ಸಾರಾಂಶ
ಹುಬ್ಬಳ್ಳಿ:
ವಿಶ್ವ ಯೋಗ ದಿನದಂಗವಾಗಿ ವಿವಿಧ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳಲ್ಲಿ ಯೋಗ ದಿನ ಆಚರಿಸಲಾಯಿತು.ದೇಶಪಾಂಡೆ ನಗರದ ಜಿಮ್‌ಖಾನ್ ಮೈದಾನದಲ್ಲಿ ಕ್ಷಮತಾ ಸಂಸ್ಥೆ, ಜಿಮ್‌ಖಾನ್ ಅಸೋಸಿಯೇಶನ್ ಹಾಗೂ ಧನ್ಯೋಸ್ಮಿ ಯೋಗ ಕೇಂದ್ರ ಸಹಯೋಗದಲ್ಲಿ ವಿಶ್ವ ಯೋಗ ದಿನ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕ್ಷಮತಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ, ವಿಶ್ವ ಯೋಗ ದಿನಾಚರಣೆಯ ದಶಮಾನೋತ್ಸವದ ಸಂದರ್ಭದಲ್ಲಿ ದೇಶ ಬಲಿಷ್ಠವಾಗಲು ದೇಹ ಬಲಿಷ್ಠವಾಗಬೇಕೆಂಬ ನಿಟ್ಟಿನಲ್ಲಿ ಜಾಗತಿಕವಾಗಿ ಭಾರತ ಪರಿಚಯಿಸಿದ ಯೋಗವನ್ನು ಇಡೀ ಜಗತ್ತು ಅಪ್ಪಿಕೊಂಡಿದೆ. 197 ದೇಶಗಳು ಯೋಗ ದಿನದತ್ತ ತಿರುಗಿವೆ ಎಂದರು. .ಧನ್ಯೋಸ್ಮಿ ಯೋಗ ಕೇಂದ್ರದ ಯೋಗಗುರು ವಿನಾಯಕ ತಲಗೇರಿ ಮಾತನಾಡಿ, ಯೋಗದಿಂದಲೇ ಈಗಾಗಲೇ ಭಾರತ ಜಗತ್ತಿಗೆ ಗುರುವಾಗಿದೆ. ಯೋಗ ದೈಹಿಕ, ಮಾನಸಿಕವಾಗಿ ಆರೋಗ್ಯ ತಂದುಕೊಡುತ್ತದೆ ಎಂದು ಹೇಳಿದರು.
ಪಾಲಿಕೆ ಸದಸ್ಯೆ ಮೀನಾಕ್ಷಿ ವಂಟಮೂರಿ, ವಿಶ್ವ ಹಿಂದೂ ಪರಿಷತ್‌ನ ಪ್ರದೀಪ ಶೆಟ್ಟಿ, ಯೋಗ ಶಿಕ್ಷಕಿ ಸರ್ವಮಂಗಳಾ ಆಚಾರ್ಯ ಸೇರಿದಂತೆ ಹಲವರಿದ್ದರು.ಇದಕ್ಕೂ ಮುನ್ನ ಸಾಮೂಹಿಕ ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಆಸನ, ಪ್ರಾಣಾಯಾಮ, ಧ್ಯಾನ ಮಾಡಲಾಯಿತು.
ಮಹಿಳಾ ಕಾಲೇಜ್:ಇಲ್ಲಿನ ಎಸ್‌ಜೆಎಂವಿಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ದೈಹಿಕ ಶಿಕ್ಷಣ ವಿಭಾಗ ಮತ್ತು ರೋಟರಿ ಕ್ಲಬ್ ಆಶ್ರಯದಲ್ಲಿ ವಿಶ್ವ ಯೋಗ ದಿನ ಮತ್ತು ವಿಶ್ವ ಸಂಗೀತ ದಿನ ಆಚರಿಸಲಾಯಿತು. ಯೋಗ ಶಿಕ್ಷಕ ಈರಣ್ಣ ಕಾಡಪ್ಪನವರ ಮಾತನಾಡಿ, ಪ್ರತಿಯೊಬ್ಬರೂ ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢ ವ್ಯಕ್ತಿತ್ವ ಗಳಿಸಬಹುದು ಎಂದರು. ಹಲವು ಆಸನಗಳನ್ನು ವಿದ್ಯಾರ್ಥಿಗಳಿಂದ ಮಾಡಿಸಿದರು.
ಪ್ರಾಚಾರ್ಯ ಡಾ. ಸಿಸಿಲಿಯ ಡಿ ಕ್ರೂಜ್ ಮಾತನಾಡಿ, ಯೋಗವನ್ನು ಪ್ರತಿಯೊಬ್ಬರು ಕಲಿಯಬೇಕು ಎಂದರು. ಮಹೇಶ್ವರಿ ಉದಗಟ್ಟಿ, ಡಾ. ಶಿವಲೀಲಾ ವೈಜಿನಾಥ, ಡಾ. ತಾಯಣ್ಣ ಎಚ್, ಶಿವಕುಮಾರ ಬನ್ನಿಹಟ್ಟಿ, ಡಾ ಗುರುರಾಜ್ ನವಲಗುಂದ, ಗಿರೀಶ ಕುಲಕರ್ಣಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.ನೂಲ್ವಿಯಲ್ಲಿ:ತಾಲೂಕಿನ ನೂಲ್ವಿ ಗ್ರಾಪಂ ವ್ಯಾಪ್ತಿಯ ದಡಲಕಟ್ಟೆ ಅಮೃತ ಸರೋವರ ಕೆರೆಯ ದಂಡೆಯ ಮೇಲೆ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
ನೂಲ್ವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಎಂ.ಎಫ್. ಗಾಣಿಗೇರ, ಪಿಡಿಒ ವಿ.ಕೆ. ವಸ್ತ್ರದ, ಶಿಕ್ಷಕಿ ಜಿ.ಬಿ. ನೀಲಗುಂದ, ತಾಪಂ ಅಧಿಕಾರಿ ರಮೇಶ ಲಮಾಣಿ, ಗ್ರಾಪಂ ಕಾರ್ಯದರ್ಶಿ ಹನುಮಂತ, ಗಣಕಯಂತ್ರ ನಿರ್ವಾಹಕರು, ಪಂಚಾಯಿತಿ ಸಿಬ್ಬಂದಿ, ಶಾಲಾ ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.