ಸಾರಾಂಶ
- ಮಾಜಿ ಸಂಸದ ಸಿದ್ದೇಶ್ವರ್ ಮೆಚ್ಚಿಸಲು ಹೊರಟಿದ್ದಾರೆ: ದಿನೇಶ ಶೆಟ್ಟಿ ಆರೋಪ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಜನರಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ತಮ್ಮ ಗುರು ಜಿ.ಎಂ. ಸಿದ್ದೇಶ್ವರ್ ಅವರನ್ನು ಮೆಚ್ಚಿಸಲು ಯಶವಂತ ರಾವ್ ಜಾಧವ್ ಹೊರಟಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ವ್ಯಂಗ್ಯವಾಡಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೋರ ಗುರು, ಚಾಂಡಾಲ ಶಿಷ್ಯರಂತೆ ಸುಳ್ಳು ಹೇಳಿ ಜನರ ಮುಂದೆ ಬೆತ್ತಲಾಗಲು ಹೊರಟಿದ್ದಾರೆ. ಅಶೋಕ ಚಿತ್ರ ಮಂದಿರ ಬಳಿ ರೈಲ್ವೆ ಹಳಿ ಪಕ್ಕದಲ್ಲಿ ಪರ್ಯಾಯ ರಸ್ತೆ ನಿರ್ಮಿಸುವ ಉದ್ದೇಶದಿಂದ 10.1.2023ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯ ದರ ನಿರ್ಧರಣಾ ಸಲಹಾ ಸಮಿತಿ ಸಭೆ ನಡೆಸಿ, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದರು.
ಕೇಂದ್ರದಿಂದ ಯಾವುದೇ ಪ್ರಕ್ರಿಯೆ ಬಂದಿರಲಿಲ್ಲ. ಆಗಿನ ಸಂಸದರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ನಂತರ ಡಾ.ಪ್ರಭಾ ಮಲ್ಲಿಕಾರ್ಜುನ ಸಂಸದರಾದ ನಂತರ ಆ.29ರಂದು ಕೇಂದ್ರ ಗಮನಕ್ಕೆ ತಂದು, ಆಡಳಿತ ಮತ್ತು ಆಡಿಟ್ ವೆಚ್ಚ ಸೇರಿಸಿ ₹23.09 ಕೋಟಿಗಳನ್ನು ರೈಲ್ವೆ ಇಲಾಖೆಯಿಂದ ಬಿಡುಗಡೆ ಮಾಡಿಸಿದ್ದಾರೆ. ಹಣವನ್ನು ಪರ್ಯಾಯ ರಸ್ತೆಗೆ ಜಾಗ ನೀಡಿದ ಮಾಲೀಕರಿಗೆ ₹20.80 ಕೋಟಿ ಬಿಡುಗಡೆ ಮಾಡಿ, ರೈಲ್ವೆ ಇಲಾಖೆಗೆ ಜಾಗ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.ಇದೆಲ್ಲಾ ಆಗುವುದರಲ್ಲಿ ಜಿ.ಎಂ. ಸಿದ್ದೇಶ್ವರ ಮಾಜಿ ಸಂಸದರಾಗಿದ್ದರು. ದಾವಣಗೆರೆಯಲ್ಲಿ ಯಾರಾದರೂ ಚುನಾವಣೆಯಲ್ಲಿ ಸೋತು ಆಸ್ತಿ ಮಾಡಿದ್ದಾರೆಂದರೆ ಅದು ಯಶವಂತ ರಾವ್ ಜಾಧವ್ ಮಾತ್ರ. ನಗರಸಭೆ, ದೂಡಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಯಶವಂತ ರಾವ್ ಮಾಡಿದ ಅಕ್ರಮಗಳು ಜನರಿಗೂ ಗೊತ್ತಿದೆ. ಅಂತಹ ವ್ಯಕ್ತಿ ಶಾಮನೂರು ಕುಟುಂಬವನ್ನು ತೇಜೋವಧೆ ಮಾಡುತ್ತಿದ್ದಾರೆ. ಇದನ್ನು ಗಮನಿಸಿದರೆ, ಇಂತಹ ವ್ಯಕ್ತಿಯ ಸಂಸ್ಕೃತಿ, ಸಂಸ್ಕಾರ ಏನೆಂಬುದು ಅರ್ಥವಾಗುತ್ತದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದ ರೌಡಿ ಶೀಟರ್‌ಗಳಿಲ್ಲ. ಇದ್ದರೆ ಅದು ಬಿಜೆಪಿಯಲ್ಲಿ ಮಾತ್ರ ಎಂದು ದಿನೇಶ ಕೆ.ಶೆಟ್ಟಿ ವಿಪಕ್ಷ ಬಿಜೆಪಿಯ ರೌಡಿ ಶೀಟರ್‌ಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದರು.ಪಕ್ಷದ ಮುಖಂಡರಾದ ಎ.ನಾಗರಾಜ, ಮಾಜಿ ಮೇಯರ್‌ಗಳಾದ ಕೆ.ಚಮನ್ ಸಾಬ್, ವಿನಾಯಕ ಪೈಲ್ವಾನ್, ಅನಿತಾ ಬಾಯಿ ಮಾಲತೇಶ, ನಗರಸಭೆ ಮಾಜಿ ಅಧ್ಯಕ್ಷ ಆರ್.ಎಚ್.ನಾಗಭೂಷಣ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಮಂಗಳಮ್ಮ, ವರುಣ ಬೆಣ್ಣೆಹಳ್ಳಿ, ಸತೀಶ, ಜುಬೇರ ಇತರರು ಇದ್ದರು.
- - --22ಕೆಡಿವಿಜಿ3:
ದಾವಣಗೆರೆಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.