ಸಾರಾಂಶ
ಶಂಕರ ಭಟ್ಟ ತಾರೀಮಕ್ಕಿ
ಯಲ್ಲಾಪುರ: ಪ್ರಸೂತಿ (ಹೆರಿಗೆ) ತಜ್ಞರಿಲ್ಲದೇ ಯಲ್ಲಾಪುರ ಸರ್ಕಾರಿ ಆಸ್ಪತ್ರೆ ಬಿಕೋ ಎನ್ನುತ್ತಿದೆ.ಆಸ್ಪತ್ರೆಯಲ್ಲಿ ಒಬ್ಬರೇ (ಡಾ.ದೀಪಕ್ ಭಟ್ಟ) ತಜ್ಞ ವೈದ್ಯರಿದ್ದರು. ಈಗ ಅವರೂ ವರ್ಗವಾಗಿದ್ದಾರೆ. ಸದ್ಯ ಇಡೀ ತಾಲೂಕಿನಲ್ಲಿ ಹೆರಿಗೆ ತಜ್ಞರಿಲ್ಲ. ದೂರದ ಶಿರಸಿ, ಹುಬ್ಬಳ್ಳಿಗೆ ಬಡವರಿಂದ ಹೋಗಲು ಸಾಧ್ಯವೇ? ಬಡವರ ಸೇವೆಗಾಗಿ ಇದ್ದ ಆಸ್ಪತ್ರೆ ಮುಚ್ಚುವ ಹುನ್ನಾರವೇ? ಆಯುರ್ವೇದ ಮತ್ತು ಹೋಮಿಯೋಪತಿ ವೈದ್ಯರಿಂದ ಹೆರಿಗೆ-ಸಿಜೇರಿಯನ್ ಸಾಧ್ಯವೇ ಎನ್ನುವುದು ಸಾರ್ವಜನಿಕರ ಪ್ರಶ್ನೆ.
ಇಲ್ಲಿ ತಿಂಗಳಿಗೆ ೫೦-೬೦ ಹೆರಿಗೆ, ಅದರಲ್ಲೂ ನಾರ್ಮಲ್ ಡೆಲಿವರಿ ಮಾಡಿಸುತ್ತಿದ್ದರು. ಅನಿವಾರ್ಯವಾದಲ್ಲಿ ಮಾತ್ರ ಹುಬ್ಬಳ್ಳಿ, ಶಿರಸಿಗೆ ಹೋಗಲು ಸೂಚಿಸುತ್ತಿದ್ದರು. ಬಡವರ ಸೇವೆ ಮಾಡುತ್ತಿದ್ದರು. ಇಲ್ಲಿ ತಾಲೂಕು ಅಲ್ಲದೇ ಹೊರಗಿನ ಜಿಲ್ಲೆಗಳಿಂದಲೂ ಅನೇಕ ರೋಗಿಗಳು ಈ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿರುವುದು ಉಲ್ಲೇಖನೀಯ.ರಾಜ್ಯದಲ್ಲೇ ಯಲ್ಲಾಪುರ ಸರ್ಕಾರಿ ಆಸ್ಪತ್ರೆ ಕುರಿತು ಮೆಚ್ಚುಗೆ ಇದೆ. ಉತ್ತಮ ಗುಣಮಟ್ಟದ ಚಿಕಿತ್ಸೆ, ಬಡವರನ್ನು ಶೋಷಿಸದೇ ಸ್ವಚ್ಛತೆ ಮತ್ತು ಸೇವೆಗೆ ಹೆಸರಾಗಿದೆ. ಇಲಾಖೆಯ ಅನೇಕ ಪ್ರಶಸ್ತಿ ಕೂಡ ಈ ಆಸ್ಪತ್ರೆಗೆ ಲಭಿಸಿವೆ. ಕೆಲವು ತಿಂಗಳ ಹಿಂದೆ ಆರೋಗ್ಯ ಸಚಿವರು ಕೂಡ ಆಸ್ಪತ್ರೆಯ ಸ್ಥಿತಿಗತಿಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಂತಹ ಆಸ್ಪತ್ರೆ ಇಂದು ಸ್ತ್ರೀರೋಗ ತಜ್ಞರಿಲ್ಲದೇ ಬಡಜನರ ಕಷ್ಟಕಾರ್ಪಣ್ಯ ಕೇಳುವವರಿಲ್ಲದಂತಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ₹40 ಸಾವಿರದಿಂದ ₹50 ಸಾವಿರ ಕೊಟ್ಟು ಹೆರಿಗೆ ಮಾಡಿಸಿಕೊಳ್ಳುವ ಸ್ಥಿತಿ ನಿರ್ಮಾಣಗೊಂಡಿದೆ.
ಸರ್ಕಾರ ಆರೋಗ್ಯ ಇಲಾಖೆಯ ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ಶೇ.40 ಸಿಬ್ಬಂದಿಯನ್ನು ಕಡಿತಗೊಳಿಸುತ್ತಿದೆ. ೪೦ ವರ್ಷಗಳ ಹಿಂದೆ ಆರೋಗ್ಯ ಸಿಬ್ಬಂದಿ ಮತ್ತು ವೈದ್ಯರು ಎಷ್ಟಿರಬೇಕೋ ಅಷ್ಟೇ ಹುದ್ದೆ ಇಂದೂ ಇದೆ. ಜನಸಂಖ್ಯೆಗನುಗುಣವಾಗಿ ಹೆಚ್ಚಿಸಬೇಕಿತ್ತು. ಸರ್ಕಾರ ಆರೋಗ್ಯಕ್ಕೆ ಮಹತ್ವ ಕೊಡುತ್ತಲೇ ಇಲ್ಲ. ಅದರಲ್ಲೂ ಶೇ.೪೦ ಸಿಬ್ಬಂದಿ ಕಡಿತ ಬಹಳ ತ್ರಾಸದಾಯಕವಾಗಿದೆ. ೫-೬ ಜನರ ಕಾರ್ಯವನ್ನು ಈಗ ಒಬ್ಬರೇ ನಿರ್ವಹಿಸುವ ಸ್ಥಿತಿ ಬಂದಿದೆ.ನಮ್ಮ ಆಸ್ಪತ್ರೆಯಿಂದ ಹೆರಿಗೆ ತಜ್ಞರು ವರ್ಗಾವಣೆಗೊಂಡಿದ್ದಾರೆ. ಬದಲಿ ವೈದ್ಯರು ಇನ್ನು ಬಂದಿಲ್ಲ. ಶಿರಸಿಯಿಂದ ಇಎನ್‌ಟಿ ವೈದ್ಯರು ಮತ್ತು ಕೆಲ ಕ್ಲರಿಕಲ್ ವೈದ್ಯರು ಮಾತ್ರ ಬಂದಿದ್ದಾರೆ ಎನ್ನುತ್ತಾರೆ ತಾಲೂಕು ವೈದ್ಯಾಧಿಕಾರಿ ಡಾ.ನರೇಂದ್ರ ಪವಾರ.