ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ 34ನೇ ವರ್ಷಕ್ಕೆ ಪದಾರ್ಪಣೆ

| Published : Aug 10 2024, 01:40 AM IST

ಸಾರಾಂಶ

ಈ ಯೋಜನೆಯಡಿ ಪ್ರತಿ ವರ್ಷ ರಾಜ್ಯಮಟ್ಟದ ‘ಅಂಚೆ- ಕುಂಚ’ ಚಿತ್ರಕಲಾ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಯೋಗ ಮತ್ತು ಮೌಲ್ಯ ಶಿಕ್ಷಣ ಆಧುನಿಕ ಯುಗದ ಅಗತ್ಯಗಳಲ್ಲೊಂದು. ಇಂತಹ ಶಿಕ್ಷಣವನ್ನು ಬಾಲ್ಯದಲ್ಲಿಯೇ ಶಾಲಾ ವಿದ್ಯಾರ್ಥಿಗಳಿಗೆ ದೊರಕಿಸಿಕೊಡುವ ಒಂದು ಸುಂದರ ಕನಸನ್ನು 1990ರಲ್ಲಿಯೇ ಕಂಡು ಶಾಂತಿವನ ಟ್ರಸ್ಟ್ (ರಿ.) ಮೂಲಕ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯನ್ನು ಆರಂಭಿಸಿ ಶಿಕ್ಷಕರಿಗೆ ತನ್ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಯೋಜನೆಯೊಂದನ್ನು ಕಾರ್ಯಗತಗೊಳಿಸಿದ ಕೀರ್ತಿ ಪದ್ಮವಿಭೂಷಣ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಸಲ್ಲುತ್ತದೆ. ಈ ವರ್ಷ ಈ ಯೋಜನೆಯು 34ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಈ ಯೋಜನೆಯಡಿ ಪ್ರತಿ ವರ್ಷ ರಾಜ್ಯಮಟ್ಟದ ‘ಅಂಚೆ- ಕುಂಚ’ ಚಿತ್ರಕಲಾ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ವಿಶೇಷವಾಗಿ ಮಕ್ಕಳಿಗೆ ಪ್ರೋತ್ಸಾಹ ನೀಡಲು ಪ್ರಾಥಮಿಕ ಶಾಲಾ ವಿಭಾಗ, ಪ್ರೌಢಶಾಲಾ ವಿಭಾಗ ಹಾಗೂ ಕಾಲೇಜು ವಿಭಾಗ ಹೀಗೆ ವಿಭಾಗಗಳಿವೆ. ಸಾರ್ವಜನಿಕರಿಗಾಗಿ ಸಾರ್ವಜನಿಕ ವಿಭಾಗದಲ್ಲಿಯೇ ಪ್ರತ್ಯೇಕ ಸ್ಪರ್ಧೆ ಇದೆ. ಇದುವರೆಗೆ ನಡೆದ ಅಂಚೆ ಕುಂಚ ಸ್ಪರ್ಧೆಗಳಲ್ಲಿ 2.49,400 ಮಂದಿ ಕುಂಚ ಕಲಾವಿದರು ಭಾಗವಹಿಸಿದ್ದಾರೆ. ಈ ಯೋಜನೆಯ ಮತ್ತೊಂದು ಬಹುಮುಖ್ಯ ಚಟುವಟಿಕೆ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಪ್ರಕಟಣೆ, ಪ್ರತೀ ವರ್ಷ ವಿವಿಧ ಲೇಖಕರಿಂದ ನೈತಿಕ ಮೌಲ್ಯಾಧಾರಿತ ಬರಹಗಳನ್ನು ಬರೆಸಿ, ಅಥವಾ ಲೇಖನಗಳನ್ನು ಸಂಗ್ರಹಿಸಿ, ಶಾಂತಿವನ ಟ್ರಸ್ಟ್ (ರಿ.) ಮೂಲಕ ಪ್ರಕಟಿಸಿ, ಶಾಲೆ-ಶಾಲೆಗಳಿಗೆ ಸಂಪರ್ಕಿಸಿ, ವಿದ್ಯಾರ್ಥಿಗಳಿಗೆ ವಿತರಿಸಿ, ಶಾಲೆ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪುಸ್ತಕಗಳನ್ನು ಆಧರಿಸಿ ಭಾಷಣ, ಪ್ರಬಂಧ, ಕಂಠಪಾಠ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಸುಂದರ ಪ್ರಮಾಣ ಪತ್ರವನ್ನು ನೀಡುವುದರ ಜೊತೆಗೆ ವಿಜೇತರನ್ನು ವಿಶೇಷ ಸಮಾರಂಭದಲ್ಲಿ ಬಹುಮಾನ ನೀಡಿ ಗೌರವಿಸುವ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ.

29 ಮಾಲಿಕೆಯಲ್ಲಿ 52 ಪುಸ್ತಕಗಳು ಪ್ರಕಟಗೊಂಡು ಇಪ್ಪತ್ತೂರು ಲಕ್ಷದ ಇಪ್ಪತ್ತೂರು ಸಾವಿರ ಪ್ರತಿಗಳು ವಿತರಣೆಗೊಂಡಿವೆ. ಹೆಗ್ಗಡೆಯವರ ಕನಸನ್ನು ಸಾಕಾರಗೊಳಿಸುವಲ್ಲಿ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಹಾಗೂ ಯೋಜನೆಯ ನಿರ್ದೇಶಕ ಡಾ.ಬಿ. ಶಶಿಕಾಂತ ಜೈನ್ ಅವರ ಪಾತ್ರ ಹಿರಿದಾಗಿದೆ. ಬಾಕ್ಸ್‌

ನೈತಿಕ ಮೌಲ್ಯಾಧಾರಿತ ಪುಸ್ತಕಗಳ ವಿತರಣೆ ಹಾಗೂ ಸ್ಪರ್ಧೆಗಳ ವ್ಯವಸ್ಥೆಗಳಿಗಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.ಶಾಲೆಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಂತೋಷದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ನೀಡಲಾಗುತ್ತದೆ. ನುರಿತ ತೀರ್ಪುಗಾರರನ್ನು ಬಳಸಿಕೊಂಡು ನ್ಯಾಯಯುತ ತೀರ್ಪನ್ನು ನೀಡಲಾಗುತ್ತಿದೆ.

ಹೆಗ್ಗಡೆ ದಂಪತಿ ನೈತಿಕ ಮೌಲ್ಯಾಧಾರಿತ ಪುಸ್ತಕದ ಬಗ್ಗೆ ವಿಶೇಷ ಕಾಳಜಿ ವಹಿಸಿ ಲೇಖನಗಳ ಆಯ್ಕೆ ಮಾಡುವಲ್ಲಿ ಅವರದ್ದು ಸಿಂಹಪಾಲು ಆಗಿರುತ್ತದೆ.

ಹರ್ಷೇಂದ್ರ ಕುಮಾರ್ ಅವರು ಯೋಜನೆಯ ಕಾರ್ಯಕ್ರಮದ ಬಗ್ಗೆ ಸಂಪೂರ್ಣ ಮಾರ್ಗದರ್ಶನ ನೀಡುತ್ತಿದ್ದಾರೆ. ಬಾಕ್ಸ್--------ಇಂದು ಲೋಕಾರ್ಪಣೆ ಮತ್ತು ಪುರಸ್ಕಾರ ಸಮಾರಂಭಧರ್ಮಸ್ಥಳದ ಶಾಂತಿವನಟ್ರಸ್ಟ್ ಆಶ್ರಯದಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿಯಲ್ಲಿ ಆಯೋಜಿಸಿದ ಇಪ್ಪತ್ತೊಂದನೇ ವರ್ಷದ ರಾಜ್ಯಮಟ್ಟದ ಅಂಚೆ- ಕುಂಚ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಆ.10ರಂದು ಶನಿವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಬೆಳಗ್ಗೆ ೧೦.೩೦ರಿಂದ ನಡೆಯಲಿದೆ ಎಂದು ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಶಶಿಕಾಂತ್ ಜೈನ್ ತಿಳಿಸಿದ್ದಾರೆ.

ಚಲನಚಿತ್ರ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಬಹುಮಾನ ವಿತರಿಸಲಿದ್ದಾರೆ. ಶಾಂತಿವನಟ್ರಸ್ಟ್ ವತಿಯಿಂದ ಪ್ರಕಟಿಸಲಾದ ‘ಜ್ಞಾನದರ್ಶಿನಿ’ ಮತ್ತು ‘ಜ್ಞಾನವರ್ಷಿನಿ’ ಎಂಬ ಮೂವತ್ತನೇ ವರ್ಷದ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನು ಹಾವೇರಿಯ ಹುಕ್ಕೇರಿ ಮಠದ ನಿರಂಜನ ಪ್ರಣವಸ್ವರೂಪಿ ಸದಾಶಿವ ಮಹಾಸ್ವಾಮೀಜಿ ಲೋಕಾರ್ಪಣೆ ಮಾಡುವರು.

ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ವೆಂಕಟೇಶ ಸುಬ್ರಾಯ ಪಟಗಾರ ಶುಭಾಶಂಸನೆ ಮಾಡುವರು. ಧಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು. ಮಂಗಳೂರಿನ ಸನಾತನ ನಾಟ್ಯಾಲಯದ ಕಲಾವಿದರಿಂದ ಗಾಯನ ಮತ್ತು ನೃತ್ಯ ಹಾಗೂ ದಾವಣಗೆರೆಯ ಖ್ಯಾತ ಕಲಾವಿದ ಶಾಂತಯ್ಯ ಪರಡಿಮಠ ಅವರಿಂದ ಕುಂಚಕಲಾ ಪ್ರದರ್ಶನ ನಡೆಯಲಿದೆ.

-----------------------------------------------------

(ಹೆಗ್ಗಡೆ ಹಾಗು ಹೇಮಾವತಿಯವರ ಫೊಟೊ ಹಾಕುವುದು)------