ನೀರಾವರಿ ಯೋಜನೆಗಳ ಬಗ್ಗೆ ಯಶವಂತರಾಯ ಧ್ವನಿ

| Published : Mar 22 2025, 02:04 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಗುತ್ತಿಬಸವಣ್ಣ ಏತ ನೀರಾವರಿ ಯೋಜನೆಯ ಕಾಲುವೆ ಕಾಮಗಾರಿ ಪೂರ್ಣಗೊಂಡಿದ್ದು, ಕಾಲುವೆಯ 97 ಕಿ.ಮೀವರೆಗೆ ಮಾತ್ರ ನೀರು ಹರಿಯುತ್ತಿದೆ. ಮುಂದಿನ ಭಾಗಕ್ಕೆ ನೀರು ತಲುಪದಿರುವುದರಿಂದ ಜನ, ಜಾನುವಾರುಗಳಿಗೆ ಹಾಗೂ ಜನರು ಕುಡಿಯುವ ನೀರಿಗಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. 203 ಕಿ.ಮೀವರೆಗೆ ಕಾಲುವೆಯಲ್ಲಿ ನೀರು ಹರಿಸದಿರಲು ಕಾರಣ ಕುರಿತು ಶಾಸಕ ಯಶವಂತರಾಯಗೌಡ ಪಾಟೀಲ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಗುತ್ತಿಬಸವಣ್ಣ ಏತ ನೀರಾವರಿ ಯೋಜನೆಯ ಕಾಲುವೆ ಕಾಮಗಾರಿ ಪೂರ್ಣಗೊಂಡಿದ್ದು, ಕಾಲುವೆಯ 97 ಕಿ.ಮೀವರೆಗೆ ಮಾತ್ರ ನೀರು ಹರಿಯುತ್ತಿದೆ. ಮುಂದಿನ ಭಾಗಕ್ಕೆ ನೀರು ತಲುಪದಿರುವುದರಿಂದ ಜನ, ಜಾನುವಾರುಗಳಿಗೆ ಹಾಗೂ ಜನರು ಕುಡಿಯುವ ನೀರಿಗಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. 203 ಕಿ.ಮೀವರೆಗೆ ಕಾಲುವೆಯಲ್ಲಿ ನೀರು ಹರಿಸದಿರಲು ಕಾರಣ ಕುರಿತು ಶಾಸಕ ಯಶವಂತರಾಯಗೌಡ ಪಾಟೀಲ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದರು.

ಇಂಡಿ ಶಾಖಾ ಕಾಲುವೆ( ಐಬಿಸಿ) ಸ್ಕಾಡಾಗೇಟ್‌ ಅಳವಡಿಸಿರುವ ಮಾದರಿಯಲ್ಲಿಯೇ ಗುತ್ತಿಬಸವಣ್ಣ ಏತ ನೀರಾವರಿ ಕಾಲುವೆಗೆ ಸ್ಕಾಡಾಗೇಟ್‌ ಅಳವಡಿಸುವುದರಿಂದ ನೀರು ಪೋಲಾಗದೇ ನಾಲೆಯ ಕೊನೆಯ ಭಾಗದವರೆಗೆ ತಲುಪಲಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟ ನಿಲುವು ತಿಳಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಉಪಮುಖ್ಯಂತ್ರಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವುಕುಮಾರ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ 1 ಮತ್ತು 2 ಯೋಜನೆಯಡಿ ನಿರ್ಮಿಸಲಾದ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯಡಿ 97.30 ಕಿ.ಮೀ ಕಾಲುವೆ ನಿರ್ಮಿಸಲಾಗಿದೆ. ಅನುಮೋದಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ, ಕಾಲುವೆಯಲ್ಲಿ ನೀರು ಹರಿಸಲಾಗುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರಡಿ ಬಾಕಿ ಕಿ.ಮೀ 97.30 ರಿಂದ ಕಿ.ಮೀ 203 ಕಾಲುವೆ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ. ಆದರೆ, ಕಾಲುವೆಯಲ್ಲಿ ನೀರನ್ನು ಹರಿಸುವುದು ಕೃಷ್ಣಾ ನ್ಯಾಯಾಧೀಕರಣ-2ರ ಅಧಿಸೂಚನೆ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ.ಇಂಡಿ ಏತ ನೀರಾವರಿ ಯೋಜನೆಯ 147 ಕಿ.ಮೀರವರೆಗಿನ ಸ್ಕಾಡಾ ಗೇಟ್‌ಗಳನ್ನು ಅಳವಡಿಸುವ ವಿವರವಾದ ಯೋಜನಾ ವರದಿ (DPR) ತಯಾರಿಸಲು ಸಮಾಲೋಚಕರನ್ನು ನೇಮಿಸುವ ಕಾಮಗಾರಿಗೆ ಟೆಂಡರ್ ಕರೆಯುವ ಪ್ರಸ್ತಾವನೆಯು ಅನುಮೋದನೆ ಹಂತದಲ್ಲಿದೆ. ಅನುದಾನದ ಲಭ್ಯತೆ ಆಧಾರದ ಮೇರೆಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದು ಕ್ರಮ ವಹಿಸಲಾಗುವುದು ಎಂದು ಉತ್ತರಿಸಿದರು.ಮಾವಿನಹಳ್ಳಿ ಕೆರೆ ತುಂಬುವ ಯೋಜನೆಯಡಿ ಅಥವಾ ಯಾವುದಾದರೂ ಒಂದು ಯೋಜನೆಯಡಿ ಸೇರ್ಪಡೆ ಮಾಡಿ ಈ ಗ್ರಾಮದ ಜನ-ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಸರ್ಕಾರ ಕೈಗೊಳ್ಳುವ ಕ್ರಮಗಳ ಕುರಿತು ಸ್ಪಷ್ಟ ಉತ್ತರ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವುಕುಮಾರ ಅವರು, ಮಾವಿನಹಳ್ಳಿ ಕೆರೆಯನ್ನು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1 ಮತ್ತು 2 ರಡಿ ಬರುವ ಇಂಡಿ ಶಾಖಾ ಕಾಲುವೆ 121.50 ಕಿ.ಮೀಗಳ ಮುಖಾಂತರ ತುಂಬಿಸಲು ಯೋಜಿಸಿದ್ದು, ಅನುದಾನ ಲಭ್ಯತೆ ಆಧಾರದ ಮೇರೆಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.ಅಲ್ಲದೇ, ಚೋರಗಿ ಜಿನಗು ಕೆರೆಯನ್ನು ಮುಳವಾಡ ಏತ ನೀರಾವರಿ ಯೋಜನೆಯಡಿಯ ತಿಡಗುಂದಿ ಶಾಖಾ ಕಾಲುವೆ 56 ರಿಂದ 65.585 ಕಿ.ಮೀ ರವರೆಗಿನ ಅಚ್ಚುಕಟ್ಟು ಪ್ರದೇಶವನ್ನು ನೀರಾವರಿಗೊಳಪಡಿಸುವ ಪೈಪ್‌ಲೈನ್ ಡಿಸ್ಟ್ರಿಬ್ಯೂಷನ್ ನೆಟ್ವರ್ಕ್ ನಿರ್ಮಾಣದಿಂದ ತುಂಬಿಸಲು ಯೋಜಿಸಲಾಗಿದೆ. ಈ ಯೋಜನೆಯ ಪ್ಯಾಕೇಜ್ ಕಾಮಗಾರಿ ಅನುಮೋದನೆ ಹಂತದಲ್ಲಿದ್ದು, ಅನುದಾನದ ಲಭ್ಯತೆ ಆಧಾರದ ಮೇರೆಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದು ಕ್ರಮ ವಹಿಸಲಾಗುವುದು ಎಂದು ಉತ್ತರಿಸಿದರು.