50 ವರ್ಷಗಳ ಹೋರಾಟದ ಬದುಕು ಸಂಭ್ರಮಿಸುವ ಬಿಎಸ್‌ವೈ ಅಭಿಮಾನೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಬಿ.ಎಸ್.ಯಡಿಯೂರಪ್ಪ ಎಂದರೆ ಹೋರಾಟದ, ಪರಿಶ್ರಮದ, ತ್ಯಾಗದ ಸಂಕೇತ. ರೈತರ, ಬಡವರ, ಮಹಿಳೆಯರ ಪರ 50 ವರ್ಷಗಳಿಂದ ನಿರಂತರ ಹೋರಾಟ ಮಾಡಿಕೊಂಡು ಬಂದ ಯಡಿಯೂರಪ್ಪನವರು ಅಧಿಕಾರ ಅನುಭವಿಸಿದ್ದು ಕೇವಲ 5 ವರ್ಷ ಮಾತ್ರ. ನಗರ ಭಾಗದಲ್ಲಿ ಸೀಮಿತವಾಗಿದ್ದ ಬಿಜೆಪಿಯನ್ನು ಹಳ್ಳಿಹಳ್ಳಿಗೆ ತಲುಪಿಸಿ ಪಕ್ಷವನ್ನು ಬೆಳೆಸಿದ್ದರಲ್ಲಿ ಇವರ ಶ್ರಮ ಸಾಕಷ್ಟಿದೆ ಎಂಬುದು ಎಲ್ಲರಿಗೂ ಗೊತ್ತು. ಇಂತಹ ನಾಯಕನ 50 ವರ್ಷಗಳ ಹೋರಾಟದ ಬದುಕು ಸಂಭ್ರಮಿಸುವ ಬಿಎಸ್‌ವೈ ಅಭಿಮಾನೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.

ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಯಡಿಯೂರಪ್ಪನವರ 50ನೇ ವರ್ಷದ ಅಭಿಮಾನೋತ್ಸವ ಸಮಾರಂಭದ ಅಂಗವಾಗಿ ಗುರುವಾರ ನಗರದ ಸ್ನೇಹಸಂಗಮ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಕನಸಿನಲ್ಲಿಯೂ ಕಲ್ಪಿಸಿಕೊಳ್ಳಲಾಗದ ಕಾಲಘಟ್ಟದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ರೈತರ, ಬಡವರ ಪರ ಹೋರಾಟ ಮಾಡಿಕೊಂಡು ಜೊತೆಜೊತೆಯಲ್ಲಿ ಪಕ್ಷವನ್ನೂ ಕಟ್ಟಿ ಬೆಳೆಸಿದರು. ಒಂದು ಕಾಲದಲ್ಲಿ ಇವರೊಬ್ಬರೇ ಬಿಜೆಪಿ ಶಾಸಕರಾಗಿದ್ದರು. ನಮ್ಮ ಪಕ್ಷಕ್ಕೆ ಬನ್ನಿ ಮಂತ್ರಿ ಮಾಡುತ್ತೇವೆ ಎಂದು ಆಡಳಿತ ಪಕ್ಷದ ನಾಯಕರು ಆಹ್ವಾನಿಸಿದರೂ ಬಿಎಸ್‌ವೈ ಪಕ್ಷ ಬಿಡಲಿಲ್ಲ. ಇವರು ಯಾವತ್ತೂ ಅಧಿಕಾರಕ್ಕಾಗಿ ಹಪಹಪಿಸಲಿಲ್ಲ ಎಂದರು.

ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿತ್ತು. ಒಬ್ಬರೇ ಹೋಗಿ ಸಂತ್ರಸ್ತರ ನೆರವಿಗೆ ನಿಂತರು. ರಾಯಚೂರು, ಕೊಪ್ಪಳ, ಬೀದರ್ ಜಿಲ್ಲೆಗಳಲ್ಲಿ ಬಡವರು ಮನೆ ಕಳೆದುಕೊಂಡಾಗ ಕೇಂದ್ರ ಸರ್ಕಾರದ ಒಂದು ಲಕ್ಷ ರೂ.ಅನುದಾನದ ಜೊತೆಗೆ ನಾಲ್ಕು ಲಕ್ಷ ಸೇರಿಸಿ ಐದು ಲಕ್ಷ ರೂ.ಗಳಲ್ಲಿ ಮನೆ ನಿರ್ಮಿಸಿಕೊಟ್ಟರು. ಆಗ ಕುಟುಂಬದವರೊಂದಿಗೆ ದೀಪಾವಳಿ ಆಚರಿಸಬೇಕಾದ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂತ್ರಸ್ತರೊಂದಿಗೆ ದೀಪಾವಳಿ ಆಚರಿಸಿ ಅವರ ಕುಟುಂಬಗಳಲ್ಲಿ ಬೆಳಕು ಮೂಡಿಸಿದರು ಎಂದು ಬಿ.ವೈ.ವಿಜಯೇಂದ್ರ ಸ್ಮರಿಸಿಕೊಂಡರು.

ಅಭಿಮಾನೋತ್ಸವ ಆಚರಣೆ ಯಡಿಯೂರಪ್ಪನವರಿಗೆ ಇಷ್ಟವಿರಲಿಲ್ಲ. ಆದರೆ, ರಾಜ್ಯದ ಲಕ್ಷಾಂತರ ಕಾರ್ಯಕರ್ತರು, ಅವರ ಅಭಿಮಾನಿಗಳ ಅಪೇಕ್ಷೆಯಂತೆ ಚಿತ್ರದುರ್ಗದಲ್ಲಿ ಅವರ ಅಭಿಮಾನೋತ್ಸವ ಆಚರಿಸಲಾಗುತ್ತಿದೆ. ಪಕ್ಷಾತೀತವಾಗಿ ಯಡಿಯೂರಪ್ಪನವರ ಅಭಿಮಾನಿಗಳು ಹತ್ತು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಜನಪರವಾಗಿ ದುಡಿದ ನಾಯಕ ಯಡಿಯೂರಪ್ಪನವರಿಗೆ ನಾವೆಲ್ಲರೂ ಗೌರವ ಸಲ್ಲಿಸೋಣ ಎಂದು ಅವರು ಮನವಿ ಮಾಡಿದರು.