ಯೋಗಕ್ಕೆ ಯಾವುದೇ ಧರ್ಮ ಇಲ್ಲ, ಯಾರು ಬೇಕಾದರೂ ಕಲಿಯಬಹುದು: ದಿನೇಶ್ ಗುಂಡೂರಾವ್

| Published : Jun 23 2024, 02:05 AM IST

ಯೋಗಕ್ಕೆ ಯಾವುದೇ ಧರ್ಮ ಇಲ್ಲ, ಯಾರು ಬೇಕಾದರೂ ಕಲಿಯಬಹುದು: ದಿನೇಶ್ ಗುಂಡೂರಾವ್
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ದೇಶದ ದೊಡ್ಡ ಆಸ್ತಿ ಎಂದರೆ ಜನಸಂಖ್ಯೆ. ಇಲ್ಲಿರುವ ಎಲ್ಲರೂ ಆರೋಗ್ಯದಿಂದ ಇದ್ದರೆ ಅದೊಂದು ರೀತಿ ಸಂಪನ್ಮೂಲ. ದೇಶದ ಪ್ರತಿಯೊಬ್ಬರು ಸಶಕ್ತ ಆಸ್ತಿಯಾಗಬೇಕಾದರೇ ಯೋಗಾಭ್ಯಾಸವನ್ನು ರೂಢಿಸಿಕೊಂಡು ಆರೋಗ್ಯವಂತರಾಗಬೇಕು. ಆಗ ನಮ್ಮ ದೇಶವನ್ನು ಹಿಡಿಯಲು ವಿಶ್ವದ ಯಾವ ಪ್ರಭಾವಶಾಲಿಯಿಂದಲೂ ಸಾಧ್ಯವಾಗುವುದಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಯೋಗಕ್ಕೆ ಯಾವುದೇ ಧರ್ಮ ಇಲ್ಲ. ಅದು ಧರ್ಮವನ್ನು ಮೀರಿದ್ದಾಗಿದ್ದು, ಎಲ್ಲರೂ ಯೋಗವನ್ನು ಅಭ್ಯಾಸ ಮಾಡಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.

ನಗರದ ಕಲಾಮಂದಿರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕರ್ನಾಟಕ ಯೋಗ ಶಿಕ್ಷಕರ ಒಕ್ಕೂಟದಿಂದ ಆಯೋಜಿಸಿರುವ ‘ರಾಜ್ಯಮಟ್ಟದ ಪ್ರಥಮ ಯೋಗ ಸಮ್ಮೇಳನ-2024’ ವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು,

ಯೋಗವನ್ನು ಇಂತಿಷ್ಟೆ ವಯಸ್ಸಿನವರೇ ಮಾಡಬೇಕು ಎನ್ನುವ ನಿಯಮವೂ ಇಲ್ಲ. ಕಿರಿಯರಿಂದ ಹಿಡಿದು ವೃದ್ಧರ ತನಕವೂ ಅಭ್ಯಾಸ ಮಾಡಬಹುದು. ಆದರೆ ಆ ವಯೋಮಾನಕ್ಕೆ ತಕ್ಕಂತೆ ಇರುವ ಆಸನಗಳನ್ನು ಮಾಡಬೇಕು. ಇದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ ಹಾಗೂ ಮನಸ್ಸಿನ ಏಕಾಗ್ರತೆ ಶಕ್ತಿ ಹೆಚ್ಚುತ್ತದೆ ಎಂದರು.

ಭಾರತ ದೇಶದ ದೊಡ್ಡ ಆಸ್ತಿ ಎಂದರೆ ಜನಸಂಖ್ಯೆ. ಇಲ್ಲಿರುವ ಎಲ್ಲರೂ ಆರೋಗ್ಯದಿಂದ ಇದ್ದರೆ ಅದೊಂದು ರೀತಿ ಸಂಪನ್ಮೂಲ. ದೇಶದ ಪ್ರತಿಯೊಬ್ಬರು ಸಶಕ್ತ ಆಸ್ತಿಯಾಗಬೇಕಾದರೇ ಯೋಗಾಭ್ಯಾಸವನ್ನು ರೂಢಿಸಿಕೊಂಡು ಆರೋಗ್ಯವಂತರಾಗಬೇಕು. ಆಗ ನಮ್ಮ ದೇಶವನ್ನು ಹಿಡಿಯಲು ವಿಶ್ವದ ಯಾವ ಪ್ರಭಾವಶಾಲಿಯಿಂದಲೂ ಸಾಧ್ಯವಾಗುವುದಿಲ್ಲ ಎಂದರು.

ಆಧ್ಯಾತ್ಮಿಕವಾದ ಅಭ್ಯಾಸಕ್ಕೆ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿರುವುದೇ ಯೋಗ. ಆದ್ದರಿಂದ ನಿರಂತರವಾಗಿ ಯೋಗಾಭ್ಯಾಸದಲ್ಲಿ ತೊಡಗಿದರೇ ಮನುಷ್ಯನ ವ್ಯಕ್ತಿತ್ವ ಪರಿಪೂರ್ಣವಾಗಿ ಹೊರಹೊಮ್ಮುತ್ತದೆ. ಆತನಲ್ಲಿ ತೇಜಸ್ಸು ಹೆಚ್ಚಾಗಿ, ಶರೀರವನ್ನು ನಿಗ್ರಹಿಸುವ ದೃಢತೆ ಬೆಳೆಯುತ್ತದೆ. ಯೋಗ, ಧ್ಯಾನ, ಪ್ರಾಣಾಯಾಮದಿಂದ ಒಳ್ಳೆಯ ಪರಿಣಾಮಗಳು ತನ್ನಿಂದ ತಾನೇ ಉಂಟಾಗುತ್ತವೆ. ಆಧ್ಯಾತ್ಮಿಕ ಬೆಳವಣಿಗೆಯಾಗುತ್ತದೆ. ಆದ್ದರಿಂದ ಯೋಗಾಭ್ಯಾಸದ ಅನುಕೂಲವನ್ನು ಕೇವಲ ತಿಳಿದುಕೊಂಡರಷ್ಟೇ ಸಾಲದು. ಅದನ್ನು ರೂಢಿಸಿಕೊಳ್ಳುವ ತೀರ್ಮಾನ ಮಾಡಬೇಕು. ಇಚ್ಛಾಶಕ್ತಿಯನ್ನು ಬೆಳೆಸಿಕೊಂಡು ಶಿಸ್ತಿಿನಿಂದ ಯೋಗಾಭ್ಯಾಾಸ ಮಾಡಿದರೇ ಉತ್ತಮ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದರು.

ಯೋಗಕ್ಕೆ ಒಂದು ಪರಂಪರೆಯೇ ಇದೆ. ಸ್ವಾಮಿ ವಿವೇಕಾನಂದರು ಷಿಕಾಗೋ ನಗರದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುವ ಸಂದರ್ಭದಲ್ಲಿ ನಮ್ಮ ಯೋಗದ ಬಗ್ಗೆ ಪರಿಚಯ ಮಾಡಿಸಿದ್ದಾರೆ. ಯೋಗದ ಮುಖಾಂತರ ನಮ್ಮ ದೇಶದ ಭವ್ಯ ಪರಂಪರೆ, ಸಂಸ್ಕೃತಿ, ಜ್ಞಾನವನ್ನು ವಿಶ್ವಕ್ಕೆ ತೋರ್ಪಡಿಸಲು ಸಾಧ್ಯ ಎನ್ನುವುದನ್ನು ಆಗಲೇ ತಿಳಿಸಿಕೊಟ್ಟಿದ್ದಾರೆ ಎಂದರು.

ಪಂತಜಲಿ ಯೋಗಾಶ್ರಮ ಟ್ರಸ್ಟ್ ಸಂಸ್ಥಾಪಕ ಪ್ರಕಾಶ ಗುರೂಜಿ ಮಹರ್ಷಿ ಪತಂಜಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಯೋಗ ಛಾಯಾಚಿತ್ರ ಪ್ರದರ್ಶನವನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿದರು.

ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ, ಬೇಬಿ ಮಠದ ಶ್ರೀ ತ್ರಿನೇತ್ರ ಮಹಾಂತ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ.ಕೆ.ಎಲ್.ಶಂಕರನಾರಾಯಣ ಜೋಯಿಷ್ ಅಧ್ಯಕ್ಷತೆ ವಹಿಸಿದ್ದರು. ಎನ್. ಅನಂತ ಅವರು ರಚಿಸಿರುವ ಮೈಸೂರು ಯೋಗ ಪರಂಪರೆ ಕೃತಿಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಬಿಡುಗಡೆ ಮಾಡಿದರು.

ಶಾಸಕ ಕೆ.ಹರೀಶ್‌ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ.ಎಚ್.ಪ್ರಸಾದ್, ಜಿಲ್ಲಾ ಆರೋಗ್ಯಾಾಧಿಕಾರಿ ಡಾ. ಪಿ.ಸಿ.ಕುಮಾರಸ್ವಾಮಿ, ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀ ನಾರಾಯಣ ಶೆಣೈ, ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ರಾಮರಾವ್, ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಉದ್ಯಮಿ ಬಿ.ಆರ್. ಪೈ, ಅರವಿಂದ ಶರ್ಮ, ಟಿ. ಜಲೇಂದ್ರಕುಮಾರ್, ಡಾ.ಪಿ.ಎನ್. ಗಣೇಶಕುಮಾರ್, ಎಂ.ವಿ. ನಾಗೇಂದ್ರ ಬಾಬು ಮತ್ತಿತರರು ಇದ್ದರು. ಯೋಗ ಸಮ್ಮೇಳನ ಸಮಿತಿ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಾ.ಬಿ.ಪಿ. ಮೂರ್ತಿ ವಂದಿಸಿದರು. ಗಣಪತಿ ರಾ. ಭಟ್ ನಿರೂಪಿಸಿದರು.

ಶಾಲೆಗಳಲ್ಲಿ ಮತ್ತೆ ಯೋಗ ಕಲಿಸಲು ಶಿಕ್ಷಕರ ನೇಮಕ: ದಿನೇಶ್ ಗುಂಡೂರಾವ್

ಕನ್ನಡಪ್ರಭ ವಾರ್ತೆ ಮೈಸೂರು

ಶಾಲಾ ಮಟ್ಟದಲ್ಲೇ ಮಕ್ಕಳಿಗೆ ಯೋಗವನ್ನು ರೂಢಿಗೊಳಿಸಬೇಕು ಎನ್ನುವ ಉದ್ದೇಶದಿಂದ ನಮ್ಮ ಸರ್ಕಾರ ಮತ್ತೆ ಶಾಲೆಗಳಲ್ಲಿ ಯೋಗವನ್ನು ಕಡ್ಡಾಯ ಮಾಡಿದೆ. ಈ ಹಿನ್ನೆಲೆಯಲ್ಲಿ ಯೋಗ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಬಹಳ ವರ್ಷಗಳಿಂದಲೂ ಶಾಲೆಗಳಲ್ಲಿ ಯೋಗ ಹಾಗೂ ದೈಹಿಕ ಶಿಕ್ಷಣವನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತಿತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರ ಈ ಪದ್ಧತಿಯನ್ನು ನಿಲ್ಲಿಸಿತ್ತು. ಈಗ ನಮ್ಮ ಸರ್ಕಾರ ಅದನ್ನು ಮತ್ತೆ ಪ್ರಾಾರಂಭ ಮಾಡುತ್ತದೆ ಎಂದರು.

ಸಮಾಜದಲ್ಲಿ ಜನರು ಆರೋಗ್ಯವಾಗಿರಬೇಕು ಎನ್ನುವ ದೃಷ್ಟಿಯಿಂದ ಆರೋಗ್ಯ ಇಲಾಖೆಯ ಕ್ಷೇಮ ಕೇಂದ್ರಗಳಲ್ಲಿ ಯೋಗಾಭ್ಯಾಾಸ ಮಾಡಲು ಪ್ರತ್ಯೇಕ ಸ್ಥಳವನ್ನು ನಿಗದಿಗೊಳಿಸಲಾಗಿದೆ. ಇಲ್ಲಿ ಯೋಗ ಶಿಕ್ಷಕರು ಬಂದು ಯೋಗವನ್ನು ಹೇಳಿಕೊಡುತ್ತಾಾರೆ. ಕ್ಷೇಮ ಕೇಂದ್ರದ ಸುತ್ತಮುತ್ತಲಿನ ಜನರು ಬಂದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.

ವಿಶ್ವ ಯೋಗ ದಿನದ ಅಂಗವಾಗಿ ರಾಜ್ಯದ ವಿವಿಧ ವಸತಿ ಶಾಲೆಗಳು, ಆಶ್ರಮ ಶಾಲೆಗಳು, ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಒಂದು ವಾರಗಳ ಕಾಲ ಯೋಗೋತ್ಸವ ಆಚರಣೆ ಮಾಡಲಾಯಿತು. ಇದರಿಂದ ಸುಮಾರು 6 ಲಕ್ಷಕ್ಕೂ ಹೆಚ್ಚು ಮಂದಿ ಯೋಗವನ್ನು ಆಭ್ಯಾಸ ಮಾಡಿದ್ದಾರೆ ಎಂದು ತಿಳಿಸಿದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ

ಮೈಸೂರಿನ ಕಲಾಮಂದಿರಲ್ಲಿ ಶನಿವಾರ ಆರಂಭವಾದ ರಾಜ್ಯ ಮಟ್ಟದ ಯೋಗ ಸಮ್ಮೇಳನದಲ್ಲಿ ಸಮ್ಮೇಳಾಧ್ಯಕ್ಷ ಡಾ.ಕೆ.ಎಸ್. ಶಂಕರನಾರಾಯಣ ಜೋಯಿಸ್ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನ ಕಲಾಮಂದಿರದಲ್ಲಿ ಶನಿವಾರ ಆರಂಭವಾದ ರಾಜ್ಯ ಮಟ್ಟದ ಪ್ರಥಮ ಯೋಗ ಸಮ್ಮೇಳನದ ಸಮ್ಮೇಳಾಧ್ಯಕ್ಷ ಡಾ.ಕೆ.ಎಲ್. ಶಂಕರನಾರಾಯಣ ಜೋಯಿಸ್ ಅವರನ್ನು ಮುಖ್ಯದ್ವಾರದಿಂದ ವೇದಿಕೆವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.

ಅವರಿಗೆ ಹಾಗೂ ಗಣ್ಯರಿಗೆ ಮಂಗಳವಾಧ್ಯ ಸಮೇತ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಭಾರತೀಯ ಯೋಗಧಾಮದ ವಟುಗಳು ವೇದಘೋಷ ಮೊಳಗಿಸಿದರು.