23ರಿಂದ ಮಾಲೂರಿಗೆ ಯರಗೋಳ್‌ ನೀರು

| Published : Jun 21 2024, 01:00 AM IST

ಸಾರಾಂಶ

ಸೋಮವಾರದಿಂದ ಪಟ್ಟಣದ 12 ವಾರ್ಡುಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ೧೫ ದಿನಗಳ ಕಾಲ ಫೈಪುಗಳಿಂದ ಬರುವ ಯರಗೋಳು ನೀರನ್ನು ಕುಡಿಯಲು ಬಳಸದೆ ಇತರೇ ಉದ್ದೇಶಕ್ಕೆ ಮಾತ್ರ ಬಳಸಬೇಕು

ಕನ್ನಡ ಪ್ರಭವಾರ್ತೆ,ಮಾಲೂರು

ಯರಗೋಳ್‌ ಕುಡಿಯುವ ನೀರಿನ ಯೋಜನೆಯಿಂದ ಪಟ್ಟಣದ ಓವರ್ ಹೆಡ್ ಟ್ಯಾಂಕ್‌ಗೆ ಪೈಪ್ ಲೈನ್ ಮೂಲಕ ನೀರು ಪೂರೈಕೆಯಾಗಿದ್ದು, ಪಟ್ಟಣದ ಜನತೆಯ ಬಹಳ ದಿನದ ಕನಸು ನನಸಾಗಲಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ಪಟ್ಟಣದ ಮಾರುತಿ ಬಡಾವಣೆಯ ಮಾಡ್ರನ್ ಶಾಲೆಯ ಬಳಿ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಅನುದಾನದಡಿ ಶುದ್ಧ ಕುಡಿಯುವ ನೀರು ಸರಬರಾಜಿಗಾಗಿ ನಿರ್ಮಿಸಿರುವ ಓವರ್ ಹೆಡ್ ಟ್ಯಾಂಕಿಗೆ ಪೂರೈಕೆಯಾಗುತ್ತಿರುವ ಯರಗೋಳ್‌ ಡ್ಯಾಂ ನೀರುನ್ನು ಪಟ್ಟಣದ ವಿವಿಧ ವಾರ್ಡುಗಳಿಗೆ ನೀರು ಸರಬರಾಜು ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

23ರಿಂದ ನೀರು ಪೂರೈಕೆ

ಬರುವ ಸೋಮವಾರದಿಂದ ಪ್ರತಿನಿತ್ಯ ೩.೨ ದಶಲಕ್ಷ ಲೀಟರ್ ಶುದ್ಧ ಕುಡಿಯುವ ನೀರು ಪಟ್ಟಣದ ಬಹುತೇಕ ಬಡಾವಣೆಗಳಿಗೆ ಸರಬರಾಜು ಮಾಡಲಾಗುವುದು. ಮಾಲೂರು ಪಟ್ಟಣದ ಜನತೆಗೆ ಇದೊಂದು ವಿಶೇಷವಾದ ದಿನವಾಗಿದ್ದು ಪಟ್ಟಣಕ್ಕೆ ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಕುಡಿಯುವ ನೀರಿನ ಕಾರ್ಯಕ್ರಮದಡಿ ಯರಗೋಳ್‌ ನೀರು ಬಂದ ಸುದಿನವಾಗಲಿದೆ ಎಂದರು.

ಇನ್ನು ಮುಂದೆ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ, ಯಕಗೋಳ್‌ ಡ್ಯಾಮ್‌ನಿಂದ ನೀರು ಸರಬರಾಜು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ೬ ತಿಂಗಳ ಹಿಂದೆ ಉದ್ಘಾಟಿಸಿದ್ದರು. ಆದರೆ ಪಟ್ಟಣಕ್ಕೆ ನೀರು ತಲುಪಿರಲಿಲ್ಲ. ಈ ಹಿಂದೆ ಯರಗೋಳ್‌ ಡ್ಯಾಮ್ ನಿರ್ಮಾಣಕ್ಕೂ ಮೊದಲು ಪೈಪ್ ಲೈನ್ ಮಾಡಲಾಗಿತ್ತು. ಹಾಳಾಗಿದ್ದ ೩೦ ಕಿಲೋಮೀಟರ್ ಪೈಪ್‌ಲೈನ್‌ ಅನ್ನು ಇಲಾಖೆಯ ಅಧಿಕಾರಿಗಳು ಸತತವಾಗಿ ೬ ತಿಂಗಳ ದುರಸ್ತಿಗೊಳಿಸಿದ್ದರಿಂದ ಪಟ್ಟಣಕ್ಕೆ ನೀರು ಹರಿಯುವಂತಾಗಿದೆ ಎಂದರು.

ಕುಡಿಯಲು ಬಳಸಬೇಡಿ

ಇದೇ ಸೋಮವಾರದಿಂದ ಪಟ್ಟಣದ ೧, ೨, ೩, ೭, ೮, ೯, ೧೦, ೧೨, ೧೩, ೧೪, ೧೫, ೨೨ ನೇ ವಾರ್ಡುಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ಮುಂಬರುವ ದಿನಗಳಲ್ಲಿ ಎಲ್ಲ ವಾರ್ಡುಗಳಿಗೂ ಸರಬರಾಜು ಮಾಡಲಾಗುವುದು. ಪೈಪ್‌ಲೈನ್ ಶುದ್ಧೀಕರಣ ಆಗಬೇಕಾಗಿರುವುದರಿಂದ ೧೫ ದಿನಗಳ ಕಾಲ ಫೈಪುಗಳಿಂದ ಬರುವ ಯರಗೋಳು ಯೋಜನೆಯ ನೀರನ್ನು ಕುಡಿಯಲು ಬಳಸದೆ ಇತರೇ ಉದ್ದೇಶಕ್ಕೆ ಮಾತ್ರ ಬಳಸಬೇಕು. ನಂತರದ ದಿನಗಳಲ್ಲಿ ಕುಡಿಯಲು ಬಳಸಬಹುದು. ಈ ಬಗ್ಗೆ ಪುರಸಭೆವತಿಯಿಂದ ಬಡಾವಣೆಗಳಲ್ಲಿ ಅರಿವು ಮೂಡಿಸುವ ಕೆಲಸವಾಗಲಿದೆ ಎಂದರು.

ಎತ್ತಿನಹೊಳೆ ಯೋಜನೆ

ಮುಂದಿನ ದಿನದಲ್ಲಿ ರಾಜ್ಯ ಸರ್ಕಾರದ ಇಚ್ಚಾಶಕ್ತಿಯಿಂದ ಎತ್ತಿನ ಹೊಳೆ ಯೋಜನೆಯ ನೀರು ಮಾಲೂರು ಪಟ್ಟಣದ ದೊಡ್ಡಕೆರೆ ಸೇರಿದಂತೆ ತಾಲೂಕಿನ ಕೆರೆಗಳಿಗೆ ಹರಿಯಲಿದ್ದು,ಪಟ್ಟಣದಲ್ಲಿ ಬಹುಶ ಕುಡಿಯುವ ನೀರಿನ ಕೊರತೆ ನಿವಾರಣೆಯಾಗಲಿದೆ. ತಾಲೂಕಿನಲ್ಲಿ ಕಷ್ಟದ ದಿನಗಳು ದೂರವಾಗಲಿವೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ತಾಲೂಕಿಗೆ ೮೫೦ ಕೋಟಿ ರೂಗಳ ಅನುದಾನವನ್ನು ತರಲಾಗಿದೆ. ೬ ಪಥದ ರಸ್ತೆ, ಫ್ಲೈ ಓವರ್ ಬಸ್ ನಿಲ್ದಾಣ, ಕೆರೆ ಅಭಿವೃದ್ಧಿ, ರಸ್ತೆಗಳ ಅಭಿವೃದ್ಧಿ, ಸೇರಿದಂತೆ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ಪುರಸಭೆ ಆಡಳಿತಾಧಿಕಾರಿ ಕೆ.ರಮೇಶ್, ಪುರಸಭೆ ಸದಸ್ಯರಾದ ಇಮ್ತಿಯಾಜ್ ಖಾನ್, ಎ.ರಾಜಪ್ಪ, ಜಾಕಿರ್ ಖಾನ್, ಮುರುಳಿಧರ್, ಯೋಜನಾ ಪ್ರಾಧಿಕಾರ ಅಧ್ಯಕ್ಷ ನಹಿಂ ಉಲ್ಲಾ ಖಾನ್, ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್, ಅಭಿಯಂತರರಾದ ಶಿವಕುಮಾರ್, ಅಶೋಕ್, ಪುರಸಭೆ ಮುಖ್ಯ ಅಧಿಕಾರಿ ಎಬಿ ಪ್ರದೀಪ್ ಕುಮಾರ್, ಅಭಿಯಂತರೆ ಶಾಲಿನಿ, ಅಭಿಯಂತರ ನಾಗರಾಜ್, ವಕೀಲ ರಮೇಶ್, ಶಬೀರ್, ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸ್, ಆರೋಗ್ಯ ನಿರೀಕ್ಷಕ ರಾಜಣ್ಣ, ಇನ್ನಿತರಿದ್ದರು.