ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಒತ್ತಡ ರಹಿತ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಯೋಗಾಭ್ಯಾಸ ಅವಶ್ಯವಾಗಿದೆ ಎಂದು ಲೋಕಸಭಾ ಸದಸ್ಯ ಪಿ.ಸಿ.ಗದ್ದಿಗೌಡರ ಹೇಳಿದರು.

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯುಷ ಮಂತ್ರಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯೋಗವು ಭಾರತೀಯ ಪ್ರಾಚೀನ ಪರಂಪರೆಯ ಅಮೂಲ್ಯ ಕೊಡುಗೆಯಾಗಿದ್ದು, ಇದನ್ನು ಪ್ರಪಂಚಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜೂನ್ 21 ರಂದು ವಿಶ್ವ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಪ್ರತಿಯೊಬ್ಬರೂ ದಿನನಿತ್ಯ ಯೋಗವನ್ನು ಜೀವನಶೈಲಿಯ ಭಾಗವಾಗಿ ಮಾಡಿಕೊಂಡಾದ ಮಾತ್ರ ಉತ್ತಮ ಆರೋಗ್ಯದ ಜತೆಗೆ ಮಾನಸಿಕ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಚಿಕ್ಕಂದಿನಿಂದಲೇ ಯೋಗಭ್ಯಾಸವನ್ನು ರೂಪಿಸಿಕೊಳ್ಳಬೇಕು. ಆರೋಗ್ಯ ಚೆನ್ನಾಗಿದ್ದಾಗ ಮಾತ್ರ ದಿನನಿತ್ಯದ ಕಾರ್ಯ ಚಟುವಟಿಕೆಯಲ್ಲಿ ಲವಲವಿಕೆಯಿಂದ ಇರಲು ಸಾಧ್ಯ. ಚಿಕ್ಕಂದಿನಿಂದಲೇ ಯೋಗಾಭ್ಯಾಸ ಮಾಡುವುದರಿಂದ ಮುಪ್ಪಿನ ವಯಸ್ಸಿಯನ್ನಿಯೂ ಆರೋಗ್ಯದಿಂದ ಬದುಕಬಹುದಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಮಾತನಾಡಿ, ದೇಹ, ಮನಸ್ಸು ಹಾಗೂ ಆಧ್ಯಾತ್ಮಿಕ ಬದುಕನ್ನು ಒಗ್ಗೂಡಿಸಿಕೊಂಡು ಬದುಕು ಸಾಗಿಸುವಂತಹ ಕಲೆ ನಮ್ಮ ದೇಶದಲ್ಲಿ ಹುಟ್ಟಿಕೊಂಡಿದೆ. ಇದನ್ನು ಋಷಿ ಮುನಿಗಳು ಅಭ್ಯಾಸ ಮಾಡಿ ಸಾರ್ಥಕಗೊಳಿಸಿ ರೂಪಿಸಿದ ಬದುಕಿನ ಪದ್ದತಿಯನ್ನು ನಾವೆಲ್ಲರೂ ಅನುಸರಿಸುವಂತೆ ಮಾಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳು ವೈಚಾರಿಕ ದೃಷ್ಠಿಕೋನ ಇಟ್ಟುಕೊಂಡು ಯೋಗ ದಿನಾಚರಣೆ ಕಾರ್ಯಕ್ರಮ ಪ್ರಾರಂಭಿಸಿದ್ದಾರೆ ಎಂದರು. ಆರೋಗ್ಯ ಪೂರ್ಣ ಮನಸ್ಸು ಇರಬೇಕಾದರೆ ಆರೋಗ್ಯಯುತವಾದ ದೇಹ ಇರಲೇಬೇಕಾಗುತ್ತದೆ ಎಂದರು.


ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಜನ ಇಂದು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇಡೀ ಜಗತ್ತೇ ಯೋಗದ ಕಡೆ ಹೋಗುತ್ತಿದ್ದಾರೆ. ಅನೇಕ ರೋಗಗಳು ಯೋಗದಿಂದಲೇ ಕಡಿಮೆ ಆಗುತ್ತಿವೆ. ಅಲೋಪತಿಗೆ 200 ವರ್ಷಗಳ ಇತಿಹಾಸ ಇರಬಹುದು ಆದರೆ ಅದಕ್ಕೂ ಮುಂಚೆನೆ ಆಯೈವೇದ ಪ್ರಚಲಿತದಲ್ಲಿದೆ. ಯೋಗವು ದೈಹಿಕ ಆರೋಗ್ಯ ವೃದ್ದಿಸುವುದರ ಜತೆಗೆ ಮಾನಸಿಕ ನೆಮ್ಮದಿ, ಏಕಾಗ್ರತೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆದ್ದರಿಂದ ಪ್ರತಿದಿನ ಯೋಗಾಭ್ಯಾಸವನ್ನು ರೂಡಿಸಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರ ಸಂಗಪ್ಪ ಮಾತನಾಡಿ, ಯೋಗವು ವಿಶ್ವದಾದ್ಯಂತ ಆರೋಗ್ಯಕರ ಜೀವನಶೈಲಿಯ ಮಾರ್ಗವಾಗಿ ಗುರುತಿಸಿಕೊಂಡಿದ್ದು, ನಿಯಮಿತ ಯೋಗಾಭ್ಯಾಸದಿಂದ ಅನೇಕ ರೋಗಗಳನ್ನು ತಡೆಗಟ್ಟಲು ಸಾಧುವಾಗುತ್ತದೆ ಎಂದರು. ಪ್ರಾರಂಭದಲ್ಲಿ ಜಿಲ್ಲಾ ಆಯುಷ ಅಧಿಕಾರಿ ಡಾ.ಎಸ್.ಜಿ.ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಸಾಮೂಹಿಕ ಯೋಗಾಭ್ಯಾಸ ಮಾಡಿಸಲಾಯಿತು. ಶಿರೂರಿನ ವಿಜಯ ಮಹಾಂತ ತೀರ್ಥದ ಡಾ.ಬಸವಲಿಂಗ ಶ್ರೀಗಳು ಸಾನಿಧ್ಯ ವಹಿಸಿ, ಯೋಗದ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಜಿ.ಪಂ ಸಿಇಒ ಗಜಾನನ ಬಾಲೆ, ಉಪ ಅರಣ್ಯ ಸಂರಕ್ಷಾಧಿಕಾರಿ ಸ್ವಪ್ನಿಲ್ ಅಹಿರೇ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ ಡಿ.ಎನ್, ತಹಸೀಲ್ದಾರ್ ವಾಸುದೇವ ಸ್ವಾಮಿ, ಕ್ರೀಡಾ ಇಲಾಖೆಯ ಸಹಾಯಕ ನಿಏರ್ಶಕ ಗುರುಪಾದ ಡೂಗನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.