ಸಾರಾಂಶ
ನವದೆಹಲಿ: ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಏಷ್ಯಾದ ಅತಿದೊಡ್ಡ ಹಾಗೂ ವಿಶ್ವವಿಖ್ಯಾತ ‘ಬೆಂಗಳೂರು ಏರ್ ಶೋ’ ಅನ್ನು ಗೋವಾ ಹಾಗೂ ಉತ್ತರಪ್ರದೇಶಕ್ಕೆ ಸ್ಥಳಾಂತರಿಸುವ ಪ್ರಯತ್ನಗಳು ವಿಫಲವಾದ ಬೆನ್ನಲ್ಲೇ ಅದನ್ನು ವಿಶ್ವರೂಪದಲ್ಲಿ ಎತ್ತಗಂಡಿ ಮಾಡುವ ಯತ್ನ ಇದೀಗ ಪ್ರಾರಂಭವಾಗಿದೆ. ಪರಿಣಾಮವಾಗಿ, ಕಳೆದ ಫೆ.10ರಿಂದ 14ರ ವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಜರುಗಿದ ಏರೋ ಇಂಡಿಯಾ ಏರ್ ಶೋ ಬೆಂಗಳೂರು ನಗರದಲ್ಲಿ ನಡೆದ ಕೊನೆಯ ವೈಮಾನಿಕ ಪ್ರದರ್ಶನ ಆಗಬಹುದು ಎಂದು ಹೇಳಲಾಗುತ್ತಿದೆ.
ಇದಕ್ಕೆ ಕಾರಣ, ಕೇಂದ್ರ ಸರ್ಕಾರವು ದೇಶದ ಸೇನೆಯ ಮೂರೂ ಪಡೆಗಳ ಸಾಮರ್ಥ್ಯ ಹಾಗೂ ತಂತ್ರಜ್ಞಾನದ ಪ್ರದರ್ಶನ (ಡಿಫೆನ್ಸ್ ಎಕ್ಸ್‌ಪೋ) ಹಾಗೂ ಏರ್ ಶೋ ಅನ್ನು ಏಕಕಾಲಕ್ಕೆ ಒಂದೇ ಸ್ಥಳದಲ್ಲಿ ನಡೆಸಿ ವಿಶ್ವದ ಮೆಗಾ ಕಾರ್ಯಕ್ರಮ ಮಾಡಲು ಯೋಚಿಸುತ್ತಿದೆ. ಈ ಎರಡನ್ನೂ ಒಂದೇ ಸ್ಥಳದಲ್ಲಿ ನಡೆಸಿದರೆ ಬೆಂಗಳೂರಲ್ಲಿ ಏರ್ ಶೋ ನಡೆಯುವ ಯಲಹಂಕ ವಾಯುನೆಲೆಯಲ್ಲಿ ಜಾಗ ಸಾಲದು. ಹೀಗಾಗಿ ವಿಶಾಲ ಸ್ಥಳ ಇರುವ ಬೇರೆ ಊರನ್ನು ಶೋಧಿಸಲು ಕೇಂದ್ರ ಯತ್ನಿಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಈಗ ನಡೆಯುತ್ತಿರುವುದೇನು?:
ಪ್ರಸ್ತುತ ಯಲಹಂಕದಲ್ಲಿ ವೈಮಾನಿಕ ಪ್ರದರ್ಶನವಾದ ಏರೋ ಇಂಡಿಯಾ ನಡೆಸಿದರೆ, ಗೋವಾ, ಲಖನೌ, ಗಾಂಧಿನಗರ ಸೇರಿ ದೇಶದ ವಿವಿಧೆಡೆಗಳಲ್ಲಿ ಭೂಮಿ, ವಾಯು ಹಾಗೂ ನೌಕಾಪಡೆಗಳ ಸಾಮರ್ಥ್ಯ ಪ್ರದರ್ಶಿಸುವ ಡಿಫೆನ್ಸ್ ಎಕ್ಸ್‌ಪೋ ಆಯೋಜಿಸಲಾಗುತ್ತಿದೆ. ಅಂದರೆ ಏರ್ ಶೋ ಬೆಂಗಳೂರಲ್ಲಿ ಹಾಗೂ ಡಿಫೆನ್ಸ್ ಎಕ್ಸ್‌ಪೋ ಬೇರೆ ಊರುಗಳಲ್ಲಿ ನಡೆಯುತ್ತಿವೆ.
ಆದರೆ ಈ ಎರಡೂ ಪ್ರದರ್ಶನಗಳನ್ನು ಒಟ್ಟಿಗೇ ಮಾಡಲು ಈಗ ಚಿಂತನೆ ನಡೆಸಲಾಗುತ್ತಿದೆ. ಇದರಿಂದ ಎಲ್ಲಾ ಆಸಕ್ತರು ಹಾಗೂ ಖರೀದಿದಾರರು ಜಗತ್ತಿನ ವಿವಿಧೆಡೆಯಿಂದ ಏಕಕಾಲಕ್ಕೆ ಆಗಮಿಸಿ ಒಪ್ಪಂದ ಮಾಡಿಕೊಳ್ಳಲು ಹಾಗೂ ವ್ಯವಹಾರದತ್ತ ಗಮನಹರಿಸಲು ಸುಲಭವಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ.
ಬೆಂಗಳೂರಿಗೆ ಕೊಕ್ ಚಿಂತನೆ ಏಕೆ?: 1996ರಲ್ಲಿ ಆರಂಭವಾದ ಏರೋ ಇಂಡಿಯಾ ಪ್ರದರ್ಶನವನ್ನು ಬೆಂಗಳೂರಿನ ಯಲಹಂಕದಲ್ಲಿರುವ ವಾಯುನೆಲೆಯಲ್ಲಿ ದ್ವೈವಾರ್ಷಿಕವಾಗಿ ಆಯೋಜಿಸಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರದ ಹೊಸ ಯೋಜನೆಯ ಪ್ರಕಾರ ಡಿಫೆನ್ಸ್ ಎಕ್ಸ್‌ಪೋ ಕೂಡ ಏರೋ ಇಂಡಿಯಾದೊಂದಿಗೇ ಆಯೋಜನೆಯಾಗಬೇಕಿದೆ. ಯಲಹಂಕದಲ್ಲಿ ಒಟ್ಟಿಗೇ ಇವನ್ನು ನಡೆಸಲು ಸಾಕಷ್ಟು ಸ್ಥಳಾವಕಾಶ ಇಲ್ಲ. ಜೊತೆಗೆ, ಇದಕ್ಕೆ ಕೆಲ ತಾಂತ್ರಿಕ ಕಾರಣಗಳೂ ತೊಡಕಾಗುವ ಸಾಧ್ಯತೆ ಇದೆ.
ವೈಮಾನಿಕ ಪ್ರದರ್ಶನ ನಡೆಯುವ ಸ್ಥಳವನ್ನು ವಿಸ್ತರಿಸಲಾಗಿದೆಯಾದರೂ, ಇಲ್ಲಿ ವಾಯುಸೇನೆ ಕಾರ್ಯಾಚರಣೆ ನಡೆಸುವ ಕಾರಣ ಪ್ರದರ್ಶನಕ್ಕೆ ಸಾಕಷ್ಟು ಜಾಗ ದೊರಕುತ್ತಿಲ್ಲ. ಜೊತೆಗೆ ಈ ಬಾರಿ ಸ್ಥಳದ ಕೊರತೆಯಿಂದಾಗಿ ಹಲವು ಕಂಪನಿಗಳಿಗೆ ತಮ್ಮ ಹೊಸ ತಂತ್ರಜ್ಞಾನಗಳನ್ನು ಪ್ರದರ್ಶಿಸಲೂ ಸಾಧ್ಯವಾಗಿರಲಿಲ್ಲ. ಇಷ್ಟು ವರ್ಷವಾದರೂ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಸಮನಾದ ಶಾಶ್ವತ ವ್ಯವಸ್ಥೆಗಳನ್ನು ನಿರ್ಮಿಸಲಾಗಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ, ಯಲಹಂಕ ವಾಯುನೆಲೆಯು ವಾಹನ ದಟ್ಟಣೆ ಹೆಚ್ಚಿರುವ ಬೆಂಗಳೂರು ನಗರ ಹಾಗೂ ವಿಮಾನ ನಿಲ್ದಾಣದ ನಡುವೆ ಇರುವ ಕಾರಣ ಬೃಹತ್ ಸೇನಾ ಪ್ರದರ್ಶನಕ್ಕೆ ಟ್ರಾಫಿಕ್ ಸಮಸ್ಯೆಯೂ ಸವಾಲಾಗಿ ಪರಿಣಮಿಸಲಿದೆ. ಈ ಬಾರಿಯ ಏರೋ ಇಂಡಿಯಾ ಪ್ರದರ್ಶನದಲ್ಲಿ ಭಾಗವಹಿಸಲು ಹೊರಟಿದ್ದ ಜರ್ಮನಿಯ 15 ಪೈಲಟ್‌ಗಳು ಟ್ರಾಫಿಕ್‌ನಲ್ಲಿ ಸಿಲುಕಿ, ಕಾರ್ಯಕ್ರಮದಲ್ಲಿ ಭಾಗಿಯಾಗದೇ ಉಳಿದ ಘಟನೆಯನ್ನು ಮರೆಯುವಂತಿಲ್ಲ.
ಹೀಗಾಗಿ ಬೆಂಗಳೂರಿನ ಯಲಹಂಕ ಏರ್‌ಬೇಸ್ ಬದಲು ಬೇರೆ ಊರಿನಲ್ಲಿ ಇವುಗಳ ಆಯೋಜನೆಗೆ ಚಿಂತನೆ ನಡೆದಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ಎತ್ತಂಗಡಿಗೆ ಟ್ರಾಫಿಕ್ ಜಾಮ್ ಕೂಡ ಕಾರಣ!
ಯಲಹಂಕ ವಾಯುನೆಲೆಯು ವಾಹನ ದಟ್ಟಣೆ ಹೆಚ್ಚಿರುವ ಬೆಂಗಳೂರು ನಗರ ಹಾಗೂ ವಿಮಾನ ನಿಲ್ದಾಣದ ನಡುವೆ ಇರುವ ಕಾರಣ ಬೃಹತ್ ಸೇನಾ ಪ್ರದರ್ಶನಕ್ಕೆ ಟ್ರಾಫಿಕ್ ಸಮಸ್ಯೆಯೂ ಸವಾಲಾಗಿ ಪರಿಣಮಿಸಲಿದೆ. ಈ ಬಾರಿಯ ಏರೋ ಇಂಡಿಯಾ ಪ್ರದರ್ಶನದಲ್ಲಿ ಭಾಗವಹಿಸಲು ಹೊರಟಿದ್ದ ಜರ್ಮನಿಯ 15 ಪೈಲಟ್‌ಗಳು ಟ್ರಾಫಿಕ್‌ನಲ್ಲಿ ಸಿಲುಕಿ, ಕಾರ್ಯಕ್ರಮದಲ್ಲಿ ಭಾಗಿಯಾಗದೇ ದೂರ ಉಳಿದಿದ್ದರು.
--ಏನಿದು ಹೊಸ ಪ್ಲಾನ್?
- 1996ರಿಂದ ಬೆಂಗಳೂರಿನಲ್ಲಿ ಪ್ರತಿ 2 ವರ್ಷಕ್ಕೊಮ್ಮೆ ಏರೋ ಇಂಡಿಯಾ ಏರ್ ಶೋ ನಡೆಯುತ್ತಿದೆ
- ದೇಶದ ವಿವಿಧ ನಗರಗಳಲ್ಲಿ ಮೂರೂ ಸೇನಾ ಪಡೆಗಳ ಡಿಫೆಕ್ಸ್ ಎಕ್ಸ್ ಪೋ ಆಯೋಜನೆ ಆಗುತ್ತಿದೆ
- ಇದೀಗ ಈ ಎರಡೂ ಪ್ರದರ್ಶನಗಳನ್ನು ವಿಲೀನಗೊಳಿಸಿ ಒಂದೇ ಸ್ಥಳದಲ್ಲಿ ನಡೆಸಲು ಸರ್ಕಾರ ಚಿಂತನೆ
- ವಿಶ್ವದ ವಿವಿಧೆಡೆಯ ಉದ್ಯಮಿಗಳು, ತಜ್ಞರು ಆಗಮಿಸುವುದರಿಂದ ವ್ಯವಹಾರ ಸುಲಭವಾಗುತ್ತದೆ
- ಹೀಗಾಗಿ ವಿಶಾಲವಾದ ಸ್ಥಳಾವಕಾಶ ಹೊಂದಿರುವ ಬೇರೆ ಊರಿಗೆ ಏರ್ ಶೋ ಎತ್ತಂಗಡಿ ಯತ್ನ
--ಬೆಂಗಳೂರು ಏಕೆ ಬೇಡ?
- ಏರ್ ಶೋ ಜತೆಗೆ ಡಿಫೆನ್ಸ್ ಎಕ್ಸ್‌ಪೋ ನಡೆಸಲು ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಸ್ಥಳಾವಕಾಶ ಇಲ್ಲ
- ಸ್ಥಳಾವಕಾಶದ ಕೊರತೆಯಿಂದಾಗಿ ಹಲವು ಕಂಪನಿಗಳಿಗೆ ತಮ್ಮ ಹೊಸ ತಂತ್ರಜ್ಞಾನ ಪ್ರದರ್ಶಿಸಲು ಆಗುತ್ತಿಲ್ಲ
- 1996ರಿಂದ ಏರ್ ಶೋ ನಡೆಯುತ್ತಿದ್ದರೂ ಅಂತಾರಾಷ್ಟ್ರೀಯ ಮಾನದಂಡ ಪ್ರಕಾರ ಶಾಶ್ವತ ವ್ಯವಸ್ಥೆಗಳು ಇಲ್ಲ
- ವಾಯುಸೇನೆ ಕಾರ್ಯಾಚರಣೆ ನಡೆಸುವ ಕಾರಣ ವಾಯುನೆಲೆಯಲ್ಲಿ ಎಕ್ಸ್‌ಪೋ- ಏರ್‌ಶೋ ಒಟ್ಟಿಗೆ ನಡೆಸಲಾಗದು