ಬದುಕನ್ನು ಸಮತೋಲನದಲ್ಲಿರಿಸುವುದೇ ಯೋಗಸಾಧನೆ: ಸದ್ಗುರು ಶ್ರೀ ಮಧುಸೂಧನ ಸಾಯಿ

| Published : Aug 17 2025, 01:33 AM IST

ಬದುಕನ್ನು ಸಮತೋಲನದಲ್ಲಿರಿಸುವುದೇ ಯೋಗಸಾಧನೆ: ಸದ್ಗುರು ಶ್ರೀ ಮಧುಸೂಧನ ಸಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮ ಶತಾಬ್ಧಿಯನ್ನು 100 ದೇಶಗಳ ಸಹಭಾಗಿತ್ವದಲ್ಲಿ ಶತ ದಿನಗಳ ಸಾಂಸ್ಕೃತಿಕ ಉತ್ಸವವಾಗಿ ಆಚರಿಸುತ್ತಿರುವುದು ಭಗವಾನ್ ಶ್ರೀ ಸತ್ಯಸಾಯಿಬಾಬಾರ ಜೀವನ ಮತ್ತು ಜೀವಿತದ ಪುನರಾವಲೋಕನವಾಗಲಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಭಗವಾನ್ ಶ್ರೀ ಸತ್ಯಸಾಯಿಬಾಬಾರವರು ಮನುಕುಲ ಸಮನ್ವಯದ ರೂವಾರಿ. ಅವರು ಮಹಾನ್ ದಾರ್ಶನಿಕರಲ್ಲದೇ ಸಹಾನುಭೂತಿಯ ಮೂರ್ತ ಸ್ವರೂಪರಾಗಿದ್ದರು. ಅಂಥವರ ದಾರ್ಶನಿಕ ದೃಷ್ಟಿಕೋನವನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ. ಆ ದಾರ್ಶನಿಕ ದೃಷ್ಟಿಕೋನದ ಜಾಡಿನಲ್ಲಿ ಸಾಗಿದಾಗ ನಮ್ಮ ಬದುಕಿಗೆ ಬೇಕಾದ ಮಾರ್ಗದರ್ಶನ ದೊರೆಯುತ್ತದೆ ಎಂದು ಸದ್ಗುರು ಶ್ರೀ ಮಧುಸೂಧನ ಸಾಯಿ ಅವರು ತಿಳಿಸಿದರು.

ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಪ್ರೇಮಾಮೃತಂ ಸಭಾಭವನದಲ್ಲಿ ಭಗವಾನ್ ಶ್ರೀ ಸತ್ಯಸಾಯಿಬಾಬಾರವರ ಜನ್ಮ ಶತಾಬ್ಧಿ ನಿಮಿತ್ತ ಆಯೋಜನೆಗೊಂಡಿರುವ ಶತ ದಿನಗಳ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಸುಭದ್ರವಾದ ಜಗತ್ತಿಗೆ ಭದ್ರಬುನಾದಿ ಆಗಬೇಕಿದ್ದರೆ ನಮ್ಮೊಳಗೆ ಹಾರ್ದಿಕ ಸಾಮರಸ್ಯ ಬೆಳೆಯಬೇಕು. ಇದಕ್ಕೆ ನಾವು ಪರಸ್ಪರ ಮೌಲ್ಯಗಳ ವಿನಿಮಯ ಮಾಡಿಕೊಳ್ಳಬೇಕಾದ ‌ಅಗತ್ಯವಿದೆ. ಪರಿಸರದ ಜೊತೆಗೆ ನಾವು ಬೆರೆತು ಸಾಮರಸ್ಯದಿಂದ ಬದುಕಿದಾಗ ಬದುಕಿಗೊಂದು ಅರ್ಥ ದೊರೆಯುತ್ತದೆ. ಮಾನವನ ಬದುಕು ವೈವಿಧ್ಯತೆಯ ಆಗರ. ಅದನ್ನು ಸಮನ್ವಯಗೊಳಿಸುವುದೇ ಮಾನವೀಯತೆ. ಪ್ರತಿಯೊಂದು ಪ್ರಕ್ರಿಯೆಯನ್ನು ಹಿತಮಿತವಾಗಿ ಸಮತೋಲನದಲ್ಲಿ ಇಡುವುದೇ ಯೋಗ. ಯೋಗ ಸಾಧನೆಗೆ ತ್ಯಾಗದ ಲೇಪನ ಬೇಕು. ತ್ಯಾಗದಿಂದ ಪರಮ ಸಾನ್ನಿಧ್ಯ ಅತಿ ಸನಿಹವಾಗುತ್ತದೆ. ಎಲ್ಲಾ ವೈವಿಧ್ಯತೆಗಳನ್ನು ಸಮನ್ವಯಗೊಳಿಸಿ ಜಾಗತಿಕ ಏಕತೆಯನ್ನು ಸಾಧಿಸುವುದೇ ಜಾಗತಿಕ ಸಾಂಸ್ಕೃತಿಕ ಉತ್ಸವದ ಉದ್ದೇಶ ಎಂದರು.

ಸದ್ಗುರುಗಳೊಂದಿಗೆ ಸಾಂಸ್ಕೃತಿಕ ಉತ್ಸವದ ಲಾಂಛನವನ್ನು ಕರ್ಮಭೂಮಿ ಭಾರತ ಪ್ರತಿಷ್ಠಾನದ ಪದ್ಮಶ್ರೀ ಪುರಸ್ಕೃತ ಸುಬ್ರಹ್ಮಣ್ಯಂ ರಾಮ ದೊರೈ‌ ಬಿಡುಗಡೆಗೊಳಿಸಿ ಮಾತನಾಡಿ, ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ತಂತ್ರಜ್ಞಾನಗಳು ಬದಲಾವಣೆಯ ಬದುಕಿನಿಂದ ಆದ ಸ್ಥಿತ್ಯಂತರವನ್ನು ಸುಧಾರಿಸಿ ಮಾನವೀಯ ಸಂಬಂಧವನ್ನು ‌ಬೆಸೆಯುವ ಕಾರ್ಯ ಮಾಡಬಲ್ಲವು. ಭಾರತದ ತಾಂತ್ರಿಕತೆಯು ಜಾಗತಿಕ ಸಾಮರಸ್ಯಕ್ಕೆ ರಹದಾರಿಯೂ ಆಗಿದೆ. ಸಹಾನುಭೂತಿ ಮತ್ತು ಸಾಮರಸ್ಯಕ್ಕೆ ಭಾಷೆ ಮತ್ತು ಗಡಿಗಳ ಅಡಚಣೆ ಇಲ್ಲ. ಅದು ಹೃದಯದಿಂದ ಹೃದಯಕ್ಕೆ ಸಂವಹನಗೊಳ್ಳುವ ಸಾಮಾಜಿಕ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದರು.

ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಾದೇಶಿಕ ಕಚೇರಿಯ ಮಹೇಂದ್ರ ಮಾತನಾಡಿ, ವಿಶ್ವ ಸಾಂಸ್ಕೃತಿಕ ಉತ್ಸವವು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಶಕ್ತಿಗಳ ಮಹಾ ಮಿಲನವಾಗಿದೆ. ಈ ಉತ್ಸವ ಸಾಂಸ್ಕೃತಿಕ ಮೌಲ್ಯಗಳನ್ನು ವಿನಿಮಯ ಮಾಡಿಕೊಂಡು ಮನೋ ವೈಶಾಲ್ಯತೆಯನ್ನು ವ್ಯಾಪಕಗೊಳಿಸಲಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರದ ಕಲೆ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ವಿಡಿಯೋ ಸಂದೇಶದ ಮೂಲಕ ಸಾಂಸ್ಕೃತಿಕ ಉತ್ಸವಕ್ಕೆ ಶುಭ ಹಾರೈಸಿದರು.

ವಿಶ್ರಾಂತ ಕುಲಾಧಿಪತಿ ಡಾ. ಬಿ ಎನ್ ನರಸಿಂಹಮೂರ್ತಿ ಸಾಂಸ್ಕೃತಿಕ ಉತ್ಸವದ ದಿಕ್ಸೂಚಿ ಉಪನ್ಯಾಸಗೈದು, ಮಾನವ ಸಮಾಜದಲ್ಲಿ ಇರಲೇಬೇಕಾದ ಸಾಮರಸ್ಯದ ನೀತಿಯ‌ ಅಗತ್ಯವನ್ನು ಒತ್ತಿ ಹೇಳಿದರು.

ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಮಾಜಿ ಸಚಿವ ಡಾ.ಟಿ.ಬಿ.ಜಯಚಂದ್ರ ಮಾತನಾಡಿ, ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮ ಶತಾಬ್ಧಿಯನ್ನು 100 ದೇಶಗಳ ಸಹಭಾಗಿತ್ವದಲ್ಲಿ ಶತ ದಿನಗಳ ಸಾಂಸ್ಕೃತಿಕ ಉತ್ಸವವಾಗಿ ಆಚರಿಸುತ್ತಿರುವುದು ಭಗವಾನ್ ಶ್ರೀ ಸತ್ಯಸಾಯಿಬಾಬಾರ ಜೀವನ ಮತ್ತು ಜೀವಿತದ ಪುನರಾವಲೋಕನವಾಗಲಿದೆ. ಬಾಬಾರ ದಿವ್ಯ ಚೈತನ್ಯವು ನಮ್ಮೊಂದಿಗೆ ಇರುವ ಭಾವ ತೀವ್ರತೆಯನ್ನು ಉಂಟುಮಾಡುತ್ತದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ದೇಶ ವಿದೇಶಗಳ ಗಣ್ಯರು, ಅತಿಥಿಗಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ವಿಭಾಗಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಂಗೀತ ನೃತ್ಯ ಪ್ರದರ್ಶನದೊಂದಿಗೆ ಕಾರ್ಯಕ್ರಮ ಮುಂದುವರಿಯಿತು.