ಭಾರತದ ಪ್ರಾಚೀನ ವಿದ್ಯೆ ಕಲೆಯಾಗಿರುವ ಯೋಗಕ್ಕೆ ಇಂದು ಅಂತಾರಾಷ್ಟ್ರೀಯ ಮನ್ನಣೆ ದೊರಕಿದೆ. ನೂರಾರು ಯುವಕ-ಯುವತಿಯರು ಇಂದು ದೇಶ ವಿದೇಶಗಳಲ್ಲಿ ಭಾರತೀಯ ‘ಯೋಗ ಶಿಕ್ಷಣ’ ನೀಡುವುದನ್ನು ತಮ್ಮ ಬದುಕಾಗಿಸಿಕೊಂಡಿದ್ದಾರೆ. ಕೇವಲ ಕೆಲವರಿಗೆ ಮಾತ್ರ ಕರಗತವಾಗಿದ್ದ ಯೋಗ ಇದೀಗ ಸಾಮಾನ್ಯ ವರ್ಗದ ಜನರ ಬದುಕಿನಲ್ಲೂ ಹಾಸು ಹೊಕ್ಕಾಗಿದೆ
ಭಾರತದ ಪ್ರಾಚೀನ ವಿದ್ಯೆ ಕಲೆಯಾಗಿರುವ ಯೋಗಕ್ಕೆ ಇಂದು ಅಂತಾರಾಷ್ಟ್ರೀಯ ಮನ್ನಣೆ ದೊರಕಿದೆ. ನೂರಾರು ಯುವಕ-ಯುವತಿಯರು ಇಂದು ದೇಶ ವಿದೇಶಗಳಲ್ಲಿ ಭಾರತೀಯ ‘ಯೋಗ ಶಿಕ್ಷಣ’ ನೀಡುವುದನ್ನು ತಮ್ಮ ಬದುಕಾಗಿಸಿಕೊಂಡಿದ್ದಾರೆ. ಕೇವಲ ಕೆಲವರಿಗೆ ಮಾತ್ರ ಕರಗತವಾಗಿದ್ದ ಯೋಗ ಇದೀಗ ಸಾಮಾನ್ಯ ವರ್ಗದ ಜನರ ಬದುಕಿನಲ್ಲೂ ಹಾಸು ಹೊಕ್ಕಾಗಿದೆ.
ನಗರದಲ್ಲಿ ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲೂ ಯೋಗಕ್ಕೆ ಹೆಚ್ಚು ಆದ್ಯತೆ ದೊರೆಯುತ್ತಿದೆ. ಜೂ. ೨೧ರಂದು ಜಗತ್ತಿನಾದ್ಯಂತ ಯೋಗ ದಿನ ಆಚರಿಸಲಾಗುತ್ತಿದೆ.ಮಾನವನ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಲು ಯೋಗದಂತಹ ವಿಧಾನ ಮತ್ತೊಂದಿಲ್ಲ. ಯೋಗದಿಂದ ಮಾನಸಿಕ ಶಾಂತಿ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಹಿಂದೆ ಋಷಿ ಮುನಿಗಳು ಯೋಗದ ಮೂಲಕ ಹಲವು ಅದ್ಭುತ ಚಮತ್ಕಾರಗಳನ್ನು ಮಾಡುತ್ತಿದ್ದರಂತೆ. ಔಷಧಿರಹಿತವಾಗಿ ದೇಹದ ಆರೋಗ್ಯ ರಕ್ಷಣೆಗೆ ಯೋಗ ಒಂದು ಸರಳವಾದ ಮಾರ್ಗ. ಈ ಹಿನ್ನೆಲೆಯಲ್ಲಿ ಯೋಗಕ್ಕೆ ಮಹತ್ವ ಹೆಚ್ಚಾಗಿದೆ. ಜನತೆಯ ದಿನಚರಿಯ ಭಾಗವಾಗುತ್ತಿದೆ.
ಯೋಗ ವಿದ್ಯೆ ಜನಾನುರಾಗಿಯಾಗುತ್ತಿದ್ದಂತೆ ಯೋಗ ಶಿಕ್ಷಣದತ್ತ ಹೆಚ್ಚು ಒಲವು ಕಂಡುಬರುತ್ತಿದೆ. ನಗರ ಬದುಕಿನ ಒತ್ತಡದ ನಡುವೆಯೂ ಯೋಗ ಜನತೆಯ ಬದುಕಿನಲ್ಲಿ ದೊಡ್ಡ ಪಾಲು ಪಡೆದುಕೊಂಡಿದೆ. ಗ್ರಾಮೀಣ ಜನತೆಗೂ ಯೋಗದ ಅಗತ್ಯತೆ ಹೆಚ್ಚು ಅರಿವಾಗುತ್ತಿದೆ. ಈ ಕಾರಣದಿಂದ ಹಳ್ಳಿಯಲ್ಲೂ ಯೋಗ ಕಲಿಕೆಯ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಅಲ್ಲಲ್ಲಿ ಯೋಗ ಕಲಿಕಾ ಕೇಂದ್ರಗಳು ತಲೆ ಎತ್ತಿವೆ. ಖಾಸಗಿ ಶಾಲೆ ಕಾಲೇಜುಗಳಲ್ಲೂ ಯೋಗ ಕಲಿಕೆ ಪಠ್ಯವಾಗಿದೆ.ಯೋಗ ವಿದ್ಯೆಗೆ ಪ್ರಾಚೀನತೆ ಇದ್ದರೂ ಒಂದು ಕಾಲದಲ್ಲಿ ಹೆಚ್ಚು ಪ್ರಚಲಿತವಾಗಿರಲಿಲ್ಲ. ಆದರೆ ಕೆಲ ವರ್ಷಗಳ ಹಿಂದೆ ಈ ಯೋಗ ಶಿಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಬೂಸ್ಟ್ ಪರಿಣಾಮಕಾರಿಯಾಯಿತು. ಇಂದು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷವಾಗಿ ಯೋಗ ಶಿಕ್ಷಣಕ್ಕೆ ಮುನ್ನುಡಿ ಬರೆಯಲಾಗಿದೆ. ಪ್ರಸ್ತುತ ಜೂ. ೨೧ ಅಂತಾರಾಷ್ಟ್ರೀಯ ಯೋಗ ದಿನವನ್ನು ಶಾಲೆ, ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಚರಿಸಲಾಗುತ್ತಿದೆ. ಅಷ್ಟೇ ಅಲ್ಲದೆ ತಾಲೂಕು-ಜಿಲ್ಲೆ, ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲೂ ಯೋಗ ದಿನಾಚರಣೆ ನಡೆಯುತ್ತಿದೆ. ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಗಳೂ ಸೇರಿದಂತೆ ಎಲ್ಲರೂ ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದು ಯೋಗಕ್ಕೆ ಹೆಚ್ಚಿನ ಮಹತ್ವ ದೊರೆಯುವಂತೆ ಮಾಡಿದೆ.ಸರ್ಕಾರಿ ಶಾಲೆಗಳಲ್ಲಿ ಯೋಗ ಕೊರತೆ: ವಾಸ್ತವವಾಗಿ ಹಿಂದಿನಿಂದಲೇ ಪ್ರಾಥಮಿಕ ಶಾಲೆಗಳಲ್ಲೇ ಯೋಗ ದೈಹಿಕ ಶಿಕ್ಷಣದಲ್ಲಿ ಒಂದು ಭಾಗವಾಗಿತ್ತು. ಪಾರ್ಟ್ ಬಿಯಲ್ಲಿ ವಿವಿಧ ಆಸನಗಳನ್ನು, ಪ್ರಾಣಾಯಾಮ, ಸೂರ್ಯ ನಮಸ್ಕಾರ ಮತ್ತಿತರ ವಿಚಾರಗಳನ್ನು ಮಕ್ಕಳಿಗೆ ನೀಡುವುದು ಕಡ್ಡಾಯವಾಗಿತ್ತು. ಸೇವಾ ದಳದಲ್ಲಿಯೂ ಈ ಯೋಗ ಒಂದು ಪ್ರಮುಖ ಪಾಠವಾಗಿತ್ತು. ಆದರೆ ಬಹುತೇಕ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರೇ ಇಲ್ಲ. ಇರುವ ಕಡೆಗಳಲ್ಲೂ ಯೋಗ ಶಿಕ್ಷಣ ಸಮರ್ಪಕತೆ ಪಡೆದುಕೊಂಡಿಲ್ಲ. ಹಾಗಾಗಿ ಸರ್ಕಾರಿ ಶಾಲೆಗಳ ಮಕ್ಕಳು ವರ್ಷಕ್ಕೊಂದು ಬಾರಿ ದೀಪಾವಳಿಯ ಸಂಭ್ರಮದಂತೆ ‘ಯೋಗ ದಿನಾಚರಣೆ’ಯಲ್ಲಿ ಪಾಲ್ಗೊಳ್ಳುತ್ತಾರೆ. ಅದನ್ನು ಹೊರತುಪಡಿಸಿದರೆ ‘ಯೋಗ’ ಶಿಕ್ಷಣವಾಗಿ ಬದಲಾಗಿಲ್ಲ. ಕರ್ನಾಟಕದಿಂದ ಎಷ್ಟೋ ಮಂದಿ ವಿಯೆಟ್ನಾಂನಂತಹ ದೇಶಕ್ಕೆ ಹೋಗಿ ಯೋಗ ಕಲಿಸುತ್ತಿದ್ದಾರೆ. ನಮ್ಮ ಸರ್ಕಾರಿ ಶಾಲೆ ಮಕ್ಕಳು ಇಂದು ಕೂಡ ಯೋಗದ ‘ಯೋಗ’ಕ್ಕಾಗಿ ಕಾಯುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲೂ ಯೋಗ ಶಿಕ್ಷಣ ಕಡ್ಡಾಯವಾಗಬೇಕಾಗಿದೆ. ಪ್ರಾಚೀನ ಪರಂಪರೆಯ ವಿದ್ಯೆ ಕಲೆಯೊಂದು ಪುಟ್ಟ ಮಕ್ಕಳ ಮೂಲಕ ಮತ್ತಷ್ಟು ತೆರೆದುಕೊಳ್ಳಬೇಕಾಗಿದೆ.*ನಿರಂತರ ಯೋಗಾಭ್ಯಾಸದಿಂದ ಹಲವು ರೋಗಗಳನ್ನು ತಡೆಯಬಹುದು. ಮನುಷ್ಯನ ಮನಸ್ಸಿಗೆ ಶಾಂತಿ ಮತ್ತು ಏಕಾಗ್ರತೆಯನ್ನು ಯೋಗ ಕಲಿಸಿಕೊಡುತ್ತದೆ. ೧ ವರ್ಷದಿಂದ ನಾನು ಯೋಗ ಮಾಡುತ್ತಿದ್ದೇನೆ.
-ಪುಣ್ಯಶ್ರೀ ಪಾಲೆತ್ತಾಡಿ, ಯೋಗಪಟು, ವಿದ್ಯಾರ್ಥಿನಿ ಮೂಡುಬಿದಿರ ಆಳ್ವಾಸ್ ನ್ಯಾಚುರೋಪತಿ ಕಾಲೇಜ್(ಫೋಟೋ-ಯೋಗ ಪುಣ್ಯಶ್ರೀ)