲದೆ ಕುಡಿಯುವ ನೀರನ್ನು ಪೂರೈಸಬಹುದು.ಆದರೆ ಹಗಲು ರಾತ್ರಿ ವ್ಯವಸಾಯಕ್ಕೆ ಹಾಗೂ ಅನ್ಯಕಾರ್ಯಗಳಿಗೆ ಡ್ಯಾಂ ನೀರನ್ನು ಬಳಸುವುದರಿಂದ ನೀರಿನ ಮಟ್ಟ ಕುಸಿದು ಮುಂದೆ ನೀರಿಗೆ ಅಭಾವ ಉಂಟಾಗಬಹುದು ಎಂಬ ಆತಂಕ ಎದುರಾಗಿದೆ.

ಕಳೆದ ವರ್ಷದಿಂದ ತಾಲೂಕಿನಲ್ಲಿ ನಿರೀಕ್ಷೆಯಷ್ಟು ಪ್ರಮಾಣದಲ್ಲಿ ಮಳೆಯಾಗದ ಕಾರಣ ಕೆರೆಕುಂಟೆಗಳಲ್ಲಿ ನೀರಿಲ್ಲ, ಯರಗೋಳ್ ಡ್ಯಾಂಗೂ ನೀರೂ ಹೆಚ್ಚಾಗಿ ಹರಿದು ಬಂದಿಲ್ಲ. ಡ್ಯಾಂನಲ್ಲಿರುವ ನೀರು ಇನ್ನೂ ವರ್ಷ ಮಳೆಯಾಗದಿದ್ದರೂ ಮೂರು ಪಟ್ಟಣಗಳಿಗೆ ಕುಡಿಯುವ ನೀರಿಗೆ ಅಭಾವ ಉಂಟಾಗದು. ಆದರೆ ಎಗ್ಗಿಲ್ಲದೆ ಡ್ಯಾಂ ನೀರನ್ನು ದುರ್ಬಳಕೆ ಮಾಡಿದರೆ ನೀರಿನ ಅಭಾವ ಉಂಟಾಗಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಗುತ್ತಿಗೆ ಅವಧಿ ಪೂರ್ಣ

ಡ್ಯಾಂ ಪೂರ್ಣಗೊಂಡು ಮೂರು ವರ್ಷಗಳ ಕಾಲ ಗುತ್ತಿಗೆದಾರರೇ ಡ್ಯಾಂ ನಿರ್ವಹಣೆ ಮಾಡುತ್ತಿದ್ದರು. ಈಗ ಅವರ ಅವಧಿ ಮುಗಿದಿದ್ದು, ಮುಂದೆ ಯಾರು ನಿರ್ವಹಣೆ ಮಾಡುತ್ತಾರೆ ಎಂಬುದು ನಿಗೂಡವಾಗಿದೆ.ಯರಗೋಳ್ ಡ್ಯಾಂನ ಒಟ್ಟು ನೀರಿನ ಶೇಖರಣೆ ಸಾಮರ್ಥ್ಯ 500 ಎಂಸಿಎಫ್ಟಿಯಾಗಿದ್ದು ಸಧ್ಯಕ್ಕೆ ಡ್ಯಾಂನಲ್ಲಿ 330 ಎಂಸಿಎಫ್ಟಿಯಷ್ಟು ನೀರು ಲಭ್ಯವಿದೆ. ತಾಲೂಕು ಆಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಯರಗೋಳ್ ಡ್ಯಾಂ ನೀರು ದುರ್ಬಳಕೆಯಾಗದಂತೆ ತಡೆಗಟ್ಟಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.