ಸಾರಾಂಶ
ಅವರ ಹೇಳಿಕೆಗಳಿಗೆ ಯಾರೂ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಅವರ ಮಾತುಗಳಿಗೆ ಯಾವುದೇ ಕಿಮ್ಮತ್ತೂ ಇಲ್ಲ.
ಬಳ್ಳಾರಿ: ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಉಪ ಚುನಾವಣೆಯಲ್ಲಿ ಯಾವ ಪರಿಣಾಮವೂ ಬೀರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.
"ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇರುವವರೆಗೂ ಪ್ರಚಾರಕ್ಕೆ ಹೋಗುವುದಿಲ್ಲ " ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹರಿಹಾಯ್ದರು.ಅವರ ಹೇಳಿಕೆಗಳಿಗೆ ಯಾರೂ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಅವರ ಮಾತುಗಳಿಗೆ ಯಾವುದೇ ಕಿಮ್ಮತ್ತೂ ಇಲ್ಲ. ಅವರ ಆಟ ಬಹಳ ದಿನ ನಡೆಯುವುದಿಲ್ಲ. ಯಾರು ಪುಗ್ಸಟ್ಟೆ ಮಾತನಾಡುತ್ತಾರೆ, ಯಾರು ಪಕ್ಷದ ಸಂಘಟನೆಗಾಗಿ ದುಡಿಯುತ್ತಿದ್ದಾರೆ ಎಂಬುದು ನಮ್ಮ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೂ ಗೊತ್ತಿದೆ ಎಂದರು.
ಉಪ ಚುನಾವಣೆಯನ್ನು ವಿಜಯೇಂದ್ರ ಒಬ್ಬರೇ ಎದುರಿಸುತ್ತಿಲ್ಲ. ನಮ್ಮ ಕಾರ್ಯಕರ್ತರು ತಮ್ಮ ಶಕ್ತಿಯ ಮೂಲಕ ಚುನಾವಣೆ ಎದುರಿಸುತ್ತಿದ್ದಾರೆ. ತಾವೇ ಅಭ್ಯರ್ಥಿಯಂತೆ ಕಾರ್ಯಕರ್ತರು ಕೆಲಸ ಮಾಡುತ್ತಿದ್ದು, ಮೂರು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.ಸಿಎಂ ಸಿದ್ದರಾಮಯ್ಯ ಪಿತೂರಿ:
ವಕ್ಫ್ ಕಾನೂನು ಬಳಸಿಕೊಂಡು ರೈತರ ಜಮೀನು ಕಬಳಿಸುವ ಯತ್ನ ರಾಜ್ಯದಲ್ಲಿ ನಿರಾತಂಕವಾಗಿ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಪಿತೂರಿಯಿಂದ ದೇಶದ್ರೋಹಿ ಜಮೀರ್ ಅಹಮದ್ ಎನ್ನುವ ವ್ಯಕ್ತಿಯಿಂದ ಜಮೀನು ಕಬಳಿಸುವ ಕೆಲಸವಾಗುತ್ತಿದೆ. ಅಧಿಕಾರಿಗಳನ್ನು ಬೆದರಿಸಿ ಮಠ-ಮಾನ್ಯಗಳ ಆಸ್ತಿಯನ್ನು ಕಬಳಿಸಲಾಗುತ್ತಿದೆ. ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ಜನರಿಂದ ಕಬಳಿಸಿರುವ ವಕ್ಫ್ ಜಮೀನು ಕೂಡಲೇ ವಾಪಸ್ ಮಾಡಬೇಕು. ಹತ್ತಾರು ವರ್ಷಗಳಿಂದ ಉಳುಮೆ ಮಾಡಿರುವ ರೈತರ ಮೇಲೆ ದರ್ಪ ತೋರಿಸುತ್ತಿರುವ ಸರ್ಕಾರದ ನಡೆಯ ವಿರುದ್ಧ ನಾವು ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.ಯಡಿಯೂರಪ್ಪ ಮುಖ್ಯಮಂತ್ರಿ ಇರುವಾಗಲೇ ವಕ್ಫ್ ಬೋರ್ಡ್‌ನಿಂದ ನೋಟಿಸ್ ನೀಡಲಾಗಿತ್ತು ಎಂಬ ಕಾಂಗ್ರೆಸಿಗರ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿಜಯೇಂದ್ರ, ಯಾವನು ಹೇಳಿದ್ದಾನೆ? ಮೊದಲು ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಸುಮ್ಮನೆ ಮಾತನಾಡಿದರೆ ಸಹಿಸುವುದಿಲ್ಲ. ರೈತರ ಆಸ್ತಿಯನ್ನು ವಕ್ಫ್‌ಗೆ ಕೊಡಿ ಎಂದು ಯಾರಾದರೂ ಹೇಳುತ್ತಾರೆಯೇ ಎಂದು ಪ್ರಶ್ನಿಸಿದರು.
ಸಂಡೂರು ಉಪ ಚುನಾವಣೆಯಲ್ಲಿ ನಾವು ಗೆಲ್ಲುವುದು ಖಚಿತ. ಈ ಮೂಲಕ ಬಿಜೆಪಿ ಹೊಸದೊಂದು ದಾಖಲೆ ಮಾಡುತ್ತದೆ. ಕ್ಷೇತ್ರದ ಜನರು ಕಾಂಗ್ರೆಸ್ ಆಡಳಿತದಿಂದ ರೋಸಿ ಹೋಗಿದ್ದು, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಇಡೀ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಪರ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ತಿಳಿಸಿದರು.