ಹೊಸ ನಿರೀಕ್ಷೆಗಳ ಹೊತ್ತು ಬಂತು 2025ನೇ ವರ್ಷ...

| Published : Jan 01 2025, 12:01 AM IST

ಹೊಸ ನಿರೀಕ್ಷೆಗಳ ಹೊತ್ತು ಬಂತು 2025ನೇ ವರ್ಷ...
Share this Article
  • FB
  • TW
  • Linkdin
  • Email

ಸಾರಾಂಶ

ಸಿಹಿ-ಕಹಿ ನೆನಪು, ಸುಖ-ದುಃಖ ಕೊಟ್ಟ, ಸನ್ಮಾನ-ಅವಮಾನ, ಮರೆಯಬೇಕಾದ ನೆನಪು- ಎಂದೂ ಮರೆಯಲಾಗದ ನೆನಪುಗಳ ಗುಚ್ಛವನ್ನೇ ಜನರಿಗೆ ಕೊಟ್ಟ 2024ನೇ ವರ್ಷದ ಕಡೆಯ ದಿನವೀಗ ಹಿಂದೆ ಸರಿದು, 2025ರ ಮೊದಲ ದಿನಕ್ಕೆ ಗ್ರ್ಯಾಂಡ್‌ ಎಂಟ್ರಿಗೆ ಅವಕಾಶ ಕಲ್ಪಿಸಿದೆ. ಹೊಸ ವಿಶ್ವಾಸ, ಮತ್ತಷ್ಟು ನಿರೀಕ್ಷೆ, ಹಲವಾರು ಭರವಸೆಯೊಂದಿಗೆ 2025 ಈಗಾಗಲೇ ಕಾಲಿಟ್ಟಿದೆ.

- ನೋವು-ನಲಿನ ಗಂಟುಮೂಟೆ ಕಟ್ಟಿದ 2024 । ನೂತನ ವರ್ಷ ಅದ್ಧೂರಿ ಸ್ವಾಗತಕ್ಕೆ ಜಿಲ್ಲಾದ್ಯಂತ ವಿಶೇಷ ಆಸಕ್ತಿ

- ಎಸ್‌ಪಿ ಉಮಾ ಪ್ರಶಾಂತ ನೇತೃತ್ವದಲ್ಲಿ ಜಿಲ್ಲಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್‌, ಕಿಡಿಗೇಡಿಗಳತ್ತ ಹದ್ದಿನ ಕಣ್ಣು

- ಮಕ್ಕಳಿಗೆ ಕೇಸ್‌, ಸಿಹಿ ತಿನಿಸುಗಳ ಮೇಲಾಸೆ, ಮನೆಯಲ್ಲೇ ಆತಿಥ್ಯ । ಪಾನಪ್ರಿಯ, ಪಾರ್ಟಿ ಪ್ರಿಯರಿಗೆ ಕೈಬೀಸಿ ಕರೆಯುತ್ತಿದ ಬಣ್ಣದ ಎಣ್ಣೆ - - - ನಾಗರಾಜ ಎಸ್. ಬಡದಾಳ್

ಕನ್ನಡಪ್ರಭ ವಾರ್ತೆ ದಾವಣಗೆರೆ ಸಿಹಿ-ಕಹಿ ನೆನಪು, ಸುಖ-ದುಃಖ ಕೊಟ್ಟ, ಸನ್ಮಾನ-ಅವಮಾನ, ಮರೆಯಬೇಕಾದ ನೆನಪು- ಎಂದೂ ಮರೆಯಲಾಗದ ನೆನಪುಗಳ ಗುಚ್ಛವನ್ನೇ ಜನರಿಗೆ ಕೊಟ್ಟ 2024ನೇ ವರ್ಷದ ಕಡೆಯ ದಿನವೀಗ ಹಿಂದೆ ಸರಿದು, 2025ರ ಮೊದಲ ದಿನಕ್ಕೆ ಗ್ರ್ಯಾಂಡ್‌ ಎಂಟ್ರಿಗೆ ಅವಕಾಶ ಕಲ್ಪಿಸಿದೆ. ಹೊಸ ವಿಶ್ವಾಸ, ಮತ್ತಷ್ಟು ನಿರೀಕ್ಷೆ, ಹಲವಾರು ಭರವಸೆಯೊಂದಿಗೆ 2025 ಈಗಾಗಲೇ ಕಾಲಿಟ್ಟಿದೆ.

ನೂತನ ಕ್ಯಾಲೆಂಡರ್ ವರ್ಷವನ್ನು ಜನತೆ ಅತ್ಯಂತ ಸಂಭ್ರಮದಿಂದಲೇ ಸ್ವಾಗತಿಸಿದ್ದಾರೆ, ಈ ಸಂಭ್ರಮವನ್ನು ಇನ್ನೂ ಚಂದಗೊಳಿಸಲು ನಗರ ಸೇರಿದಂತೆ ಜಿಲ್ಲಾದ್ಯಂತ ಮಕ್ಕಳು, ಹಿರಿಯರಾದಿಯಾಗಿ ವಿವಿಧ ರೀತಿಯ ತಯಾರಿಗಳಲ್ಲಿ ಬ್ಯುಸಿಯಾಗಿದ್ದಾರೆ.

ಜಿಲ್ಲಾದ್ಯಂತ ಎಂದಿನಂತೆ ಹೊಸ ವರ್ಷಾಚರಣೆಗೆ ಮಕ್ಕಳು, ವಿದ್ಯಾರ್ಥಿ, ಯುವಜನರು, ಗೃಹಿಣಿಯರು ಸ್ನೇಹಿತರು, ಕುಟುಂಬ ಸದಸ್ಯರು, ನೆರೆಹೊರೆಯವರೊಂದಿಗೆ ಸಂಭ್ರಮದಲ್ಲಿದ್ದಾರೆ. ಹೊಸ ವರ್ಷದ ಸ್ವಾಗತಕ್ಕೆ ಸಿಹಿ ತಿನಿಸು, ಕೇಕ್‌, ಚಿಪ್ಸ್‌ ಸೇರಿದಂತೆ ತಮ್ಮ ಇಚ್ಛಾನುಸಾರ ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು ಪಾನಪ್ರಿಯರು, ಪಾರ್ಟಿ ಪ್ರೇಮಿಗಳಿಗೆ ಸಂಜೆಯಾವಾಗ ಆಗುವುದೋ ಎಂಬ ಅವಸರದ ಕುತೂಹಲ. ಮದ್ಯಪ್ರಿಯ ಪುರುಷರು, ಉದ್ಯಮಿಗಳು, ಅಧಿಕಾರಿಗಳು, ಪ್ರಭಾವಿಗಳು ಕಾಯುತ್ತಿದ್ದವರು ಪಾನಗೋಷ್ಟಿಯ ಸಮಯಕ್ಕಾಗಿ ಕಾತರರಾಗಿದ್ದಾರೆ.

ಜಗತ್ತಿಗೆ ಹಳೆಯ ವರ್ಷವು ಹಲವು ಕಹಿನೆನಪು, ಕೆಟ್ಟ ಅನುಭವಗಳು, ಸೋಲು, ಅವಮಾನಗಳು, ನೋವು, ನಲಿವುಗಳ ಬುತ್ತಿಗಂಟು ನೀಡಿದ್ದೀಗ ಇತಿಹಾಸ. ಹಳೇ ವರ್ಷಕ್ಕೆ ವಿದಾಯ ಹೇಳಿ, ಹೊಸ ನಿರೀಕ್ಷೆ, ಭರವಸೆಯೊಂದಿಗೆ ಬುಧವಾರ ಹೊಸ ವರುಷದ ಬೆಳಗ್ಗೆ ಮೂಡುವ ಸೂರ್ಯನ ಸ್ವಾಗತಿಸಲು, ಪೂಜಿಸಲು ಎಲ್ಲರಲ್ಲೂ ನವಚೇತನ. ಮಂಗಳವಾರ ಮಕ್ಕಳಾದಿಯಾಗಿ ಎಲ್ಲರೂ ತಡರಾತ್ರಿ 12.59 ಆಗುವುದನ್ನೇ ಇದಿರು ನೋಡಿದ್ದಾರೆ. ಸಡಗರ, ಸಂಭ್ರಮದಿಂದ 2025ನೇ ವರ್ಷವನ್ನು ವಿಭಿನ್ನವಾಗಿ ಸ್ವಾಗತಿಸಲು ಸಜ್ಜಾಗಿದ್ದಾರೆ. ಈ ಸಂಭ್ರಮ ಇಮ್ಮಡಿಸಲು ಇಡೀ ನಗರ ಸೇರಿದಂತೆ ಜಿಲ್ಲೆಯೇ ಪಾರ್ಟಿಗಳು, ಪಾನಗೋಷ್ಠಿಗಳು, ಕೇಕ್‌, ಸಿಹಿ ತಿನಿಸುಗಳ ತಯಾರಿ, ಮಾರಾಟ, ಖರೀದಿ ಮೂಲಕ ಸಜ್ಜಾಗಿದೆ.

ಜಿಲ್ಲಾದ್ಯಂತ ಮಂಗಳವಾರ ಸಂಜೆಯಿಂದಲೇ ಮಕ್ಕಳು ತಮ್ಮ ಪಾಲಕರ ಸಮೇತ ಬೇಕರಿ, ಸಿಹಿ ತಿನಿಸುಗಳ ಅಂಗಡಿಗಳಿಗೆ ಹೋಗಿ ತಮ್ಮಿಷ್ಟದ ತಿನಿಸುಗಳು, ಕೇಕ್ ಇತರೆ ತಿನಿಸುಗಳ ಖರೀದಿಯಲ್ಲಿ ತೊಡಗಿದ್ದರು. ಯುವಕ-ಯುವತಿಯರು ತಮ್ಮ ಸ್ನೇಹಿತರ ಜೊತೆ ಹಾಗೂ ಕುಟುಂಬದ ಜೊತೆಗೆ ಹೊಸ ವರ್ಷ ಸ್ವಾಗತಿಸಲು ಸಜ್ಜಾಗಿದ್ದರು. ಹಿರಿಯರು ಹೋಟೆಲ್, ರೆಸ್ಟೋರೆಂಟ್‌ಗಳು, ಬಾರ್‌ಗಳು, ಆಫೀಸರ್ಸ್ ಕ್ಲಬ್, ದಾವಣಗೆರೆ ಕ್ಲಬ್, ದೊಡ್ಡ ದೊಡ್ಡ ಹೊಟೆಲ್‌ಗಳು, ಊರ ಹೊರಗಿನ ರೆಸ್ಟೋರೆಂಟ್‌ಗಳು, ರೆಸಾರ್ಟ್‌ಗಳಲ್ಲಿ ಆಯೋಜಿಸಿದ್ದ ಪಾರ್ಟಿಗಳತ್ತ ತಮ್ಮ ಚಿತ್ತಹರಿಸಿದ್ದರು.

ಹೊಸ ವರ್ಷದ ಸ್ವಾಗತಕ್ಕೆ ಮಂಗಳವಾರ ಲಗುಬಗೆಯಲ್ಲಿ ತಮ್ಮ ಕೆಲಸ, ಕಾರ್ಯಗಳನ್ನು ಮುಗಿಸಿಕೊಂಡು, ಮನೆಗೆ ಹೋಗಿ ಹೊಸ ವರ್ಷಾಚರಣೆ ಸ್ವಾಗತಿಸಲು ಜನರು ಅವಸರದಲ್ಲಿ ಹೊರಡುನಿಂತಿದ್ದರು. ಮಕ್ಕಳಂತೂ ಮೊದಲು ಹೋಂ ವರ್ಕ್ ಮಾಡಿ, ಓದಿಕೋ ಎಂಬ ಅಮ್ಮನ ಮಾತುಕೇಳಿ, ಅಮ್ಮಾ ಪ್ಲೀಸ್‌.. ಇವತ್ತೊಂದಿನ ಪ್ಲೀಸ್‌ ಅನ್ನುತ್ತಾ ಹೊಸ ವರ್ಷಾಚರಣೆ ನೆರೆಹೊರೆಯ ಮಕ್ಕಳೊಂದಿಗೆ ಆಟವಾಡಲು ಕೇಳುತ್ತಿದ್ದುದು, ಮನೆಯ ಅಜ್ಜಿ, ಅಜ್ಜಂದಿರು ಹೋಗಲಿ ಬಿಡಮ್ಮಾ ಇವತ್ತೊಂದಿನ ಅಂತಾ ಮಗುವಿನ ಅಮ್ಮನಿಗೆ ಹೇಳುತ್ತಿದ್ದ ದೃಶ್ಯಗಳೂ ಸರ್ವೇ ಸಾಮಾನ್ಯದಂತೆ ಕಂಡುಬಂದವು.

- - -

ಬಾಕ್ಸ್‌* ಬಾ ಗುರು... ಪಾರ್ಟಿಗೆ ಲೇಟಾಯ್ತು?! ಹಳೇ ವರ್ಷಕ್ಕೆ ವಿದಾಯ ಹೇಳಿ, ಹೊಸ ವರ್ಷದ ಸ್ವಾಗತಕ್ಕೆ ಮಂಗಳವಾರ ರಾತ್ರಿ 8, 9 ಗಂಟೆ ಆಗುತ್ತಿದ್ದಂತೆ ಲಗುಬಗೆಯಲ್ಲಿ ಹೊರಟವರ ಸಂಖ್ಯೆಯೇನೂ ಕಡಿಮೆ ಇರಲಿಲ್ಲ. ಆದಷ್ಟು ಬೇಗ ಸ್ನೇಹಿತರನ್ನು ಸೇರಲು ಗುಂಪು ಗುಂಪಾಗಿ ಬೈಕ್, ಕಾರುಗಳಲ್ಲಿ ಹೋಗುತ್ತಿದ್ದವರ ಸಂಖ್ಯೆಯೂ ಹೆಚ್ಚಿತ್ತು. ಕೆಲವು ಕಡೆ ಸುಮಧುರ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳು, ಹಿರಿಯರ ಪ್ರತಿಭೆಗೆ ವೇದಿಕೆ ಕಲ್ಪಿಸುವ ಮೂಲಕ ವಿವಿಧ ಬಡಾವಣೆಗಳಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಮಂಗಳವಾರ ರಾತ್ರಿ 11.59 ಆಗುವುದನ್ನೇ ಎಲ್ಲರೂ ಇದಿರು ನೋಡುತ್ತಿದ್ದರು.

- - -

ಬಾಕ್ಸ್‌-2 * ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಸರ್ಪಗಾವಲು ಜಿಲ್ಲಾ ಪೊಲೀಸ್ ಇಲಾಖೆ ಕಾನೂನು, ಸುವ್ಯವಸ್ಥೆ, ಜನರ ಜೀವ ಕಾಪಾಡುವ ನಿಟ್ಟಿನಲ್ಲಿ ಸಂಜೆಯಿಂದಲೇ ಕಟ್ಟೆಚ್ಚರ ವಹಿಸಿತ್ತು. ಎಲ್ಲ ಕಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸ್ವತಃ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಎಎಸ್‌ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಡಿವೈಎಸ್‌ಪಿಗಳು ಗಸ್ತು ಶುರು ಮಾಡಿದ್ದರು.

ಸಿಪಿಐಗಳು, ಎಸ್ಐಗಳು, ಎಎಸ್ಐಗಳು, ಕಾನ್ಸಟೇಬಲ್‌ಗಳು ಇಡೀ ರಾತ್ರಿ ಮೈಯೆಲ್ಲಾ ಕಣ್ಣಾಗಿ ಕಾಯುತ್ತಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ, ಪಾನಮತ್ತರಾಗಿ ವಾಹನ ಚಾಲನೆ ಮಾಡುವವರು, ಹೆಣ್ಣು ಮಕ್ಕಳಿಗೆ ಕೀಟಲೆ ಮಾಡುವ ಕಿಡಿಗೇಡಿಗಳನ್ನು ಮಟ್ಟಹಾಕಲು ಪೊಲೀಸರ ಜೊತೆ ದುರ್ಗಾ ಪಡೆ, ಮಫ್ತಿ ಸಿಬ್ಬಂದಿ ಸಹ ಗಸ್ತು ಶುರು ಮಾಡಿದ್ದರು.

ಜಿಲ್ಲಾ ಕೇಂದ್ರದ ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ಪೊಲೀಸ್ ವಾಹನಗಳು ನಿರಂತರ ಸಂಚರಿಸುತ್ತಿತ್ತು. ಹೋಟೆಲ್‌ಗಳು, ಬಾರ್ ಅಂಡ್ ರೆಸ್ಟೋರೆಂಟ್‌ಗಳು ಗ್ರಾಹಕರಿಂದ ತುಂಬಲಾರಂಭಿಸಿದ್ದವು. ಹೊಸ ವರ್ಷಾಚರಣೆ ಬರೀ ಹೋಟೆಲ್ ಅಷ್ಟೇ ಅಲ್ಲ, ಮನೆಗಳಲ್ಲೂ ಆಚರಣೆಗೆ ತಯಾರಿ ನಡೆದಿತ್ತು.

- - -

-31ಕೆಡಿವಿಜಿ45, 46.ಜೆಪಿಜಿ: ದಾವಣಗೆರೆಯಲ್ಲಿ ಹೊಸ ವರ್ಷಾಚರಣೆಗೆ ಕೇಕ್ ಖರೀದಿಸುತ್ತಿರುವ ಗ್ರಾಹಕರು.