ಗುತ್ತಿಗಾರು: ಅಡಿಕೆ ಬೆಳೆಗಾರರನ್ನು ಕಂಗಾಲಾಗಿಸಿರುವ ''''''''ಎಲೆ ಚುಕ್ಕಿ ರೋಗ''''''''ದ ಸಮರ್ಪಕ ನಿರ್ವಹಣೆ ಹಾಗೂ ಸಂಶೋಧನಾ ಕ್ರಮಗಳ ಪರಿಶೀಲನೆಗಾಗಿ, ಕಾಸರಗೋಡಿನ ಕೇಂದ್ರ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯು (ICAR-CPCRI) ಹಮ್ಮಿಕೊಂಡ ನಿರ್ವಹಣಾ ಕ್ರಮದ ಪ್ರಾತ್ಯಕ್ಷಿಕೆ ತೋಟಕ್ಕೆ ಸಿಪಿಸಿಆರ್‌ಐ ನಿರ್ದೇಶಕ ಡಾ.ಕೆ ಬಿ ಬಾಲಚಂದ್ರ ಹೆಬ್ಬಾರ್‌ ಹಾಗೂ ಹಿರಿಯ ವಿಜ್ಞಾನಿಗಳ ತಂಡ ಭೇಟಿ ನೀಡಿದರು. ಕೇಂದ್ರ ಅಡಿಕೆ ಮತ್ತು ಸಂಬಾರ ಬೆಳೆ ಅಭಿವೃದ್ಧಿ ಸಂಸ್ಥೆ ತೋಟಗಾರಿಕಾ ಸಮಗ್ರ ಅಭಿವೃದ್ಧಿ ಮಿಷನ್‌ ಆರ್ಥಿಕ ನೆರವಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಹಾಗೂ ನಾಲ್ಕೂರು ಗ್ರಾಮದಲ್ಲಿ ವಿಟ್ಲದ ಸಿ.ಪಿ.ಸಿ.ಆರ್.ಐ ಪ್ರಾದೇಶಿಕ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿರುವ "ಅಡಿಕೆ ಎಲೆ ಚುಕ್ಕಿ ರೋಗದ ನಿರ್ವಹಣೆ ಕುರಿತು ಬೃಹತ್ ಪ್ರಮಾಣದ ಪ್ರಾತ್ಯಕ್ಷಿಕೆ " (Large Scale Demonstration) ಕಾರ್ಯಕ್ರಮದ ಪ್ರಗತಿಯನ್ನು ಸಿಪಿಸಿಆರ್‌ಐ ನಿರ್ದೇಶಕ ಡಾ.ಕೆ ಬಿ ಹೆಬ್ಬಾರ್‌ ವೀಕ್ಷಿಸಿದರು. ಈ ಸಂದರ್ಭದಲ್ಲಿ ತೋಟದಲ್ಲಿ ಅಳವಡಿಸಲಾಗಿರುವ ಹವಾಮಾನ ಮಾಪನ ಯಂತ್ರ ಹಾಗೂ ರೋಗ ಬಾಧಿತ ಮರಗಳಿಗೆ ನೀಡಲಾಗುತ್ತಿರುವ ಸಂಯೋಜಿತ ಚಿಕಿತ್ಸಾ ಕ್ರಮಗಳನ್ನು ಅವರು ಗಮನಿಸಿದರು. ಇದೇ ವೇಳೆ ತೋಟದ ಅಡಿಕೆ ಬೆಳೆಗಾರರಲ್ಲೂ ಪ್ರಗತಿಯ ಬಗ್ಗೆ ಮಾಹಿತಿ ಪಡೆದರು. ಪ್ರಾತ್ಯಕ್ಷಿಕೆ ಫಲಕದ ಮೂಲಕ ರೈತರಿಗೆ ರೋಗ ನಿರ್ವಹಣೆಯ ಕುರಿತು ನೀಡಲಾಗಿರುವ ಸಲಹೆಗಳನ್ನು ನಿರ್ದೇಶಕರು ಶ್ಲಾಘಿಸಿದರು.ಮುಖ್ಯವಾಗಿ ಮಣ್ಣು ಪರೀಕ್ಷೆಯ ಆಧಾರದ ಮೇಲೆ ಪೋಷಕಾಂಶಗಳ ನಿರ್ವಹಣೆ. ಬೋರ್ಡೋ ದ್ರಾವಣ ಮತ್ತು ಶಿಲೀಂಧ್ರನಾಶಕಗಳ ಹಂತ ಹಂತದ ಸಿಂಪಡಣೆ, ರೋಗಗ್ರಸ್ತ ಎಲೆಗಳನ್ನು ನಾಶಪಡಿಸುವ ಮೂಲಕ ರೋಗ ಹರಡುವಿಕೆಯನ್ನು ತಡೆಗಟ್ಟುವುದು ಇವು ಮುಖ್ಯವಾದ ಅಂಶಗಳಾಗಿವೆ. ತೋಟದಲ್ಲಿ ಅಳವಡಿಸಲಾಗಿರುವ ಸೆನ್ಸರ್ ಆಧಾರಿತ ತಂತ್ರಜ್ಞಾನಗಳು ರೋಗದ ತೀವ್ರತೆ ಮತ್ತು ಹವಾಮಾನದ ಏರಿಳಿತಗಳ ನಡುವಿನ ಸಂಬಂಧವನ್ನು ಅಧ್ಯಯನ ಮಾಡಲು ಸಹಕಾರಿಯಾಗಿದೆ . ಈ ನಿಟ್ಟಿನಲ್ಲಿ ಅಳವಡಿಸಲಾಗಿರುವ ವೆದರ್‌ ಸ್ಟೇಷನ್‌ ಮೂಲಕ ಪರಿಸರದ ಹವಾಮಾನ ಏರಿಳಿತ ಹಾಗೂ ಬದಲಾವಣೆಯನ್ನು ಅರಿಯಲು ಹಾಗೂ ತೋಟದ ಮೇಲಾಗುವ ಪರಿಣಾಮಗಳ ಅಧ್ಯಯನ ಕೂಡಾ ಸಾಧ್ಯವಾಗುತ್ತಿದೆ. ಈ ಭೇಟಿಯ ಸಂದರ್ಭದಲ್ಲಿ ಕಾಸರಗೋಡು ಸಿ.ಪಿ.ಸಿ.ಆರ್.ಐ ಹಿರಿಯ ವಿಜ್ಞಾನಿ ಡಾ. ವಿನಾಯಕ ಹೆಗ್ಡೆ, ವಿಟ್ಲ ಕೇಂದ್ರದ ವಿಜ್ಞಾನಿಗಳಾದ ಡಾ.ಭವಿಷ್ಯ, ಡಾ.ಥವಪ್ರಕಾಶ್‌ ಪಾಂಡ್ಯ ಹಾಗೂ ಪ್ರಾಜೆಕ್ಟ್‌ ಸಹಾಯಕರುಗಳಾದ ಅಖಿಲ ಹಾಗೂ ಹಿತಶ್ರೀ ಕೃಷಿಕರಾದ ರಮೇಶ್‌ ದೇಲಂಪಾಡಿ , ಅರುಣ್‌ ಕುಮಾರ್‌ ಕಾಂಚೋಡು, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್‌ ಪುಚ್ಚಪ್ಪಾಡಿ ಇದ್ದರು. ಪ್ರಾತ್ಯಕ್ಷಿಕೆ ತೋಟದ ಕೃಷಿಕರಾದ ಸುಬ್ರಹ್ಮಣ್ಯ ಪ್ರಸಾದ್‌, ಗಿರೀಶ್‌ ಗೌಡ ನಡುಗಲ್ಲು, ಕುಮಾರಸ್ವಾಮಿ ಮೇಲ್ತೋಟ, ಚಂದ್ರಶೇಖರ ಭಟ್‌, ತಿರುಮಲೇಶ್ವರ ಭಟ್‌ ಚಣಿಲ ಅವರ ತೋಟಕ್ಕೆ ಭೇಟಿ ನೀಡಿದರು.ವಿಜ್ಞಾನಿಗಳ ತಂಡವು ರೈತರೊಂದಿಗೆ ಸಂವಾದ ನಡೆಸಿ, ರೋಗ ನಿಯಂತ್ರಣಕ್ಕೆ ಸಂಶೋಧನಾ ಸಂಸ್ಥೆಯು ಸಂಪೂರ್ಣ ಸಹಕಾರ ನೀಡಲಿದೆ ಎಂಬ ಭರವಸೆಯನ್ನು ನೀಡಿತು.