ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ತಾಲೂಕಿನ ಕೆಂಚಮ್ಮನ ಹೊಸಕೋಟೆ ಲಯನ್ಸ್ ಕ್ಲಬ್ ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಇವರ ಸಹಯೋಗದೊಂದಿಗೆ ಕೆ. ಹೊಸಕೋಟೆಯ ಹೋಬಳಿಯ ಹರಿಹಳ್ಳಿ ವಿ ಪಿ ಹೆಗ್ಗಡೆ ಸರ್ಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ 15 ದಿನಗಳ ಕಾಲ ಆರೋಗ್ಯಕ್ಕಾಗಿ ಯೋಗ, ಪ್ರಾಣಾಯಮ, ಧ್ಯಾನ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರವನ್ನು ಜೀವರಕ್ಷ ರಕ್ತನಿಧಿ ಕೇಂದ್ರದ ವತಿಯಿಂದ ಶ್ರೀ ಕೆಂಚಾಂಬಿಕೆ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಹಾಸನ- ತುಮಕೂರು ಸಂಯೋಜಕರಾದ ಶೋಭಾ ಯೋಗರಾಜ್, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ವತಿಯಿಂದ ರಾಜ್ಯ ಮತ್ತು ದೇಶಾದ್ಯಂತ ಜನರ ಆರೋಗ್ಯದ ಹಿತದೃಷ್ಟಿಯಿಂದ ಉಚಿತವಾಗಿ ಯೋಗಾಸನ ಮಾಡಿಸುತ್ತಿದ್ದೇವೆ. ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನ ಮಾಡಲು ಆಸಕ್ತಿ, ಶ್ರದ್ಧೆ, ಬಹಳ ಮುಖ್ಯವಾದದ್ದು. ಯೋಗಾಸನ ಮಾಡುವುದರಿಂದ ನಮ್ಮ ಮನಸ್ಸಿಗೆ ವಿಶ್ರಾಂತಿ ದೊರೆಯುತ್ತದೆ, ಯೋಗ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಹಲವಾರು ರೋಗಗಳಿಗೆ ಔಷಧಿಯಾಗಿ ನಮಗೆ ಶಕ್ತಿ ತುಂಬುತ್ತದೆ, ಯೋಗ ವ್ಯಕ್ತಿಯ ಮಾನಸಿಕ ಸ್ಥಿತಿ ಹೆಚ್ಚಾಗಿಸಿ ಚೈತನ್ಯಶೀಲತೆಯಿಂದ ಇರುವಂತೆ ಮಾಡುತ್ತದೆ. ಪ್ರತಿಯೊಬ್ಬರು ಆರೋಗ್ಯದ ಹಿತದೃಷ್ಟಿಯಿಂದ ಯೋಗಾಸನ, ಪ್ರಾಣಾಯಾಮ, ಧ್ಯಾನ, ಮಾಡುವುದು ಬಹಳ ಮುಖ್ಯವಾದದ್ದು ಎಂದರು.
ಲಯನ್ಸ್ ಇಂಟರ್‌ನ್ಯಾಷನಲ್ ಕೆ. ಹೊಸಕೋಟೆಯ ಅಧ್ಯಕ್ಷ ಕೆ ಎನ್ ಕುಮಾರ್ ಮಾತನಾಡಿ, ಜನರ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿ ವರ್ಷವೂ ಆರೋಗ್ಯಕ್ಕಾಗಿ ಯೋಗ ಕಾರ್ಯಕ್ರಮದಡಿ 15 ದಿನಗಳ ಯೋಗ ಶಿಬಿರವನ್ನು ಆಯೋಜಿಸಿದ್ದು, ಅದಾದ ನಂತರ ಕೊನೆಯ ದಿನ ರಕ್ತದಾನ ಶಿಬಿರವನ್ನು ಆಯೋಜನೆ ಮಾಡುತ್ತೇವೆ. ಈ 15 ದಿನಗಳಲ್ಲಿ ಸುಮಾರು 35ರಿಂದ 40 ಜನ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲರೂ ಯೋಗಾಸನ ಪ್ರಾಣಾಯಾಮವನ್ನು ವೃದ್ಧಿಸಿಕೊಂಡು ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ, ದಾನ ದಾನಕ್ಕಿಂತ ರಕ್ತದಾನ ಶ್ರೇಷ್ಠವಾದದ್ದು ಪ್ರತಿಯೊಬ್ಬರು ರಕ್ತದಾನ ಮಾಡುವುದರಿಂದ ಇನ್ನೊಂದು ಜೀವ ಉಳಿಸಬಹುದು. ಇದುವರೆಗೆ ಸುಮಾರು 32 ಯೂನಿಟ್ ರಕ್ತಸಂಗ್ರಹವಾಗಿದ್ದು ರಕ್ತದಾನ ಮಾಡಿದಂತ ಎಲ್ಲರಿಗೂ ಅಭಿನಂದನೆ ತಿಳಿಸಿದರು.ಲಯನ್ಸ್ ವಲಯ ಅಧ್ಯಕ್ಷ ರಘು ಪಾಳ್ಯ ಮಾತನಾಡಿ, ಕೆ .ಹೊಸಕೋಟೆ ಲಯನ್ಸ್ ಇಂಟರ್‌ನ್ಯಾಷನಲ್ ವತಿಯಿಂದ 15 ದಿನಗಳಿಂದ ಯೋಗ ಶಿಬಿರ ನಡೆದಿದ್ದು, ಕೊನೆಯ ದಿನವಾದ ಎಂದು ಶ್ರೀ ಕೆಂಚಾಂಬಿಕೆ ದೇವಸ್ಥಾನದ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದು, ರಕ್ತದಾನ ಶಿಬಿರದಿಂದ ರಕ್ತ ಸಂಗ್ರಹಿಸಿ ಕೊಡುವುದರಿಂದ ತುರ್ತುಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಇದ್ದವರಿಗೆ ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಸಬಹುದು. ಇಂತಹ ನೂರಾರು ಸೇವೆಗಳನ್ನು ಲಯನ್ಸ್ ಸೇವಾ ಸಂಸ್ಥೆ ಮಾಡುತ್ತಾ ಬಂದಿದ್ದು, ಲಯನ್ಸ್ ವತಿಯಿಂದ ವರ್ಷಪೂರ್ತಿ ಕಣ್ಣು ಪರೀಕ್ಷೆ ,ಆರೋಗ್ಯ ತಪಾಸಣೆ, ಮಧುಮೇಹ ತಪಾಸಣೆ, ರಕ್ತದಾನ ಶಿಬಿರ, ಇಂತಹ ಹಲವು ಸೇವೆಗಳನ್ನು ಲಯನ್ಸ್ ಮಾಡುತ್ತಾ ಬಂದಿದೆ ಎಂದರು.
ರಕ್ತದಾನ ಮಾಡಿದ ಎಲ್ಲರಿಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಬಿಜೆಪಿ ಯುವ ಮುಖಂಡ ಸಮಾಜ ಸೇವಕರಾದ ಕಟ್ಟೆಕದ್ದೆ ನಾಗರಾಜ್, ಕೆಂಚಾಂಬ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ರಘು, ಬಿಜೆಪಿ ಮುಖಂಡರಾದ ಪ್ರಸಾದ್ , ಲಯನ್ಸ್ ನಿಕಟ ಪೂರ್ವ ಅಧ್ಯಕ್ಷರುಗಾಳಾದ ಹರೀಶ್ ಹೊಂಕರವಳ್ಳಿ, ಸಂತೋಷ್ ಕೊಟ್ಟೂರಪ್ಪ, ಕೆ ಬಿ ಕುಮಾರ್, ಉದಯ್ ಕುಮಾರ್ ಕಿತ್ತಗಳಲೆ, ಜಗದೀಶ್ ಅವರು ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ವಿತರಿಸಿದರು.ಕಾರ್ಯಕ್ರಮದಲ್ಲಿ ಆಯೋಜಕರಾದ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಕೆ ಎನ್ ಕುಮಾರ್, ಕಾರ್ಯದರ್ಶಿ ದಿನೇಶ್, ಖಜಾಂಚಿ ಕುಮಾರ್ ಬೆಂಬಳೂರು, ಲಯನ್ಸ್ ಕ್ಲಬ್ ಎಲ್ಲಾ ಸದಸ್ಯರು, ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಆಯೋಜಕರಾದ ಶೋಭಾ ಯೋಗರಾಜ್, ಶಿಕ್ಷಕರುಗಳಾದ ನೀಲಕಂಠಪ್ಪ ಹಾಗೂ ಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.