ನಟ ಯಶ್ ಅಭಿನಯದ ಬಹುನಿರೀಕ್ಷಿತ ಬಹುಭಾಷಾ ಚಲನಚಿತ್ರ ‘ಟಾಕ್ಸಿಕ್’ ಬುಧವಾರ ರಾಜ್ಯಾದ್ಯಂತ ತೆರೆಗೆ ಬಂದಿದ್ದು, ಅಭಿಮಾನಿಗಳ ಸಂಭ್ರಮ ಎಲ್ಲೆ ಮೀರಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಟ ಯಶ್ ಅಭಿನಯದ ಬಹುನಿರೀಕ್ಷಿತ ಬಹುಭಾಷಾ ಚಲನಚಿತ್ರ ‘ಟಾಕ್ಸಿಕ್’ ಬುಧವಾರ ರಾಜ್ಯಾದ್ಯಂತ ತೆರೆಗೆ ಬಂದಿದ್ದು, ಅಭಿಮಾನಿಗಳ ಸಂಭ್ರಮ ಎಲ್ಲೆ ಮೀರಿದೆ.

ಬಹುತೇಕ ಕಡೆಗಳಲ್ಲಿ ಥಿಯೇಟರ್‌ಗಳ ಮುಂದೆ ಬೆಳಗ್ಗೆಯಿಂದಲೇ ಅಭಿಮಾನಿಗಳು ಜಮಾಯಿಸಿದ್ದು, ಸಿನೆಮಾ ಟಿಕೆಟ್‌ಗೆ ಮುಗಿಬಿದ್ದ ದೃಶ್ಯ ಕಂಡು ಬಂತು. ಥಿಯೇಟರ್‌ಗಳ ಮುಂದೆ ಹಾಕಲಾಗಿದ್ದ ಯಶ್ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ, ಹೂಮಾಲೆ‌ ಹಾಕಿ, ಆರತಿ ಬೆಳಗಿ, ಕುಂಬಳಕಾಯಿ ಒಡೆದು ಅಭಿಮಾನಿಗಳು ಸಂಭ್ರಮಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಹಾಸನದ ಎಸ್‌ಬಿಜಿ ಮತ್ತು ಗುರು ಚಿತ್ರಮಂದಿರಗಳ ಎದುರು ಅಭಿಮಾನಿಗಳು ತಮಟೆ ಬಾರಿಸಿ, ಪಟಾಕಿ ಸಿಡಿಸಿ, ಸಂಭ್ರಮಿಸಿದರು. ಪಟಾಕಿ‌ ಸಿಡಿಸಿ, ಕುಂಬಳಕಾಯಿ ಒಡೆದು ಮೊದಲ ಶೋಗೆ ಸ್ವಾಗತ ಕೋರಿದರು. ಕಲಬುರಗಿಯ ಶೆಟ್ಟಿ ಮಲ್ಟಿಪ್ಲೆಕ್ಸ್‌ನಲ್ಲಿ ಬೆಳಗ್ಗೆ 6.30ಕ್ಕೆ ಮೊದಲ ಶೋ ಆರಂಭವಾಗಿದ್ದು, ಬೆಳಗ್ಗೆ 5 ಗಂಟೆಯಿಂದಲೇ ಅಭಿಮಾನಿಗಳು ಟಾಕ್ಸಿಕ್‌ ಟೀ ಶರ್ಟ್‌ ಧರಿಸಿ, ಥಿಯೇಟರ್‌ನತ್ತ ಆಗಮಿಸತೊಡಗಿದ್ದರು. ಟಾಕ್ಸಿಕ್‌, ಟಾಕ್ಸಿಕ್‌, ರಾಕಿಭಾಯ್ ಯಶ್ ಎಂದು ಜೈಕಾರ ಕೂಗುತ್ತಿದ್ದರು. ಚಿತ್ರ ಶತದಿನೋತ್ಸವ ಪೂರೈಸಲೆಂದು ಹಾರೈಸಿದರು. ಕೋಲಾರದ ನಾರಾಯಣಿ ಚಿತ್ರಮಂದಿರಕ್ಕೆ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಯುವ ಅಭಿಮಾನಿಗಳ ಸಂಘದಿಂದ ಅಲಂಕಾರ ಮಾಡಲಾಗಿತ್ತು. ಹುಬ್ಬಳ್ಳಿಯ ಸುಧಾ-ಅಪ್ಸರಾ ಚಿತ್ರಮಂದಿರಗಳಲ್ಲಿ ಯಶ್ ಕಟೌಟ್‌ಗೆ ಈಡುಗಾಯಿ ಒಡೆದು ಅಭಿಮಾನಿಗಳು ಸಂಭ್ರಮಪಟ್ಟರು.

ಮಂಡ್ಯದ ಗುರುಶ್ರೀ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಧಾರವಾಡದ ಸಂಗಮ್‌ ಚಿತ್ರಮಂದಿರಕ್ಕೆ ಅಭಿಮಾನಿಗಳು ಕಾರ್‌ಗಳಲ್ಲೂ ಟಾಕ್ಸಿಕ್‌ ಚಿತ್ರದ ಪೋಸ್ಟರ್ ಅಂಟಿಸಿಕೊಂಡು ಬಂದಿದ್ದರು. ದಾವಣಗೆರೆಯಲ್ಲಿ ಅಭಿಮಾನಿಯೊಬ್ಬ ಅಪಘಾತದಲ್ಲಿ ಗಾಯವಾದರೂ ಕಾಲಿಗೆ ಪ್ಲಾಸ್ಟರ್ ಹಾಕಿಕೊಂಡು ಸ್ನೇಹಿತರ ಸಹಾಯದಿಂದ ಥಿಯೇಟರ್ ಗೆ ಬಂದು ಸಿನಿಮಾ ವೀಕ್ಷಿಸಿದ್ದು ವಿಶೇಷವಾಗಿತ್ತು.