ಯುವಕರ ಗುಂಪಿನಿಂದ ಯಲಬುರ್ಗಾ ಸಿಡಿಪಿಒ ಮೇಲೆ ಹಲ್ಲೆ

| Published : Jan 15 2025, 12:47 AM IST

ಯುವಕರ ಗುಂಪಿನಿಂದ ಯಲಬುರ್ಗಾ ಸಿಡಿಪಿಒ ಮೇಲೆ ಹಲ್ಲೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಕಿನ್ನಾಳ ರಸ್ತೆಯಲ್ಲಿರುವ ಪ್ಲೀಪ್ ಕಾರ್ಟ್ ಸಂಸ್ಥೆಯ ಮುಂಭಾಗದಲ್ಲಿ ಮಂಗಳವಾರ ಸಂಜೆ ಯಲಬುರ್ಗಾ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಲೆ ಯುವಕರ ಗುಂಪಿನಿಂದ ಹಲ್ಲೆಯಾಗಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ನಗರದ ಕಿನ್ನಾಳ ರಸ್ತೆಯಲ್ಲಿರುವ ಪ್ಲೀಪ್ ಕಾರ್ಟ್ ಸಂಸ್ಥೆಯ ಮುಂಭಾಗದಲ್ಲಿ ಮಂಗಳವಾರ ಸಂಜೆ ಯಲಬುರ್ಗಾ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಲೆ ಯುವಕರ ಗುಂಪಿನಿಂದ ಹಲ್ಲೆಯಾಗಿದೆ.

ಪ್ಲಿಪ್ ಕಾರ್ಟ್ ಮೂಲಕ ಆನ್‌ಲೈನ್ ಬುಕ್ಕಿಂಗ್ ಮಾಡಿದ್ದ ಸಿಡಿಪಿಒ ಬೆಟ್ಟದಪ್ಪ ಅವರಿಗೆ ಸಾಮಗ್ರಿ ಬರದ ಕಾರಣ ಹಾಗೂ ಮರಳಿ ಹಣ ಸಹ ನೀಡಿಲ್ಲ ಎಂಬ ವಿಚಾರಕ್ಕೆ ಪ್ಲಿಪ್ ಕಾರ್ಟ್ ಸಂಸ್ಥೆಯ ಸಿಬ್ಬಂದಿ ಮಹೇಶ ಎಂಬ ಯುವಕನೊಂದಿಗೆ ವಾಕ್ಸಮರ ಜರುಗಿದೆ. ಈ ವೇಳೆ ಸಿಡಿಪಿಒ ಬೆಟ್ಟದಪ್ಪ ಕಡೆಯವರು ಪ್ಲಿಪ್ ಕಾರ್ಟ್ ಸಿಬ್ಬಂದಿ ಮಹೇಶ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಕೆರಳಿದ ಯುವಕರು ಸರ್ಕಾರಿ ನೌಕರ ಎಂಬುದನ್ನು ನೋಡದೇ ಕಾರಿನೊಳಗೆ ಕುಳಿತಿದ್ದ ಸಿಡಿಪಿಒ ಮೇಲೆ ಹಿಗ್ಗಾ-ಮುಗ್ಗಾ ಹಲ್ಲೆ ಮಾಡಿದ್ದಾರೆ. ಕಾರಿನ ಮುಂಭಾಗದ ಮೇಲೆ ಹತ್ತಿ ಗ್ಲಾಸ್ ಹೊಡೆದಿದ್ದಾರೆ. ಗಲಾಟೆ ಕಂಡು ಸ್ಥಳೀಯರು ಜಗಳ ಬಗೆಹರಿಸಲು ಮುಂದಾದರೂ ಯುವಕರ ಗುಂಪು ಚದುರಿಲ್ಲ. ಸ್ಥಳದಲ್ಲಿದ್ದವರು ಪೊಲೀಸರಿಗೆ ಕರೆ ಮಾಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ, ಸಿಡಿಪಿಒ ಹಾಗೂ ಯುವಕರ ಗುಂಪನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಂಕ್ರಮಣ; ಯುವಕ ನೀರುಪಾಲು:

ಸಂಕ್ರಮಣದ ಹಿನ್ನೆಲೆ ಕೊಪ್ಪಳ ತಾಲೂಕಿನ ಕಾತರಕಿ ಜಾಕವೆಲ್ ಬಳಿ ಸ್ನಾನ ಮಾಡಲು ಹೋದಾಗ ಯುವಕನೋರ್ವ ನೀರು ಪಾಲಾದ ಘಟನೆ ಮಂಗಳವಾರ ನಡೆದಿದೆ.

ಶೇಖರಗೌಡ ನಾಗನಗೌಡ್ರ ನೀರು ಪಾಲಾದವರು.ಅಗ್ನಿಶಾಮಕ ದಳ ಮತ್ತು ಪೊಲೀಸರು ತೀವ್ರ ಶೋಧ ಕಾರ್ಯ ನಡೆಸಿದ್ದು, ತಡರಾತ್ರಿವರೆಗೂ ಪತ್ತೆಯಾಗಿಲ್ಲ. ಈ ಕುರಿತು ಅಳವಂಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಿಜೆಪಿ ಮುಖಂಡ ಸೇರಿ 15 ಜನರಿಗೆ ₹14 ಲಕ್ಷ ಪಂಗನಾಮ:

ಗಂಗಾವತಿ ನಗರದ ಬಿಜೆಪಿ ಮುಖಂಡ ಸೇರಿದಂತೆ 15 ಜನರಿಗೆ ₹14, 64, 900ಕ್ಕೂ ಅಧಿಕ ಹಣ ಪಂಗನಾಮ ಹಾಕಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.ನಗರದ ಬಿಜೆಪಿ ಮುಖಂಡ ಸಂತೋಷ ಕೆಲೋಜಿ ಸೇರಿದಂತೆ 15 ಜನರಿಗೆ ಕನಕಗಿರಿ ನಗರದ ಸಾಗರ ಮತ್ತು ಈತನ ಪತ್ನಿ ಪವಿತ್ರ ಎನ್ನುವರು ವಿವಿಧ ಯೋಜನೆಗಳಿಗೆ ಪ್ರೋತ್ಸಾಹ ಧನ ನೀಡುವುದಾಗಿ ಹೇಳಿ ವಂಚಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ್ ಅವರನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದು, ಆತನ ಪತ್ನಿ ಪವಿತ್ರಾ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪಿಐ ಪ್ರಕಾಶ ಮಾಳೆ ತಿಳಿಸಿದ್ದಾರೆ.