ಸಾರಾಂಶ
ಬಿ.ಎಸ್. ಯಡಿಯೂರಪ್ಪ ಅವರು ನಾಡು ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಓರ್ವರಾಗಿದ್ದು, ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವಲ್ಲಿ ವಹಿಸಿದ ಪಾತ್ರ ಮಹತ್ತರವಾಗಿದೆ ಎಂದು ವಿಧಾನ ಪರಿಷತ್ತು ಶಾಸಕ ಎಸ್. ರುದ್ರೇಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬಿ.ಎಸ್. ಯಡಿಯೂರಪ್ಪ ಅವರು ನಾಡು ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಓರ್ವರಾಗಿದ್ದು, ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವಲ್ಲಿ ವಹಿಸಿದ ಪಾತ್ರ ಮಹತ್ತರವಾಗಿದೆ ಎಂದು ವಿಧಾನ ಪರಿಷತ್ತು ಶಾಸಕ ಎಸ್. ರುದ್ರೇಗೌಡ ಹೇಳಿದರು.
ನಗರದ ರವೀಂದ್ರನಗರ ಶ್ರೀ ಪ್ರಸನ್ನಗಣಪತಿ ದೇವಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಇಡೀ ಕರ್ನಾಟಕ ಪ್ರಗತಿ ಪಥದತ್ತ ಮುನ್ನಡೆಯಿತು.
ಹಾಗೆಯೇ ಶಿವಮೊಗ್ಗ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಅವರು ವಿಶೇಷ ಕೊಡುಗೆ ನೀಡಿದ್ದಾರೆ. ರೈತರ ಹಾಗೂ ಜನಪರ ನಿಲುವಿನ ಯಡಿಯೂರಪ್ಪ ಅವರು ತಮ್ಮ ನೇರ ನಡೆನುಡಿ ಹಾಗೂ ಪ್ರಾಮಾಣಿಕತೆಯ ರಾಜಕಾರಣದಿಂದ ನಾಡಿನ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ತಿಳಿಸಿದರು.
ಶಿವಮೊಗ್ಗದಲ್ಲಿ ಮೆಡಿಕಲ್ ಕಾಲೇಜ್, ವಿಮಾನ ನಿಲ್ದಾಣ ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳ ಯಶಸ್ಸಿಗೆ ಕಾರಣರಾದ ಬಿಎಸ್‌ವೈ ಅವರು ರೈತಪರ, ಜನಪರ ನಿಲುವಿನ ವ್ಯಕ್ತಿಯಾಗಿದ್ದಾರೆ. ಹೀಗಾಗಿ, ನಾಡಿನ ಜನತೆ ಅವರನ್ನು ರಾಜಾಹುಲಿ ಎಂದೇ ಪ್ರೀತಿಯಿಂದ ಸಂಬೋಧಿಸುತ್ತಾರೆ ಎಂದು ಬಣ್ಣಿಸಿದರು.
ವಿಧಾನ ಪರಿಷತ್ತು ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಕಲ್ಯಾಣ ಕರ್ನಾಟಕದ ಕನಸುಗಾರ, ಅಭಿವೃದ್ಧಿಯ ಹರಿಕಾರ, ರೈತ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಜನಮಾನಸದಲ್ಲಿ ನೆಲೆ ನಿಂತ ನೇತಾರ ಎಂದು ವರ್ಣಿಸಿದರು.
ಬಿಜೆಪಿ ಮುಖಂಡರಾದ ಸಂತೋಷ್ ಬಳ್ಳೆಕೆರೆ, ಸಿ.ಎಚ್.ಮಾಲತೇಶ್, ಜ್ಯೋತಿಪ್ರಕಾಶ್, ಎನ್.ಜೆ. ರಾಜಶೇಖರ್, ರಾಜೇಶ್ ಕಾಮತ್, ದಿವಾಕರ ಶೆಟ್ಟಿ, ಎಸ್. ಶ್ರೀನಿವಾಸ್, ವೀರಭದ್ರಪ್ಪ ಪೂಜಾರ್, ಬಾಬಿ ನಾಯ್ಡು, ಆರತಿ ಪ್ರಕಾಶ್, ಸುರೇಖಾ ಮುರಳೀಧರ್, ಇ.ವಿಶ್ವಾಸ್, ಪ್ರಭು ಮತ್ತಿತರರು ಇದ್ದರು.
ಬಿ.ಎಸ್.ವೈ ಥ್ರೋಬಾಲ್ ಕಪ್ ಶಿವಮೊಗ್ಗ ನಗರದ ನೆಹರು ಕ್ರಿಡಾಂಗಣದಲ್ಲಿ ಮಂಗಳವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾಮಟ್ಟದ ಹೊನಲು ಬೆಳಕಿನ ಬಿ.ಎಸ್.ವೈ ಕಪ್ ಥ್ರೋಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಪಂದ್ಯಾವಳಿ ಉದ್ಘಾಟಿಸಿದರು. ಈ ಸಂದರ್ಭ ಕೇಕ್ ಕತ್ತರಿಸಿ ಯಡಿಯೂರಪ್ಪರ 80ನೇ ಜನ್ಮದಿನ ಸಂಭ್ರಮ ಆಚರಿಸಿದರು.
ಪ್ರಮುಖರಾದ ಸಂತೋಷ್ ಬಳ್ಳೆಕೆರೆ, ಮಾಲತೇಶ್, ದಿವಾಕರ ಶೆಟ್ಟಿ, ರಾಜೇಶ್ ಕಾಮತ್, ರಾಮಚಂದ್ರಪ್ಪ, ಕೆ.ಜಿ.ಮಠಪತಿ, ವೀರಭದ್ರಪ್ಪ ಪೂಜಾರ್, ಕೆ.ಎಸ್.ಶಶಿ ಮತ್ತಿತರರು ಇದ್ದರು.
ಶಿವಮೊಗ್ಗದ ರವೀಂದ್ರನಗರ ಶ್ರೀ ಪ್ರಸನ್ನಗಣಪತಿ ದೇವಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನ ಅಂಗವಾಗಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.