ಹಳಿ ತಪ್ಪಿದ ಯಶವಂತಪುರ ಕಾರಟಗಿ ರೈಲು

| Published : Oct 18 2023, 01:00 AM IST

ಸಾರಾಂಶ

ಯಶವಂತಪುರದಿಂದ ಕಾರಟಗಿಗೆ ಬರುತ್ತಿದ್ದ ರೈಲು ಮಂಗಳವಾರ ಮಧ್ಯಾಹ್ನ ಇಲ್ಲಿ ಹಳಿ ತಪ್ಪಿದ್ದು, ಲೋಕೊ ಪೈಲೆಟ್‌ ಮುನ್ನೆಚ್ಚರಿಕೆಯಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ.

ಕಾರಟಗಿ: ಯಶವಂತಪುರದಿಂದ ಕಾರಟಗಿಗೆ ಬರುತ್ತಿದ್ದ ರೈಲು ಮಂಗಳವಾರ ಮಧ್ಯಾಹ್ನ ಇಲ್ಲಿ ಹಳಿ ತಪ್ಪಿದ್ದು, ಲೋಕೊ ಪೈಲೆಟ್‌ ಮುನ್ನೆಚ್ಚರಿಕೆಯಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ.

ಇಲ್ಲಿನ ರೈಲ್ವೆ ನಿಲ್ದಾಣದಿಂದ ೩೦೦ ಮೀಟರ್ ಸಮೀಪದಲ್ಲಿ ಬರುತ್ತಿದ್ದಂತೆ ರೈಲು ಹಳಿ ತಪ್ಪಿದ್ದು, ಲೋಕೋ ಪೈಲಟ್‌ ತಕ್ಷಣ ರೈಲಿನ ವೇಗ ಕಡಿಮೆ ಮಾಡಿ ನಿಲ್ಲಿಸಿ ಅನಾಹುತ ತಪ್ಪಿಸಿದ್ದಾರೆ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ರೈಲಿನಿಂದ ಇಳಿದಿದ್ದಾರೆ.

ಪ್ರತಿನಿತ್ಯ ಬೆಂಗಳೂರು- ಯಶವಂತಪುರ ರಯಲು ಕಾರಟಗಿಗೆ ಬೆಳಗ್ಗೆ ೧೦.೩೦ಕ್ಕೆ ಬರುತ್ತದೆ. ಮಂಗಳವಾರ 12 ಗಂಟೆಯ ಹೊತ್ತಿಗೆ ನಿಲ್ದಾಣ ಸಮೀಪದಲ್ಲಿ ಬರುತ್ತಿದ್ದಾಗ ರೈಲಿನ ಎಂಜಿನ್‌ ಹಳಿ ತಪ್ಪಿದೆ. ನಿಲ್ದಾಣ ಸಮೀಪವೇ ಇದ್ದ ಕಾರಣ ರೈಲು ನಿಧಾನವಾಗಿ ಚಲಿಸುತ್ತಿತ್ತು. ರೈಲು ಹಳಿ ತಪ್ಪಿದ್ದು ಲೋಕೋ ಪೈಲಟ್‌ಗೆ ಗೊತ್ತಾಗುತ್ತಿದ್ದಂತೆ ರೈಲನ್ನು ತಕ್ಷಣ ವೇಗ ತಗ್ಗಿಸಿ ನಿಲ್ಲಿಸಿದ್ದಾನೆ. ಹೀಗಾಗಿ ಎಂಜಿನ್‌ ಮಾತ್ರ ಹಳಿ ತಪ್ಪಿದ್ದು, ರೈಲಿನ ಬೋಗಿಗಳಿಗೆ ಯಾವುದೇ ಹಾನಿಯಾಗಿಲ್ಲ.ರೈಲು ಒಂದು ಹಳಿಯಿಂದ ಇನ್ನೊಂದು ಹಳಿಗೆ ಮಾರ್ಗ ಬದಲಿಸುವಾಗ ಈ ಘಟನೆ ನಡೆದಿದೆ. ಬೆಳಗ್ಗೆ ೧೦.೪೫ಕ್ಕೆ ಬರಬೇಕಾಗಿದ್ದ ರೈಲು ಮಧ್ಯಾಹ್ನ ೧೨ಕ್ಕೆ ಕಾರಟಗಿಗೆ ಬಂದಿದೆ. ವಿಷಯ ತಿಳಿದು ರೈಲ್ವೆ ಇಲಾಖೆಯ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಹಳಿ ತಪ್ಪಿದ ರೈಲನ್ನು ಪುನಃ ಟ್ರ್ಯಾಕ್‌ಗೆ ತರಲು ಮುಂದಾದರು.

ಸ್ಥಳ ಬದಲು: ಮಧ್ಯಾಹ್ನ ೨ಕ್ಕೆ ಹುಬ್ಬಳ್ಳಿಯಿಂದ ಕಾರಟಗಿಗೆ ಬರಬೇಕಾಗಿದ್ದ ರೈಲಿನ ಸಂಚಾರ ರದ್ದು ಪಡಿಸಿ ಗಂಗಾವತಿ ನಿಲ್ದಾಣದಲ್ಲಿಯೇ ನಿಲ್ಲಿಸಿ ಕಾರಟಗಿ ಪ್ರಯಾಣಿಕರಿಗೆ ಬಸ್‌ ವ್ಯವಸ್ಥೆ ಕಲ್ಪಿಸಲಾಯಿತು. ಕಾರಟಗಿಯಿಂದ ಹುಬ್ಬಳ್ಳಿಗೆ ೨.೩೦ಕ್ಕೆ ಹೋಗಬೇಕಾಗಿದ್ದ ರೈಲನ್ನು ಗಂಗಾವತಿಯಿಂದ ಕಳುಹಿಸಲಾಗಿದೆ. ಕಾರಟಗಿ ಬದಲು ಗಂಗಾವತಿಯಿಂದ ಯಶವಂತಪುರಕ್ಕೆ ರೈಲು ಸಂಚಾರ ವ್ಯವಸ್ಥೆ ಮಾಡಲಾಗಿದೆ. ಕಾರಟಗಿ ಪ್ರಯಾಣಿಕರಿಗೆ ಅಲ್ಲಿಂದ ಹೋಗುವ ಬಸ್‌ ವ್ಯವಸ್ಥೆ ಮಾಡಲಾಗಿದೆ.ಭರದಿಂದ ಸಾಗಿದ ದುರಸ್ತಿ ಕಾರ್ಯ: ಪಾಯಿಂಟ್ ನಂ.೧೦೨ರ ಟ್ರ್ಯಾಕ್ ಸಮಸ್ಯೆಯಿಂದಾಗಿ ಹಳಿ ತಪ್ಪಲು ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ತನಿಖೆ ಬಳಿಕ ನಿಖರ ಮಾಹಿತಿ ದೊರೆಯಲಿದೆ ಎಂದು ಇಲಾಖೆಯ ಸೀನಿಯರ್ ಡಿಸಿಎಂ ಸಂತೋಷ ಹೆಗಡೆ ತಿಳಿಸಿದ್ದಾರೆ.ರೈಲನ್ನು ಟ್ರ್ಯಾಕ್‌ಗೆ ತರಲು ಎಂಜಿನಿಯರ್‌ಗಳು ಮತ್ತು ಸಿಬ್ಬಂದಿ ಯುದ್ದೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಪ್ರಯಾಣಿಕರು ತಾವು ತೆರಳಬೇಕಾದ ಸ್ಥಳಕ್ಕೆ ಹೋಗಲು ಅನುಕೂಲ ಕಲ್ಪಿಸಲು ಗಂಗಾವತಿ ಹಾಗೂ ಕಾರಟಗಿಯಲ್ಲಿ ಸಾರಿಗೆ ಸಂಸ್ಥೆಯ ಬಸ್‌ ವ್ಯವಸ್ಥೆ ಮಾಡಲಾಗಿದೆ. ದುರಸ್ತಿ ಕಾರ್ಯ ಭರದಿಂದ ಸಾಗಿದೆ. ಕೆಲ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ವಲಯ ತಿಳಿಸಿದೆ.