ಸಾರಾಂಶ
ಮಸ್ಕತ್ ಓಮನ್‌ನ ಸಂಸ್ಕೃತಿ ಯೋಗ ತಂಡದ ಶ್ವೇತ ಪ್ರಭು, ವೀಣಾ ರೋಹಿತ್ ಕುಮಾರ್, ರವಿ ಪ್ರಕಾಶ್ ಭಟ್ ತರಬೇತುದಾರರಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಯೋಗದ ಎಲ್ಲ ಆಸನಗಳನ್ನು ಹೇಳಿಕೊಟ್ಟರು ಪ್ರದರ್ಶಿಸಿದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಇಂದು ಪ್ರಪಂಚದಾದ್ಯಂತ ಜನರು ತಮ್ಮದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗುತ್ತಿದ್ದಾರೆ. ವೈಯಕ್ತಿಕ ಆರೋಗ್ಯ ಮಾತ್ರವಲ್ಲದೆ ಸಾಮಾಜಿಕ ಸ್ವಾಸ್ಥ್ಯಕ್ಕೂ ಯೋಗ ಕೊಡುಗೆ ನೀಡುತ್ತದೆ ಎಂದು ಮಸ್ಕತ್‌ನ ಓಮನ್‌ನಲ್ಲಿ ಯೋಗ ತರಬೇತುದಾರರಾಗಿರುವ ಜಗದೀಶ್ ಬಂಗೇರ ಹೇಳಿದರು.ಮೂಡುಬಿದಿರೆ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಎನ್‌ಸಿಸಿ, ಎನ್‌ಎಸ್‌ಎಸ್, ರೇಂಜರ್ ರೋವರ್, ರೆಡ್‌ಕ್ರಾಸ್ ಘಟಕಗಳ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದರು.
ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್, ಯೋಗ ನಮ್ಮ ಭಾರತದ ಸಂಸ್ಕೃತಿ, ಸಂಸ್ಕಾರವಾಗಿದೆ. ಋಷಿ ಮುನಿಗಳಿಂದ ಬಳುವಳಿಯಾಗಿ ಬಂದಿರುವ ಯೋಗದ ಅಭ್ಯಾಸ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ದಿನಂಪ್ರತಿ ನಮ್ಮಜೀವನದಲ್ಲಿ ಅದು ಒಂದು ಭಾಗವಾಗಬೇಕು ಎಂದರು.ಮಸ್ಕತ್ ಓಮನ್‌ನ ಸಂಸ್ಕೃತಿ ಯೋಗ ತಂಡದ ಶ್ವೇತ ಪ್ರಭು, ವೀಣಾ ರೋಹಿತ್ ಕುಮಾರ್, ರವಿ ಪ್ರಕಾಶ್ ಭಟ್ ತರಬೇತುದಾರರಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಯೋಗದ ಎಲ್ಲ ಆಸನಗಳನ್ನು ಹೇಳಿಕೊಟ್ಟರು ಪ್ರದರ್ಶಿಸಿದರು.
ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್, ಜಯಶೀಲ, ಸೆಂಟ್ರಲ್ ಶಾಲೆಯ ಪ್ರಾಂಶುಪಾಲ ಸುರೇಶ್, ಎನ್‌ಸಿಸಿ ಅಧಿಕಾರಿ ಮಹೇಂದ್ರ ಕುಮಾರ್ ಜೈನ್, ಎನ್‌ಎಸ್‌ಎಸ್ ಅಧಿಕಾರಿ ತೇಜಸ್ವಿ ಭಟ್, ಸಂಧ್ಯಾ ಹಾಗೂ ಪ್ರದೀಪ್ ಹಾಗೂ ರೆಡ್‌ಕ್ರಾಸ್ ಅಧಿಕಾರಿ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು. ಎಕ್ಸಲೆಂಟ್ ಸೆಂಟ್ರಲ್ ಶಾಲೆಯ ಶೈಕ್ಷಣಿಕ ಸಂಯೋಜಕ ಶ್ರೀಪ್ರಸಾದ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಸುಧಾಶ್ರೀ ಕಾರ್ಯಕ್ರಮ ನಿರೂಪಿಸಿದರು. ದೈವಿಕ್ ಸ್ವಾಗತಿಸಿದರು. ಯಶಸ್ವಿನಿ ವಂದಿಸಿದರು.