ಸಾರಾಂಶ
ಸಿದ್ದಾಪುರ: ವಿವಿಧ ಆಸನಗಳಿಗಷ್ಟೇ ಯೋಗ ಸೀಮಿತವಲ್ಲ. ಜೀವನದಲ್ಲಿ ಕೆಲಸದ ಒತ್ತಡದ ಭಾರ ಕಳೆಯಲು ಯೋಗ ಅಗತ್ಯ. ಮನುಷ್ಯರಿಗೆ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಸ್ಥಿರತೆ ಕಾಯ್ದುಕೊಳ್ಳುವ ಅಗತ್ಯತೆಯೂ ಇದ್ದು, ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಯೋಗ ಸಹಕಾರಿ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಬಸವರಾಜ ಪಿ. ತಿಳಿಸಿದರು.
ಗುರುವಾರ ಸ್ಥಳೀಯ ಶಿಕ್ಷಣ ಪ್ರಸಾರಕ ಸಮಿತಿಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಯೋಗದ ಮಹತ್ವ ಕುರಿತು ದೈಹಿಕ ಶಿಕ್ಷಣ ಶಿಕ್ಷಕರಿಗೆ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ನಾವು ಮಾಡುವ ಕೆಲಸವನ್ನು ಒತ್ತಡ ರಹಿತವಾಗಿ, ಪ್ರೀತಿಯಿಂದ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಮಾತನಾಡಿ, ಮನುಷ್ಯನ ಮಿದುಳಿನ ಒಳಗೆ ಎಲ್ಲ ಯುದ್ಧಗಳೂ ಹುಟ್ಟಿಕೊಳ್ಳುತ್ತವೆ ಎಂದು ತತ್ವಜ್ಞಾನಿಗಳು ಹೇಳಿದ್ದಾರೆ. ನಾವು ತೆಗೆದುಕೊಳ್ಳುವ ಆಹಾರ, ಬದುಕುವ ಪದ್ಧತಿಯೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆ ಯೋಗಾಭ್ಯಾಸ ಮಾಡುವ ಮೂಲಕ ಮಾನಸಿಕ ದೈಹಿಕ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ ಎಂದರು. ಪ್ರಾಚಾರ್ಯೆ ವಾಣಿ ಜೀರಗಲ್ ಮಾತನಾಡಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ವಿ. ನಾಯ್ಕ, ಬಿಆರ್‌ಸಿ ಚೈತನ್ಯಕುಮಾರ, ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪ್ರವೀಣ ಉಪಸ್ಥಿತರಿದ್ದರು.ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಡಾ. ಶಶಿಭೂಷಣ ಹೆಗಡೆ ಮಾತನಾಡಿ, ಯೋಗ ಶಬ್ದಕ್ಕೆ ಶಿಕ್ಷಕರಲ್ಲಿಯೂ ತಪ್ಪು ಕಲ್ಪನೆಯಿದೆ. ಯೋಗ ಎಂದರೆ ಆಸನ ಎನ್ನುವಂತಾಗಿದೆ. ಭಾರತವು ಜಗತ್ತಿಗೆ ಕೊಟ್ಟ ಅತಿ ಮಹತ್ವದ ಕಾಣಿಕೆ ಯೋಗವಾಗಿದ್ದು, ದೇಹ ಮತ್ತು ಮನಸ್ಸಿನ ನಡುವೆ ಸಮನ್ವಯತೆ ಸಾಧಿಸುವುದು ಯೋಗದ ಪ್ರಮುಖ ಲಕ್ಷಣ. ಭಾರತೀಯ ಆರೋಗ್ಯ ಪದ್ಧತಿ ವಿಶ್ವವೇ ಒಪ್ಪಿಕೊಳ್ಳುತ್ತಿದ್ದು, ಯೋಗ ಮತ್ತು ಭಾರತೀಯ ವೈದ್ಯಕೀಯ ಪದ್ಧತಿಯನ್ನು ಶಾಲೆಗಳಲ್ಲಿ ವಿಸ್ತರಿಸಿ ಭವಿಷ್ಯದ ಕುಡಿಗಳನ್ನು ಸದೃಢರನ್ನಾಗಿ ಮಾಡಬೇಕಿದೆ ಎಂದರು. ನಾಗಶ್ರೀ ಸಂಗಡಿಗರ ಪ್ರಾರ್ಥಿಸಿದರು. ಪ್ರೊ. ರಾಘವೇಂದ್ರ ಎಲ್. ಸ್ವಾಗತಿಸಿದರು. ಡಾ. ಗುಣಾ ಎನ್. ರಾಜ್ ನಿರ್ವಹಿಸಿದರು. ಡಾ. ಶಿವಾನಿ ಯಾದವ ಜಿ.ಎನ್. ವಂದಿಸಿದರು. ಸವಿತಾ ಭಟ್ಟಗೆ ಜ್ಞಾನಸಿಂಧು ಪ್ರಶಸ್ತಿಶಿರಸಿ: ತಾಲೂಕಿನ ಬಿಸಲಕೊಪ್ಪ ಸೂರ್ಯನಾರಾಯಣ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಸವಿತಾ ಭಟ್ಟ ಅವರು ಬೆಂಗಳೂರಿನ ಶಿಕ್ಷಣ ಜ್ಞಾನ ಪತ್ರಿಕೆ ಕೊಡಮಾಡುವ ಜ್ಞಾನಸಿಂಧು ಪ್ರಶಸ್ತಿಗೆ ಭಾಜನರಾಗಿದ್ದಾರೆ.ಜ. ೧೨ರಂದು ಬಾಗಲಕೋಟೆಯ ಬೀಳಗಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಳೆದ ಇಪ್ಪತ್ತಾರು ವರ್ಷಗಳಿಂದ ಸವಿತಾ ಭಟ್ಟ ಅವರು ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸವಿತಾ ಭಟ್ಟ ಅವರ ಮಾರ್ಗದರ್ಶನದಲ್ಲಿ ಸೂರ್ಯನಾರಾಯಣ ಪ್ರೌಢಶಾಲೆಯ ಅನೇಕ ಮಕ್ಕಳು ರಾಜ್ಯ ಮಟ್ಟದ ಪ್ರಬಂಧ, ಭಾಷಣ ಮುಂತಾದ ಚಟುವಟಿಕೆಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೆ ರಾಮಾಯಣ, ಮಹಾಭಾರತ ಪರೀಕ್ಷೆಗಳಲ್ಲಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಪ್ರತಿವರ್ಷ ಅತಿ ಹೆಚ್ಚು ಅಂಕ ಗಳಿಸುರುವುದನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.