ಸಾರಾಂಶ
ಮಕ್ಕಳಲ್ಲಿ ಸರ್ಕಾರಿ ಶಾಲೆಯ ಶೈಕ್ಷಣಿಕ ಗುಣಮಟ್ಟ ಹಾಗೂ ಉತ್ತಮ ಶಾಲಾ ವಾತಾವರಣ ನಿರ್ಮಿಸಬೇಕು. ಶಿಕ್ಷಕರು ಮಕ್ಕಳೊಂದಿಗೆ ಬೆರೆತು ಮಕ್ಕಳಾಗಿಯೇ ಪಾಠ ಮಾಡಿದಾಗ ಮಾತ್ರ ಭವಿಷ್ಯದಲ್ಲಿ ಮಕ್ಕಳು ಉತ್ತಮ ಪ್ರಜೆಗಳಾಗಿ ಹೊರವೊಮ್ಮಲಿಕ್ಕೆ ಸಾಧ್ಯ .
ಕನ್ನಡಪ್ರಭ ವಾರ್ತೆ ಮೈಸೂರು
ವರುಣಾ ವಿಧಾನಸಭಾ ಕ್ಷೇತ್ರದ ಕೆಂಪಿಸಿದ್ದನ ಹುಂಡಿ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ಡಾ. ಯತೀಂದ್ರ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಬ್ಯಾಗ್ ವಿತರಿಸಿ, ಶುಭ ಕೋರಲಾಯಿತು.ಈ ವೇಳೆ ಮಾತನಾಡಿದ ಮೈವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ. ಬಸವರಾಜ ಸಿ. ಜೆಟ್ಟಿಹುಂಡಿ ಅವರು, ಮನುಷ್ಯನಿಗೆ ಸಹಾಯ ಮಾಡುವ ಗುಣ ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ತಾನು ತನ್ನವರು ಎಂದು ಬದುಕುವ ಸ್ಥಿತಿಯಲ್ಲಿ ಇರುವಾಗ ರವಿಕುಮಾರ್ ಅವರು ತಾನು ಓದಿದ ಶಾಲೆಗೆ ಏನಾದರೂ ಸೇವೆ ಸಲ್ಲಿಸಬೇಕೆಂಬ ಕಾಳಜಿಗೆ ಅಭಿನಂದನೆ ಸಲ್ಲಿಸಿದರು.
ಈ ರೀತಿ ಮಕ್ಕಳು ಉತ್ತಮ ಶಿಕ್ಷಣ ಪಡೆದು ಭವಿಷ್ಯದಲ್ಲಿ ಒಳ್ಳೆ ಒಳ್ಳೆ ಸರ್ಕಾರಿ ನೌಕರಿ ಪಡೆದು ತಾವು ಓದಿದ ಶಾಲೆಗೆ ಕೀರ್ತಿ ತರಬೇಕು ಎಂದು ಅಭಿಪ್ರಾಯಪಟ್ಟರು.ಮಕ್ಕಳಲ್ಲಿ ಸರ್ಕಾರಿ ಶಾಲೆಯ ಶೈಕ್ಷಣಿಕ ಗುಣಮಟ್ಟ ಹಾಗೂ ಉತ್ತಮ ಶಾಲಾ ವಾತಾವರಣ ನಿರ್ಮಿಸಬೇಕು. ಶಿಕ್ಷಕರು ಮಕ್ಕಳೊಂದಿಗೆ ಬೆರೆತು ಮಕ್ಕಳಾಗಿಯೇ ಪಾಠ ಮಾಡಿದಾಗ ಮಾತ್ರ ಭವಿಷ್ಯದಲ್ಲಿ ಮಕ್ಕಳು ಉತ್ತಮ ಪ್ರಜೆಗಳಾಗಿ ಹೊರವೊಮ್ಮಲಿಕ್ಕೆ ಸಾಧ್ಯ ಎಂದರು.
ಕಾರ್ಯಕ್ರಮದ ರೂವಾರಿಗಳಾದ ಕೆಂಪಿಸಿದ್ದನಹುಂಡಿ ಗ್ರಾಮದ ಯುವ ಮುಖಂಡ ರವಿಕುಮಾರ್ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷ ವೈ.ಕೆ. ಮಂಜುನಾಥ, ಬ್ಯಾಳಾರು ಮಹೇಶ್ ಕುಮಾರ್, ಗ್ರಾಮದ ಕಾಂಗ್ರೆಸ್ ಮುಖಂಡರಾದ ರಾಜಶೇಖರ್, ಉಮೇಶ್, ಯಜಮಾನರು, ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್ ಮತ್ತು ಸಹ ಶಿಕ್ಷಕರು ಇದ್ದರು.