ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಇಂದು ಶಿಕ್ಷಣಕ್ಕೆ ಮಹತ್ವದ ಸ್ಥಾನವಿದೆ. ಊಟ ಕಡಿಮೆಯಾದರೂ ಪರವಾಗಿಲ್ಲ, ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಬೇಕು ಎನ್ನುವ ಹಂಬಲ ತಂದೆ ತಾಯಿಗಳಿಗಿರಬೇಕು. ಆದರೆ ಆಧುನಿಕತೆಯ ಅಬ್ಬರದಲ್ಲಿ ಶಿಕ್ಷಣ ಪಡೆದ ಮಕ್ಕಳು ಹೆತ್ತವರನ್ನು ವೃದ್ಧಾಶ್ರಮಕ್ಕೆ ಕಳಿಸುವ ಸ್ಥಿತಿಗೆ ಬಂದಿದ್ದಾರೆ. ಇಂಥಹ ಪರಿಸ್ಥಿತಿ ಬದಲಾಗಬೇಕಿದೆ. ನಾವೂ ಕೂಡಾ ನಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವಲ್ಲಿ ಎಡವುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಳವಳ ವ್ಯಕ್ತಪಡಿಸಿದರು.ಅವರು ಪಟ್ಟಣದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಶ್ರೀ ಜಗದ್ಗುರು ಗುರುಸಿದ್ದ ಪಟ್ಟದಾರ್ಯ ಶ್ರೀಗಳವರ 38ನೇ ವಾರ್ಷಿಕ ಪುಣ್ಯಾರಾಧನೆಯ ಶರಣ ಸಂಗಮ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಆಧುನಿಕತೆಯ ತಂತ್ರಜ್ಞಾನದ ಭರಾಟೆಯಲ್ಲಿ ಮುನುಷ್ಯ ಮನುಷ್ಯರ ನಡುವೆ ಸಂಬಂಧಗಳು ಕಳಚಿ ಬೀಳುತ್ತಿವೆ. ಅಲ್ಲದೇ ಮೊಬೈಲ್ ಹಾವಳಿಯಿಂದಲೂ ಕೂಡಾ ಬಾಂಧವ್ಯ ಕಳಚುತ್ತಿವೆ. ಮಕ್ಕಳಲ್ಲಿ ತಂದೆ ತಾಯಿಗಳ ಬಗ್ಗೆ ಗೌರವ ಕಡಿಮೆಯಾಗುತ್ತಿದೆ. ರಾಜ್ಯದ ಎಲ್ಲಿಯೇ ಹೋದರೂ ಕೂಡಾ ಜನರು, ಅಭಿಮಾನಿಗಳು ನಮ್ಮ ಯಡಿಯೂರಪ್ಪ ಬಂದಿದ್ದಾರೆ ಎಂದು ಸ್ವಾಗತಿಸುತ್ತಿದ್ದಾರೆ. ಇದು ನನಗೆ ಹೆಮ್ಮೆ, ಖುಷಿ ತರಿಸಿದೆ. ಈಗ ಶ್ರೀಗಳ ಪ್ರೀತಿ ನನ್ನನ್ನು ಇಲ್ಲಿಗೆ ಕರೆಸಿದೆ ಎಂದು ವಿಜಯೇಂದ್ರ ಹೇಳಿದರು.
ಯಡಿಯೂರಪ್ಪನವರ ಕಳೆದ 40 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ರಾಜ್ಯದಲ್ಲಿ ರೈತರ, ಬಡವರ, ದೀನ ದಲಿತರ ವಿಶೇಷವಾಗಿ ನೇಕಾರರ ಏಳಿಗೆಗೆ ಶ್ರಮಿಸಿದ್ದಾರೆ. ಅವರು ಎಲ್ಲ ವರ್ಗದ ನಾಯಕರು. ರೈತರ ಪ್ರತಿ ಹೋರಾಟದಲ್ಲಿ ಯಡಿಯೂರಪ್ಪ ಪಾಲ್ಗೊಂಡಿದ್ದಾರೆ. ರೈತರ ಕಣ್ಣೀರು ಒರೆಸಿದ್ದಾರೆ. ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ವಿಶೇಷವಾಗಿ ನೇಕಾರರಿಗೂ ಅಷ್ಟೆ ನೆರವು ನೀಡಿ ಗೌರವಿಸಿದ್ದಾರೆ. ರಾಜ್ಯದಲ್ಲಿ ಮಾತೃ ಹೃದಯಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಗುರುತಿಸಿಕೊಂಡಿದ್ದಾರೆ ಎಂದರು..ಶ್ರೀ ಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ, ಎಲ್ಲ ಜನಾಂಗದವರೂ ಜಗದ್ಗುರು ಆಗಬಹುದೆಂಬ ಕಲ್ಪನೆ ಮೂಡಿಸಿದ ಮತ್ತು ಅಕ್ಕಲಕೋಟ ಶರಣರ ಹೋರಾಟದಿಂದ ಶ್ರೀಮಠ ಸ್ಥಾಪನೆಯಾಗಿದೆ. ಇಲ್ಲಿ ಜಾತಿ, ಮತ ಧರ್ಮ ಎನ್ನದೇ ಎಲ್ಲ ಜನಾಂಗದವರ ಒಳಿತಿಗೆ ಮತ್ತು ಸಮಾಜದಲ್ಲಿ ವಿಶ್ವ ಪ್ರಜ್ಞೆ ಮೂಡಿಸುವ ಕೆಲಸ ಶ್ರೀಮಠ ಮಾಡುತ್ತಿದೆ ಎಂದರು.
ಶ್ರೀಗುರುಬಸವ ದೇವರು, ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ, ಮಾಜಿ ಶಾಸಕರಾದ ರಾಜಶೇಖರ ಶೀಲವಂತ, ನಾರಾಯಣಸಾ ಬಾಂಡಗೆ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಅಶೋಕ ಹೆಗಡೆ, ಜೆ.ಪರಪ್ಪ ಪ್ರಕಾಶ, ಸಂಗನಬಸಪ್ಪ ಚಿಂದಿ, ನಾಗೇಶಪ್ಪ ಪಾಗಿ, ಭಾಗ್ಯಾ ಉದ್ನೂರ ಹಾಗೂ ಇತರರು ಇದ್ದರು.ಇದೇ ಸಂದರ್ಭದಲ್ಲಿ ಬಿ.ವೈ.ವಿಜಯೇಂದ್ರ ಅವರಿಗೆ ಸಾಲೇಶ್ವರ ದೇವರ ರಜತ ಮೂರ್ತಿ ನೀಡಿ ಶ್ರೀಮಠದಿಂದ ಸನ್ಮಾನಿಸಿ ಗೌರವಿಸಲಾಯಿತು.