ಇಲ್ಲಿನ ಕಲ್ಮಾಡಿ-ಕಿದಿಯೂರು ಮುಖ್ಯರಸ್ತೆಯಲ್ಲಿ ಬಹುವರ್ಷಗಳ ಬೇಡಿಕೆಯಾಗಿದ್ದ ಬಂಕೇರಕಟ್ಟ ಸೇತುವೆ ಕಾಮಗಾರಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿದರು.
ಉಡುಪಿ : ಇಲ್ಲಿನ ಕಲ್ಮಾಡಿ-ಕಿದಿಯೂರು ಮುಖ್ಯರಸ್ತೆಯಲ್ಲಿ ಬಹುವರ್ಷಗಳ ಬೇಡಿಕೆಯಾಗಿದ್ದ ಬಂಕೇರಕಟ್ಟ ಸೇತುವೆ ಕಾಮಗಾರಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿ ಅವರು, ಉದ್ಯಾವರ - ಮಲ್ಪೆ ಸಂಪರ್ಕ ರಸ್ತೆಯ ಈ ಬಂಕೇರಕಟ್ಟ ಸೇತುವೆ ಪ್ರತಿವರ್ಷ ಮಳೆಗಾಲದಲ್ಲಿ ಜಲಾವೃತವಾಗಿ ಜನರಿಗೆ ತೊಂದರೆಯಾಗುತ್ತಿದೆ. ಜೊತೆಗೆ ಸೇತುವೆ ತೀರಾ ಶಿಥಿಲಾವಸ್ಥೆಯಲ್ಲಿದೆ. ಸ್ಥಳೀಯರ ಬೇಡಿಕೆಯಂತೆ ಲೋಕೋಪಯೋಗಿ ಇಲಾಖೆಯ ಮೂಲಕ 5 ಕೋಟಿ ರು. ವೆಚ್ಚದಲ್ಲಿ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ 10 ಮೀಟರ್ ಅಗಲದಲ್ಲಿ ನೂತನ ಸೇತುವೆ ನಿರ್ಮಿಸಲಾಗುತ್ತಿದೆ. ಈಗಾಗಲೇ ಕಳೆದ ವರ್ಷ ಸುಮಾರು 4 ಕೋಟಿ ರು. ವೆಚ್ಚದಲ್ಲಿ ಕಲ್ಮಾಡಿಯಿಂದ ಸಂಪಿಗೆ ನಗರವರೆಗೆ ಫೇವರ್ ಫಿನಿಷ್ ರಸ್ತೆ ಅಭಿವೃದ್ಧಿ ಮಾಡಿದ್ದು, ಸೇತುವೆ ನಿರ್ಮಾಣದ ಬಳಿಕ ವಾಹನ ಸವಾರರಿಗೆ ಅನುಕೂಲವಾಗಲಿದೆ ಎಂದರು.ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರ ಮಾತನಾಡಿ ಈ ರಸ್ತೆ ಮಲ್ಪೆ ಬಂದರಿಗೆ ಆಗಮಿಸುವ ವಾಹನಗಳು ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯವಾಗಿ ಸಾಗುವ ಪ್ರಮುಖ ರಸ್ತೆಯಾಗಿದ್ದು, ನೂತನ ಸೇತುವೆ ನಿರ್ಮಾಣದ ಮೂಲಕ ಸಹಕಾರಿಯಾಗಲಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮೀನುಗಾರ ಮುಖಂಡರಾದ ದಯಾನಂದ ಸುವರ್ಣ, ರಾಮಚಂದ್ರ ಕುಂದರ್, ರತ್ನಾಕರ ಸಾಲ್ಯಾನ್, ದಯಾಕರ ಸುವರ್ಣ, ಜಗನ್ನಾಥ ಕಡೆಕಾರು, ಮಾಜಿ ನಗರಸಭಾ ಸದಸ್ಯ ಸುಂದರ ಕಲ್ಮಾಡಿ ಮತ್ತು ವಿಜಯ ಕೊಡವೂರು, ಅಂಬಲಪಾಡಿ ಗ್ರಾಪಂ ಮಾಜಿ ಸದಸ್ಯರಾದ ಶಶಿಧರ ಸುವರ್ಣ, ರಾಜೇಶ್ ಸುವರ್ಣ, ಭಾರತಿ ಭಾಸ್ಕರ್, ಸುಂದರ ಪೂಜಾರಿ, ಪ್ರಮೋದ್ ಸಾಲ್ಯಾನ್, ಸುಜಾತ ಶೆಟ್ಟಿ, ಉಷಾ ಶೆಟ್ಟಿ, ಸೋಮನಾಥ ಬಿ.ಕೆ. ಮತ್ತಿತರರಿದ್ದರು.