ಯತ್ನಾಳ ರಾಜಕೀಯ ಪಕ್ಷ ಕಟ್ಟುವುದು ಊಹಾಪೋಹ: ಶ್ರೀರಾಮುಲು

| Published : Mar 14 2025, 12:31 AM IST

ಯತ್ನಾಳ ರಾಜಕೀಯ ಪಕ್ಷ ಕಟ್ಟುವುದು ಊಹಾಪೋಹ: ಶ್ರೀರಾಮುಲು
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೊಸ ರಾಜಕೀಯ ಪಕ್ಷ ಕಟ್ಟುವುದು ಊಹಾಪೋಹ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಮಾನ್ಯತೆ ಸಿಗುವುದು ಕಷ್ಟ.

ರಾಜಕೀಯ ಪಕ್ಷ ಕಟ್ಟಿದರೂ ಯಶಸ್ವಿಯಾಗುವುದು ಕಷ್ಟ

ನಾನೂ ಹಿಂದೆ ಪ್ರಾದೇಶಿಕ ಪಕ್ಷ ಕಟ್ಟಿದ್ದೆ, ಯಶಸ್ವಿಯಾಗಲಿಲ್ಲ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೊಸ ರಾಜಕೀಯ ಪಕ್ಷ ಕಟ್ಟುವುದು ಊಹಾಪೋಹ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಮಾನ್ಯತೆ ಸಿಗುವುದು ಕಷ್ಟ. ಯಾರೇ ಪ್ರಾದೇಶಿಕ ಪಕ್ಷ ಕಟ್ಟಿದರೂ ಸುದೀರ್ಘ ಕಾಲ ಉಳಿಯುವುದು ಕಷ್ಟ ಎಂದು ಮಾಜಿ ಸಚಿವ ಬಿಜೆಪಿಯ ಹಿರಿಯ ನಾಯಕ ಬಿ. ಶ್ರೀರಾಮುಲು ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯತ್ನಾಳ್‌ ಪಕ್ಷ ಕಟ್ಟುತ್ತಾರೆಂಬ ವಿಚಾರ ನನಗೆ ಗೊತ್ತಿಲ್ಲ. ನಾನು ಸಹ ಹಿಂದೆ ಸ್ವಂತ ರಾಜಕೀಯ ಪಕ್ಷ ಕಟ್ಟಿದೆ. ಆದರೆ, ಯಶಸ್ವಿಯಾಗಲಿಲ್ಲ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ಅದು ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ಬಿಟ್ಟದ್ದು. ವಿಜಯೇಂದ್ರ ಅವರನ್ನು ಮುಂದುವರಿಸಿದರೂ ಸರಿ, ಬದಲಾಯಿಸಿದರೂ ಸರಿ, ಹೈಕಮಾಂಡ್‌ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದರು.

ಕೂಡ್ಲಿಗಿ, ಮೊಳಕಾಲ್ಮುರು ಸೇರಿದಂತೆ ಎಲ್ಲ ಕಡೆ ಓಡಾಡಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಪಕ್ಷ ಎಲ್ಲಿ ಅವಕಾಶ ನೀಡುತ್ತದೆಯೋ ಅಲ್ಲಿಂದ ಸ್ಪರ್ಧಿಸುತ್ತೇನೆ. ಕ್ಷೇತ್ರ ಮರುವಿಂಗಡಣೆ ಬಳಿಕ ರಾಜ್ಯದಲ್ಲಿ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು, ಮುಂದಿನ ದಿನಗಳಲ್ಲಿ ನಾನು ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ ಎಂದು ತಿಳಿಸಿದರು.ಟಿಡಿಆರ್‌ ವಿವಾದ- ದ್ವೇಷ ರಾಜಕಾರಣ

ಮೈಸೂರು ರಾಜಮನೆತನಕ್ಕೆ ಸೇರಿದ ಬೆಂಗಳೂರು ಅರಮನೆ ಮೈದಾನವನ್ನು ವಶಪಡಿಸಿಕೊಳ್ಳಲು ರಾಜ್ಯ ಸರ್ಕಾರ ಭೂ ಸ್ವಾಧೀನ ಮಸೂದೆ ಜಾರಿಗೆ ತಂದಿರುವುದು ಕಾಂಗ್ರೆಸ್ಸಿನ ದ್ವೇಷದ ರಾಜಕೀಯಕ್ಕೆ ಹಿಡಿದ ಕನ್ನಡಿ ಎಂದು ಶ್ರೀರಾಮುಲು ಆರೋಪಿಸಿದರು.

ಅರಮನೆ ಮೈದಾನದ ಜಾಗ ವಶಪಡಿಸಿಕೊಳ್ಳುವ ಪ್ರಕರಣ ಸುಪ್ರೀಂ ಕೋಟ್೯ನಲ್ಲಿ ವಿಚಾರಣೆ ನಡೆಯುತ್ತಿರುವ ನಡುವೆಯೂ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿದೆ. ಇದು ರಾಜಕೀಯ ವೈಷಮ್ಯದಿಂದ ಕೂಡಿದ ನಿಲುವು ಎಂಬುದು ಎಂಥವರಿಗೂ ಗೊತ್ತಾಗುತ್ತದೆ ಎಂದರು.

ಮುಡಾದ 14 ಸೈಟ್‌ಗಳಿಗೆ ಸಿಎಂ ಸಿದ್ದರಾಮಯ್ಯನವರು ₹60 ಕೋಟಿ ಪರಿಹಾರ ಹಣ ಕೇಳಿದ್ದಾರೆ. ರಾಜಕುಟುಂಬಕ್ಕೆ ಸೇರಿದ ಜಾಗಕ್ಕೆ ಟಿಡಿಆರ್ ಕೊಡಲು ಏಕೆ ಸಾಧ್ಯವಾಗುವುದಿಲ್ಲ? ಎಂದು ಶ್ರೀರಾಮುಲು ಪ್ರಶ್ನಿಸಿದರು.

ಮೈಸೂರು ರಾಜಮನೆತನಕ್ಕೆ ತನ್ನದೇ ಆದ ಘನತೆ, ಗೌರವಗಳಿವೆ. ಮೈಸೂರು ಸೇರಿದಂತೆ ರಾಜ್ಯದ ಪ್ರಗತಿ ನೆಲೆಯಲ್ಲಿ ಸಾಕಷ್ಟು ಕೊಡುಗೆ ನೀಡಿದೆ. ಇದನ್ನು ಸರ್ಕಾರ ಗಮನವಿಟ್ಟುಕೊಳ್ಳಬೇಕು. ರಾಜಮನೆತನದ ಜೊತೆಗೆ ಸೌಹಾರ್ದತೆಯಿಂದ ಮಾತುಕತೆ ನಡೆಸಿ, ಪರಿಹರಿಸಿಕೊಳ್ಳಬೇಕೇ ವಿನಃ, ಏಕಾಏಕಿ ಸುಗ್ರಿವಾಜ್ಞೆ ತಂದು ಜಾಗ ವಶಪಡಿಸಿಕೊಳ್ಳುವ ನೀತಿ ಸರಿಯಲ್ಲ ಎಂದರು.

ಗ್ಯಾರಂಟಿ ಸಮಿತಿ ಏಕೆ?

ರಾಜ್ಯ ಸರ್ಕಾರದ ಗ್ಯಾರಂಟಿ ಅನುಷ್ಠಾನಕ್ಕೆ ಸಮಿತಿ ರಚಿಸಿದೆ. ಈ ಸಮಿತಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರನ್ನು ನೇಮಿಸಿದೆ. ಇದಕ್ಕಾಗಿ ಸರ್ಕಾರದಿಂದ ವರ್ಷಕ್ಕೆ ₹30 ಕೋಟಿ ಮೀಸಲಿರಿಸಿದೆ. ಶಾಸಕರು, ಸಚಿವರು ಹಾಗೂ ಅಧಿಕಾರಿಗಳು ಇರುವಾಗ ಅನುಷ್ಠಾನ ಸಮಿತಿಗಳು ಯಾಕೆ ಬೇಕು? ಎಂದು ಪ್ರಶ್ನಿಸಿದ ಶ್ರೀರಾಮುಲು, ಜನರ ತೆರಿಗೆ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಹಂಚಿಕೆ ಮಾಡುವುದು ಖಂಡನೀಯ. ಕೂಡಲೇ ಸಮಿತಿ ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಾಣಾಪುರ ಬಳಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ವಿದೇಶಿ ಪ್ರವಾಸಿಗರು ಇಂದು ಭೇಟಿ ನೀಡಲು ಹಿಂಜರಿಯುತ್ತಿದ್ದಾರೆ. ಇಂತಹ ಘಟನೆಗಳು ಜರುಗದಂತೆ ನಿಗಾ ವಹಿಸಬೇಕಾದ ಜವಾಬ್ದಾರಿ ಸರ್ಕಾರದ್ದು. ಪ್ರವಾಸೋದ್ಯಮ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪ್ರವಾಸಿಗರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ನಾನು ಸಹ ಸ್ಥಳಕ್ಕೆ ಭೇಟಿ ನೀಡುವೆ ಎಂದರು.