ಸಾರಾಂಶ
ಬ್ಯಾಡಗಿ: ಒತ್ತಡಮುಕ್ತ ಹಾಗೂ ಆರೋಗ್ಯಕರ ಜೀವನ ನಡೆಸಲು ಯೋಗ ವರದಾನವಾಗಿದೆ. ಪ್ರತಿದಿನ ಯೋಗ ಪ್ರಾಣಾಯಾಮ ರೂಢಿಸಿಕೊಂಡಲ್ಲಿ ಎಲ್ಲ ರೋಗಗಳಿಂದ ಮುಕ್ತಿ ಪಡೆಯಬಹುದಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಅಮೋಲ್ ಹಿರೇಕುಡಿ ಅಭಿಪ್ರಾಯಪಟ್ಟರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ಆಯುಷ ಇಲಾಖೆಯ ಸಹಭಾಗಿತ್ವದಲ್ಲಿ ಆಯೋಜನೆ ಮಾಡಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯೋಗ ವಿಶ್ವಕ್ಕೆ ಭಾರತ ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ. ಯೋಗ ಮತ್ತು ಪ್ರಾಣಾಯಾಮದ ಮಹತ್ವ ಇದೀಗ ಇಡೀ ವಿಶ್ವಕ್ಕೆ ತಿಳಿದಿದೆ. ಆದ್ದರಿಂದಲೇ ಜಗತ್ತಿನ ನೂರಾರು ದೇಶಗಳು ಯೋಗದ ಮೋರೆ ಹೋಗುತ್ತಿವೆ ಎಂದರು.ಕಿರಿಯ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ಸರ್ವ ರೋಗಗಳಿಗೂ ಯೋಗ ಮದ್ದು ಎಂಬುದು ಈಗಾಗಲೇ ಸಾಬೀತಾಗಿದೆ. ಆದ್ದರಿಂದ ಯೋಗವನ್ನು ತಪಸ್ಸಿನಂತೆ ಪ್ರತಿ ದಿನ ಅಳವಡಿಕೊಂಡಲ್ಲಿ ನೆಮ್ಮದಿ ಹಾಗೂ ರೋಗ ಮುಕ್ತ ಜೀವನ ದೊರೆಯಲಿದೆ ಎಂದರು.ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎನ್. ಬಾರ್ಕಿ ಉಪಾಧ್ಯಕ್ಷ ಬಿ.ಜಿ. ಹಿರೇಮಠ, ಎಂ.ಪಿ. ಹಂಜಗಿ, ಯೋಗ ಮಾರ್ಗದರ್ಶಕರಾದ ಮಂಜುಳಾ ಮೋಟೇಬೆನ್ನೂರ, ರಂಗನಾಥ ವಗ್ಗಪ್ಪನವರ, ಹಿರಿಯ ನ್ಯಾಯವಾದಿ ಎಫ್.ಎಂ. ಮುಳಗುಂದ ಹಾಗೂ ಪಿ.ಬಿ. ಸಿಂಗಿ, ಎಂ.ಬಿ. ಹಾವೇರಿ, ಸಿ.ಪಿ. ಡೊಣ್ಣೇರ, ಎಂ.ಕೆ.ಕೋಡಿಹಳ್ಳಿ, ಕೊಣ್ಣೂರ, ಗುಂಡಪ್ಪನವರ ಸೇರಿದಂತೆ ನ್ಯಾಯಾಲಯದ ಶಿರಸ್ತೇದಾರ ಜನಾರ್ದನ ಬಾರ್ಕಿ ಹಾಗೂ ನ್ಯಾಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.