ಯೂರಿಯಾ ಕೊರತೆಯಿಂದ ಇಳುವರಿ ಕುಂಠಿತ ಸಂಭವ

| Published : Jul 29 2025, 01:06 AM IST

ಸಾರಾಂಶ

ಈ ವರ್ಷ ಸರಿಯಾದ ಸಮಯಕ್ಕೆ ಯೂರಿಯಾ ಸಿಗದೇ ಇದ್ದುದರಿಂದ ಹೆಚ್ಚು ಇಳುವರಿ ನಿರೀಕ್ಷೆ ಇಟ್ಟುಕೊಂಡಿದ್ದ ತಾಲೂಕಿನ ರೈತರ ನಿರೀಕ್ಷೆಗೆ ಎಳ್ಳುನೀರು ಬಿಟ್ಟಂತಾಗಿದೆ.

ವಾರದ ನಂತರ ಯೂರಿಯಾ ಬಂದರೂ ಯಾವುದೇ ಬೆಳೆಗಳಿಗೆ ಪ್ರಯೋಜನವಿಲ್ಲ ಎನ್ನುವ ಪರಿಸ್ಥಿತಿಭೀಮಣ್ಣ ಗಜಾಪುರ

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಈ ವರ್ಷ ಸರಿಯಾದ ಸಮಯಕ್ಕೆ ಯೂರಿಯಾ ಸಿಗದೇ ಇದ್ದುದರಿಂದ ಹೆಚ್ಚು ಇಳುವರಿ ನಿರೀಕ್ಷೆ ಇಟ್ಟುಕೊಂಡಿದ್ದ ತಾಲೂಕಿನ ರೈತರ ನಿರೀಕ್ಷೆಗೆ ಎಳ್ಳುನೀರು ಬಿಟ್ಟಂತಾಗಿದೆ. ಇನ್ನು ಎರಡು ಮೂರು ದಿನಗಳೊಳಗೆ ಬಂದರೆ ಉತ್ತಮ. ವಾರದ ನಂತರ ಯೂರಿಯಾ ಬಂದರೂ ಯಾವುದೇ ಬೆಳೆಗಳಿಗೆ ಪ್ರಯೋಜನವಿಲ್ಲ ಎನ್ನುವ ಪರಿಸ್ಥಿತಿ ಎದುರಾಗಿದೆ.

ಕೂಡ್ಲಿಗಿ ತಾಲೂಕಿನಲ್ಲಿ 46,299 ಹೆಕ್ಟೇರ್ ಬಿತ್ತನೆ ಪ್ರದೇಶ ಇದೆ. ಇದರಲ್ಲಿ ಶೇ. 95ರಷ್ಟು ಅಂದರೆ 45974 ಹೆಕ್ಟೇರ್ ಬಿತ್ತನೆಯಾಗಿದೆ. ಕಳೆದ ವರ್ಷ 25 ಸಾವಿರ ಹೆಕ್ಟರ್ ಪ್ರದೇಶ ಬಿತ್ತನೆಯಾಗಿತ್ತು. ಮೆಕ್ಕೆಜೋಳ 15 ಸಾವಿರ ಹೆಕ್ಟೇರ್ ಆಗಿತ್ತು. ಆದರೆ ಈ ವರ್ಷ ಶೇಂಗಾ 20 ಸಾವಿರ ಹೆಕ್ಟೇರ್, ಮೆಕ್ಕೆಜೋಳ 25 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ. ಈ ಬಾರಿ 10 ಸಾವಿರ ಹೆಕ್ಟೇರ್ ಹೆಚ್ಚಿಗೆ ಬಿತ್ತನೆ ಆಗಿದ್ದರಿಂದ 400 ಟನ್ ಯೂರಿಯಾಗೆ ಹೆಚ್ಚುವರಿ ಬೇಡಿಕೆ ಬಂದಿದೆ. ಈ ಹಿಂದೆ ತಾಲೂಕಿಗೆ 3110 ಟನ್ ಯೂರಿಯಾ ಬೇಕಾಗಿತ್ತು. ಇಲ್ಲಿಯವರೆಗೂ 3544 ಟನ್ ಯೂರಿಯಾ ಹೆಚ್ಚಿಗೆ ಬಂದಿದೆ. ಕಳೆನಾಶಕ ಸಿಂಪಡಣೆ ಮಾಡುವಾಗ 400 ಟನ್ ಈ ಬಾರಿ ಹೆಚ್ಚಿಗೆ ಬೇಕಾಗಿತ್ತು. ರೈತರು ಕಳೆನಾಶಕ ಸಿಂಪಡಿಸುವಾಗ 1 ಎಕರೆಗೆ 30ರಿಂದ 40 ಕೆಜಿ ಯೂರಿಯಾ ಉಪಯೋಗಿಸುತ್ತಾರೆ. ಇಧಕ್ಕಾಗಿ 1000 ಟನ್ ಯೂರಿಯಾ ಹೆಚ್ಚುವರಿಯಾಗಿ ಬೇಕಾಗುತ್ತದೆ. ಇದಲ್ಲದೇ ಮಳೆ ಹೆಚ್ಚಾಗಿ ಬೆಳೆಗಳು ಬೆಳ್ಳಗೆ ಆದರೆ ಎಕರೆಗೆ 1 ಚೀಲ ಯೂರಿಯಾ ಹೆಚ್ಚಿಗೆ ಹಾಕುತ್ತಾರೆ. ಹಾಗಾಗಿ 4 ದಿನಗಳ ಹಿಂದೆ 57 ಟನ್ ಯೂರಿಯಾ ಬಂದಿತ್ತು, 700ಕ್ಕೂ ಹೆಚ್ಚು ರೈತರು ಯೂರಿಯಾ ಪಡೆದಿದ್ದಾರೆ. ಇನ್ನೂ ಹೆಚ್ಚಿರುವ ಬೇಡಿಕೆ ಈಡೇರಿಸಲು ಆಗುತ್ತಿಲ್ಲ. ಹಂತ ಹಂತವಾಗಿ ಯೂರಿಯಾ ಕೂಡ್ಲಿಗಿಗೆ ಬಂದರೂ ಸಾಲುತ್ತಿಲ್ಲವಾಗಿದೆ.

ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಯೂರಿಯಾ ಬಗ್ಗೆ ಈಗಾಗಲೇ ಕೖಷಿ ಇಲಾಖೆ ಅಧಿಕಾರಿಗಳು, ರೈತರು, ಗೊಬ್ಬರ ವ್ಯಾಪಾರಿಗಳ ಸಭೆ ಕರೆದು ಯೂರಿಯಾ ರೈತರಿಗೆ ತಲುಪಲು ಶ್ರಮಿಸುತ್ತಿದ್ದಾರೆ. ಕೃಷಿ ಸಚಿವರ ಹತ್ತಿರ ಈ ಬಗ್ಗೆ ಮಾತನಾಡಿ ಕೂಡ್ಲಿಗಿ ತಾಲೂಕಿಗೆ ಯೂರಿಯಾ ಕಳಿಸುವಂತೆ ಕೋರಿದ್ದಾರೆ. ಜೊತೆಗೆ ಕೖಷಿ ಇಲಾಖೆಯ ಅಧಿಕಾರಿಗಳ ಜೊತೆಯೂ ಈ ಬಗ್ಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಇದು ಫಲ ಕೊಡುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.