ದೇಹ, ಮನಸ್ಸುಗಳ ಸಂಯೋಜನೆಯೇ ಯೋಗ

| Published : Jun 22 2024, 12:47 AM IST

ಸಾರಾಂಶ

ಯೋಗವು ಮನುಷ್ಯದ ದೇಹ ಮತ್ತು ಮನಸ್ಸುಗಳನ್ನು ಸಂಯೋಜನೆ ಮಾಡುವುದರ ಮೂಲಕ ಸಂಯಮ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದು ಬೆಥಸ್ಥ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ರೀನಾ ಮ್ಯಾಥೀವ್ ಅಭಿಪ್ರಾಯಪಟ್ಟರು. ಆಲೂರು ತಾಲೂಕು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಹಮ್ಮಿಕೊಂಡ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಾಂಶುಪಾಲೆ ರೀನಾ ಮ್ಯಾಥೀವ್ ಅಭಿಮತ । ಆಲೂರಿನ ಭಾರತ ಸ್ಕೌಟ್ಸ್, ಗೈಡ್ಸ್ ಸ್ಥಳೀಯ ಸಂಸ್ಥೆ ಆಯೋಜನೆ । ಏಕಾಗ್ರತೆ ಹೆಚ್ಚಳ

ಕನ್ನಡಪ್ರಭ ವಾರ್ತೆ ಆಲೂರು

ಯೋಗವು ಮನುಷ್ಯದ ದೇಹ ಮತ್ತು ಮನಸ್ಸುಗಳನ್ನು ಸಂಯೋಜನೆ ಮಾಡುವುದರ ಮೂಲಕ ಸಂಯಮ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದು ಬೆಥಸ್ಥ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ರೀನಾ ಮ್ಯಾಥೀವ್ ಅಭಿಪ್ರಾಯಪಟ್ಟರು.

ಆಲೂರು ತಾಲೂಕು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯು ಭೈರಾಪುರ ಬೆಥಸ್ಥ ವಿದ್ಯಾಸಂಸ್ಥೆಯ ಸಹಕಾರದಲ್ಲಿ ಶಾಲಾವಣದಲ್ಲಿ ಹಮ್ಮಿಕೊಂಡಿದ್ದ ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ‘ಭಾರತದಲ್ಲಿ ಹುಟ್ಟಿದ ಯೋಗವು ಇಂದು ವಿಶ್ವದಾದ್ಯಂತ ಪಸರಿಸುತ್ತಿದೆ. ಇಂದು ಪ್ರಪಂಚದಾದ್ಯಂತ ಹತ್ತನೇ ಅಂತಾರಾಷ್ಟ್ರೀಯಯ ದಿನ ಆಚರಿಸುತ್ತಿದ್ದೇವೆ. ಯೋಗವು ಕೇವಲ ಜೂನ್ ೨೧ ಕ್ಕೆ ಮೀಸಲಾಗಬಾರದು. ಯೋಗ ಬದುಕಿನ ಅವಿಭಾಜ್ಯ ಅಂಗವಾಗಬೇಕಾದರೆ ನಿತ್ಯದ ದಿನಚರಿಯಾಗಬೇಕು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯು ಈ ವರ್ಷದ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿರುವುದು ಅತ್ಯಂತ ಸಂತಸ ತಂದಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಸ್ಕೌಟ್ಸ್‌ ಅಂಡ್‌ ಗೈಡ್ಸ್‌ನ ಜಿಲ್ಲಾ ಸಹಾಯಕ ಆಯುಕ್ತ ಎಂ.ಬಾಲಕೃಷ್ಣ ಮಾತನಾಡಿ, ‘ಯೋಗ ಅಂದರೆ ಒಂದುಗೂಡುವುದು ಅಥವಾ ಅದೃಷ್ಟ. ನಮ್ಮ ನಿತ್ಯದ ಬದುಕು ಆರೋಗ್ಯಪೂರ್ಣವಾಗಿ ಸರಾಗವಾಗಿ ಸಾಗಬೇಕಾದರೆ ಶರೀರ ಮತ್ತು ಮನಸ್ಸು ಎರಡೂ ಪಕ್ವವಾಗಿರಬೇಕು. ಇವೆರಡೂ ಪಕ್ವವಾಗಬೇಕಾದರೆ ಯೋಗದ ಅವಶ್ಯಕತೆಯಿದೆ’ ಎಂದು ಹೇಳಿದರು.

ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿ, ‘ಯೋಗವು ಮನಸ್ಸನ್ನು ನಿಗ್ರಹ ಮಾಡುವುದರ ಜತೆಗೆ ದೈಹಿಕವಾಗಿ ಸದೃಢಗೊಳಿಸುತ್ತದೆ. ಭಾರತದ ಸನಾತನ ಕಲೆಯಾದ ಯೋಗ ಇಂದು ವಿಶ್ವಮಾನ್ಯತೆ ಪಡೆದಿರುವುದು ಸಂತಸದ ಸಂಗತಿ. ಮನುಷ್ಯನಿಗೆ ದೇಹ ಎಷ್ಟೇ ಬಲಿಷ್ಠವಾಗಿದ್ದರೂ ಮಾನಸಿಕವಾಗಿ ಸ್ಥಿರತೆಯಿಲ್ಲದಿದ್ದರೆ ಉತ್ತಮ ನಾಗರಿಕನಾಗಲು ಸಾಧ್ಯವಿಲ್ಲ. ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಬಹಳ ಮುಖ್ಯ. ಯಾರು ಯೋಗ, ಧ್ಯಾನ, ಮಿತ ಆಹಾರಿಯಾಗಿರುತ್ತಾರೋ ಅವರು ಮಾತ್ರ ಉತ್ತಮ ಆರೋಗ್ಯವಂತರಾಗುವುದರ ಜತೆಗೆ ದೀರ್ಘಾಯುಷಿಗಳಾಗಲು ಸಾಧ್ಯ. ಆದ್ದರಿಂದಲೇ ನಮ್ಮ ಭಾರತೀಯ ಪುರಾತನ ಕಾಲದ ಋಷಿ ಮುನಿಗಳು ನೂರಾರು ವರ್ಷಗಳ ಬದುಕಿ ಬಾಳುತ್ತಿದ್ದರು’ ಎಂದು ತಿಳಿಸಿದರು.

ದೈಹಿಕ ಶಿಕ್ಷಕ ಸುನೀಲ್, ಗೈಡ್ಸ್ ಕ್ಯಾಪ್ಟನ್ ಶಿಲ್ಪಕೃತಿ ಹಾಗೂ ಪ್ರಿಯಾಂಕ, ಸಹ ಶಿಕ್ಷಕ ಚಂದ್ರು ಹಾಸನ ಸೇರಿದಂತೆ ನೂರಾರು ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು ಹಾಜರಿದ್ದರು.

ಕಾಯಿಲೆಗಳಿಂದ ಮುಕ್ತಿಗೆ ಯೋಗಹೊಳೆನರಸೀಪುರ: ಯೋಗ ಮತ್ತು ಪ್ರಾಣಾಯಾಮದ ನಿರಂತರ ಅಭ್ಯಾಸದಿಂದ ದೈಹಿಕ ಬಾಧೆ, ರಕ್ತದೊತ್ತಡ ಜತೆಗೆ ವಯೋಸಹಜ ಕಾಯಿಲೆಗಳಿಂದ ಮುಕ್ತರಾಗಿ ವೈದ್ಯರಿಂದ ದೂರುವಿರಬಹುದು ಎಂದು ಪತಂಜಲಿ ಯೋಗಕೂಟದ ಯೋಗಗುರು ಗಣೇಶ್‌ಬಾಬು ಸಲಹೆ ನೀಡಿದರು. ಪಟ್ಟಣದ ಕವರ್ ಡೆಕ್ ಮೇಲಿರುವ ಯೋಗ ಭವನದಲ್ಲಿ ಪತಂಜಲಿ ಯೋಗಕೂಟದ ವತಿಯಿಂದ ಶುಕ್ರವಾರ ೧೦ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ದಿನದ ೨೪ ಗಂಟೆಯಲ್ಲಿ ೧ ಗಂಟೆ ಯೋಗಾಭ್ಯಾಸದಿಂದ ಒತ್ತಡದ ಬದುಕಿನಿಂದ ಮುಕ್ತಿ ಮತ್ತು ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಕಾರ್ಯವನ್ನು ಮಾಡುತ್ತದೆ. ಯೋಗ ಮನಸ್ಸು ಹಾಗೂ ದೇಹವನ್ನು ಹತೋಟಿಯಲ್ಲಿಟ್ಟು, ಏಕಾಗ್ರತೆಯಿಂದ ಕಲಿಕೆ, ತನ್ಮಯತೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುಲು ಸಹಕರಿಸುತ್ತದೆ ಎಂದರು.ಪತಂಜಲಿ ಯೋಗಕೂಟದ ಹಿರಿಯರಾದ ಸತ್ಯನಾರಾಯಣಶೆಟ್ಟಿ, ಕರುಣಾಕರ, ಯೋಗಕೂಟದ ಅಧ್ಯಕ್ಷ ಎಚ್.ಎಸ್.ಲೋಕೇಶ್, ಎಂ.ಪಿ.ದಿನೇಶ್, ವಾಸುದೇವಮೂರ್ತಿ, ಪ್ರೇಮ ಮಂಜುನಾಥ್, ಡಾ.ಕೃಷ್ಣಮೂರ್ತಿ, ಶೈಲಜಾ ಕೆ.ಎಸ್., ಎಚ್.ಕೆ.ನರಸಿಂಹ, ಎಚ್.ಎಸ್.ದರ್ಶನ್, ಮಲ್ಲಿಕಾ ಲೋಕೇಶ್, ಸೌಮ್ಯ, ರೇಣುಕಾ, ಲತಾ, ಪ್ರಭ ಮಂಜುನಾಥ್, ಸುಮಾ, ಸುಜಾತ, ಪ್ರತಿಭಾ, ದೇವರಾಜು, ಯೋಗೇಶ್, ಸತ್ಯನಾರಾಯಣ, ಚಂದ್ರು ಇದ್ದರು.